ಉತ್ಪಾದಕತೆ: ಈ ಶಬ್ದವನ್ನು (ಪ್ರೊಡಕ್ಟಿವಿಟಿ) ಮುಖ್ಯವಾಗಿ ಮೂರು ಅರ್ಥಗಳಲ್ಲಿ ಬಳಸಲಾಗಿದೆ: 1. ಒಂದು ಗೊತ್ತಾದ ಕಾಲಾವಧಿಯಲ್ಲಿ ಉತ್ಪಾದನಾಂಗವೊಂದರಿಂದ ಆದ ಉತ್ಪಾದನೆಯ ಮೊತ್ತ; 2. ಉತ್ಪಾದೀಸಾಧನಗಳ ಬಳಕೆಯ ಸಮರ್ಥತೆ; 3. ಒಂದು ಗೊತ್ತಾದಕಾಲಾವಧಿಯಲ್ಲಿ ಉತ್ಪಾದನೆಗಾಗಿ ಬಳಸಲಾದ ಭೌತ ಸಾಧನಗಳಿಗೂ ಉತ್ಪನ್ನ ಘಟಕಗಳಿಗೂ ಇರುವ ಸಂಬಂಧ, ಶ್ರಮಕ್ಕೆ (ಲೇಬರ್) ಸಂಬಂಧಿಸಿದಂತೆ ಸಾಮಾನ್ಯವಾಗಿ ಈ ಶಬ್ದ ಹೆಚ್ಚು ಬಳಕೆಯಲ್ಲಿದೆ. ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆ ಇವು ಉತ್ಪಾದನೆಯ ಅಂಗಗಳು. ಒಂದು ದೇಶದ ಉತ್ಪನ್ನಕ್ಕೆ ಈ ಉತ್ಪಾದನಾಂಗಗಳ ಉತ್ಪಾದನ ಶಕ್ತಿಯೇ ಆಧಾರ. ಭೂಮಿಯ ಉತ್ಪಾದಕತೆಗೆ ಮಣ್ಣಿನ ಗುಣ, ಯಂತ್ರೋಪಕರಣಗಳ ಉಪಯೋಗ, ರಾಸಾಯನಿಕ ಗೊಬ್ಬರ, ಉತ್ತಮ ಬೀಜ ಮತ್ತು ಸಾಲದ ಪೂರೈಕೆ, ತಾಂತ್ರಿಕ ನೆರವು-ಮೊದಲಾದವು ಮುಖ್ಯ. ಸರಿಯಾದ ಪ್ರಮಾಣದಲ್ಲಿ ಈ ವಸ್ತುಗಳ ಪೂರೈಕೆಯಾಗದಿದ್ದರೆ ಭೂಮಿಯ ಉತ್ಪಾದಕತೆ ಕಡಿಮೆಯಾಗುತ್ತದೆ. ಕಾರ್ಮಿಕರ ಉತ್ಪಾದನೆಯ ಕಾರ್ಯಕ್ಷಮತೆಗೆ ಅವರು ಸೇವಿಸುವ ದೈನಂದಿನ ಆಹಾರ, ಕೂಲಿಯ ಪ್ರಮಾಣ, ದುಡಿತದ ಅವಧಿ, ವಿಶ್ರಾಂತಿ, ಯಂತ್ರಸಾಮಗ್ರಿಯ ಗುಣ, ಕಾರ್ಖಾನೆಯ ವಾತಾವರಣ, ಮಾಲೀಕ-ಕಾರ್ಮಿಕ ಸಂಬಂಧ ಮೊದಲಾದುವು ನೇರಸಂಬಂಧ ಹೊಂದಿವೆ. ಬಂಡವಾಳದ ಗಾತ್ರ ಹಾಗೂ ಗುಣಗಳು ಒಂದು ಉದ್ಯಮದ ಉತ್ಪಾದನೆಯ ಮೊತ್ತ ನಿರ್ಧಾರಕ. ಆಧುನಿಕ ಉಪಕರಣಗಳ ಸಂಗ್ರಹ ಹೆಚ್ಚಿದಾಗ ಉತ್ಪಾದನೆಯ ಮಟ್ಟ ಹೆಚ್ಚಬಹುದು. ಈ ಮೂರು ಉತ್ಪಾದನಾಂಗಗಳನ್ನೂ ಸರಿಯಾದ ಪ್ರಮಾಣದಲ್ಲಿ ಸಂಘಟಿಸಿ ಉತ್ಪಾದಕತೆ ಯನ್ನು ಹೆಚ್ಚಿಸಲು ಉದ್ಯಮಿಗಳು ಯಾವಾಗಲೂ ಪ್ರಯತ್ನಿಸುತ್ತಾರೆ.

18ನೆಯ ಶತಮಾನದ ಫ್ರೆಂಚ್ ಅರ್ಥಶಾಸ್ತ್ರಜ್ಞರೂ ಆಡಮ್ ಸ್ಮಿತ್, ರಿಕಾರ್ಡೋ ಮುಂತಾದವರೂ ಕೃಷಿ ಕ್ಷೇತ್ರದಲ್ಲಿ ದುಡಿಯುವವರು ಮಾತ್ರ ಉತ್ಪಾದೀಶ್ರಮಿಗಳೆಂದೂ ಉಳಿದವರು ಅನುತ್ಪಾದಿಗಳೆಂದೂ ಭಾವಿಸಿದ್ದರು. (ನೋಡಿ-ಉತ್ಪಾದೀ-ಶ್ರಮ) ಈಗ ಈ ತೆರದ ಅಂತರವಿಲ್ಲ. ಬೇಡಿಕೆಯನ್ನು ಪುರೈಸುವ ದೃಷ್ಟಿಯಿಂದ ವಿನಿಯೋಗಿಸಿದ ಎಲ್ಲ ತೆರದ ಶ್ರಮವೂ ಉತ್ಪಾದಿಯೆ.

ಉತ್ಪಾದನಾಂಗಗಳ ಬೇಡಿಕೆಯ ಪ್ರಮಾಣ ಆಯಾ ಅಂಗಗಳ ಉತ್ಪಾದಕತೆಯನ್ನ ವಲಂಬಿಸಿದೆ. ಶ್ರಮದ ಉತ್ಪಾದಕತೆಗಿಂತ ಬಂಡವಾಳದ ಉತ್ಪಾದಕತೆ ಹೆಚ್ಚಿದ್ದಾಗ, ಉದ್ಯಮಿಗಳು ಹೆಚ್ಚು ಲಾಭ ದೃಷ್ಟಿಯಿಂದ ಬಂಡವಾಳದ ಪ್ರಮಾಣ ಹೆಚ್ಚಿಸಬಹುದು. ಉತ್ಪಾದನಾಂಗಗಳ ಬೆಲೆಗಳನ್ನು ನಿರ್ಧರಿಸುವಾಗ ಅವುಗಳ ಉತ್ಪಾದಕತೆಯನ್ನು ಕಂಡುಹಿಡಿಯಬೇಕಾಗುತ್ತದೆ. ಕಾರ್ಮಿಕರ ಕೂಲಿಯ ಪ್ರಮಾಣ ಅವರ ಉತ್ಪಾದಕತೆಯನ್ನೂ ನಿರ್ಣಯಿಸಬಲ್ಲುದು. ಉತ್ಪಾದಕತೆ ಮತ್ತು ವೇತನ ಪ್ರಮಾಣಗಳಿಗೆ ನಿಕಟ ಸಂಬಂಧ ಉಂಟು. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಕಡಿಮೆ ಕೂಲಿಯ ಪ್ರಮಾಣ ಕಡಿಮೆ ಉತ್ಪಾದಕತೆಯ ಪರಿಣಾಮ ದಿಂದಿರಬಹುದು, ಇಲ್ಲವೆ ಅದು ಕಡಿಮೆ ಪ್ರಮಾಣದ ಉತ್ಪಾದಕತೆಗೆ ಕಾರಣವೂ ಆಗಿರಬಹುದು. ಉತ್ಪಾದನೆಯ ನಾನಾ ಅಂಗಗಳ ಸೇವೆಗಳನ್ನು ಕೊಳ್ಳುವ ಉದ್ಯಮಿಯ ಗುರಿ ಲಾಭವಾದ್ದರಿಂದ ಆತ ಅವಕ್ಕೆ ಉಚಿತವಾದ ಬೆಲೆಯನ್ನಷ್ಟೇ ಕೊಡಲು ಸಿದ್ಧನಾಗಿರುತ್ತಾನೆ. ಒಂದು ಉತ್ಪಾದ ನಾಂಗದ ಅಂಚಿನ ಘಟಕದ (ಕೊನೆಯ ಘಟಕದ) ಉತ್ಪಾದಕತೆ ಎಷ್ಟೊ ಅದಕ್ಕಿಂತ ಹೆಚ್ಚಾಗಿ ಆತ ಕೊಡುವುದಿಲ್ಲ. ಆದ್ದರಿಂದ ಆಯಾ ಅಂಗಗಳ ಅಂಚಿನ ಘಟಕಗಳ ಉತ್ಪಾದ ಕತೆಯ ಮೌಲ್ಯವೇ ಆಯಾ ಅಂಗಗಳ ಬೆಲೆಯೆನ್ನಬಹುದು. ವಾನ್ ಥ್ಯುನೆನ್, ವಿಕ್ಟಿಸ್ಪೀಡ್, ಹಿಕ್ಸ್‌ ಮೊದಲಾದ ಅರ್ಥಶಾಸ್ತ್ರಜ್ಞರು ಈ ಅಂಚಿನ ಉತ್ಪಾದಕತೆಯ ಸೂತ್ರವನ್ನು ಪ್ರತಿಪಾದಿಸಿ ದ್ದಾರೆ. ಚೇಂಬರಲಿನ್ ಮತ್ತು ಜೋನ್ ರಾಬಿನ್ಸನ್ನರ ಪ್ರಕಾರ ಉತ್ಪಾದನಾಂಗದ ಬೆಲೆ, ಅಂಚಿನ ಉತ್ಪನ್ನದಿಂದ ಒಟ್ಟು ಉತ್ಪನ್ನದ ಮಾರಾಟದ ಹುಟ್ಟುವಳಿಯಲ್ಲಾಗುವ ಹೆಚ್ಚಳಕ್ಕೆ ಸಮನಾಗಿರುತ್ತದೆ. ಒಂದು ಉತ್ಪಾದನಾಂಗದ ಉತ್ಪಾದಕತೆಯನ್ನು ನಿರ್ಣಯಿಸುವಾಗ ಸಹಾಯಕ ಅಂಗಗಳ ಪ್ರಮಾಣವನ್ನು ಸ್ಥಿರವಾಗಿಟ್ಟುಕೊಳ್ಳಬೇಕು. ಆ ಅಂಗದ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆದಾಗ ಒಟ್ಟು ಉತ್ಪಾದನೆಯೂ ಹೆಚ್ಚೋ ಕಡಿಮೆಯೋ ಆಗುತ್ತದೆ.
ಅಪರಿಪೂರ್ಣ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಉತ್ಪಾದನಾಂಗದ ಬೆಲೆ ಅದರ ಅಂಚಿನ ಉತ್ಪಾದನೆಯ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಉತ್ಪಾದನಾಂಗಗಳಲ್ಲೊಂದಾದ ಶ್ರಮದ ಅಂಚಿನ ಉತ್ಪಾದಕತೆಗೆ ಅನುಗುಣವಾಗಿ ಕಾರ್ಮಿಕರಿಗೆ ಕೂಲಿ ಸಲ್ಲದೆ ಹೋದಾಗ ಕಾರ್ಮಿಕರು ಸಂಘಟಿತರಾಗಿ ತಮ್ಮ ಕೂಲಿಯ ಮಟ್ಟವನ್ನು ಉತ್ಪಾದಕತೆಯ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಾರೆ. ಸಂಧಾನದ ಮೂಲಕ ಇದು ಸಾಧ್ಯವಾಗದಿದ್ದಾಗ ಅವರು ಇತರ ಕ್ರಮಗಳನ್ನುನುಸರಿಸಬಹುದು.

ಉತ್ಪಾದನಾಂಗಗಳ ಪೂರೈಕೆಯ ಪ್ರಮಾಣ ಕಡಿಮೆ ಇರುವುದರಿಂದ ಅವುಗಳ ಅಂಚಿನ ಉತ್ಪಾದಕತೆ ಎಲ್ಲ ಉದ್ಯಮಗಳಲ್ಲೂ ಸಮನಾಗಿರುವ ರೀತಿಯಲ್ಲಿ ಈ ಅಂಗಗಳ ವಿತರಣೆಯಾಗುತ್ತದೆ. ಈ ತರದ ವಿತರಣೆ ಪರಿಪೂರ್ಣ ಮೇಲಾಟದ ವಾತಾವರಣದಲ್ಲಿ ಮಾತ್ರ ಸಾಧ್ಯ. ಸಾಮಾಜಿಕಸೇವೆ, ಆರೋಗ್ಯ, ಶಿಕ್ಷಣ, ಮೊದಲಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ಪಾದಕ ವಸ್ತುಗಳ ಅಂಚಿನ ಉತ್ಪಾದಕತೆಯನ್ನು ಅಳೆಯುವುದು ಕಷ್ಟ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಕ್ಷೇತ್ರಗಳು ಪ್ರಮುಖವಾಗಿದ್ದು, ರಾಷ್ಟ್ರೀಯ ಉತ್ಪನ್ನವನ್ನು ಆಯಾ ಉತ್ಪಾದನಾಂಗಗಳಲ್ಲಿ ವಿತರಣೆ ಮಾಡುವುದೊಂದು ದೊಡ್ಡ ಸಮಸ್ಯೆ. ಪಾಶ್ಚಾತ್ಯ ದೇಶಗಳಲ್ಲಿ ಉತ್ಪಾದನೆಯ ಮಟ್ಟವನ್ನು ಅಳೆಯುವ ಪ್ರಯತ್ನ ನಡೆದಿದೆ.	(ಎಸ್.ಜಿ.ಕೆ.)

ಉತ್ಪಾದಕರ ಸಹಕಾರ ಸಂಘ

ಉತ್ಪಾದನೆ ಮಾರಾಟಗಳಲ್ಲಿ ಪರಸ್ಪರ ಸಹಕರಿಸಿ, ವ್ಯಾಪಾರದಿಂದ ಬಂದ ಲಾಭವನ್ನು ಸದಸ್ಯರಾದ ತಂತಮ್ಮಲ್ಲೇ ಹಂಚಿಕೊಳ್ಳುವ ಉದ್ದೇಶದಿಂದ ಉತ್ಪಾದಕರು ಸೇರಿ ರಚಿಸಿಕೊಂಡ ಸಂಘ. ಬಂಡವಾಳವಾದೀ ಉತ್ಪಾದನ-ವಿತರಣ ವ್ಯವಸ್ಥೆಯಲ್ಲಿರುವ ಕೆಲವು ನ್ಯೂನತೆಗಳನ್ನು ನಿವಾರಿಸುವುದು ಇದರ ಮೂಲೋದ್ದೇಶ. ಬಂಡವಾಳವಾದೀ ವ್ಯವಸ್ಥೆಯಲ್ಲಿ ಶ್ರಮವೆಂಬುದು ಬಾಡಿಗೆಗೆ ದೊರಕುವ ಒಂದು ಪದಾರ್ಥ. ಅನೇಕ ವೇಳೆ ಇದಕ್ಕೆ ಕನಿಷ್ಠ ವೇತನವೂ ದೊರಕುವುದಿಲ್ಲ. ಸಾಮಾನ್ಯವಾಗಿ ಬೇಡಿಕೆ ಹಾಗೂ ಸರಬರಾಜುಗಳ ಅಧಾರದ ಮೇಲೆ ಇದರ ಬೆಲೆಯ ನಿರ್ಣಯವಾಗುತ್ತದೆ. ಸ್ವಾರ್ಥಮೂಲವಾದ ಈ ಬಗೆಯ ಮಾಲೀಕ-ಕಾರ್ಮಿಕ ಸಂಬಂಧವನ್ನು ನಿವಾರಿಸುವುದೇ ಉತ್ಪಾದಕರ ಸಹಕಾರ ಸಂಘದ ಅಂತಿಮೋದ್ದೇಶ. ಇದು ಉದ್ಯಮ ಚಾಲಕನನ್ನು (ಆಂಟ್ರಪ್ರನರ್) ನಿವಾರಿಸಿ, ಆತನಿಗೆ ಹೋಗಬಹುದಾಗಿದ್ದ ಲಾಭವನ್ನು ತಾನೇ ಅನುಭವಿಸುತ್ತದೆ. ಉತ್ಪಾದನೆಯ ಮೇಲೆ ಹತೋಟಿ ಹೊಂದಿರುವ ವರ್ಗವನ್ನೇ ಅಂತಿಮವಾಗಿ ತೊಡೆದು ಹಾಕುವುದು ಉತ್ಪಾದಕರ ಸಹಕಾರ ಚಳವಳಿಯ ಗುರಿ. ಕಾರ್ಮಿಕರೋ, ಅನುಭೋಗಿಗಳೋ ಅಥವಾ ಇಬ್ಬರೂ ಕೂಡಿಯೋ ನಿರ್ವಹಿಸಿ, ಲಾಭ ಹಂಚಿಕೊಳ್ಳುವ ಈ ವ್ಯವಸ್ಥೆಯಲ್ಲಿ ನಿಮಗೆ ನೀವೇ ಉತ್ಪಾದಕ ಎಂದು ರಾಬರ್ಟ್ ಓವೆನ್ ಇದನ್ನು ಬಣ್ಣಿಸುತ್ತಾನೆ.

ಉತ್ಪಾದಕರ ಸಹಕಾರ ಸಂಘವನ್ನು ಸಹಕಾರಿಗಳಲ್ಲೇ ಒಬ್ಬ ನಡೆಸುತ್ತಾನೆ. ಆತನ ಸೇವೆಗೆ ಪ್ರತಿಯಾಗಿ ಅವನಿಗೆ ಸಂಬಳ ದೊರಕುತ್ತದೆ. ಅದರೊಂದಿಗೆ ಆತ ಆ ಸಂಘದ ಬಂಡವಾಳಕ್ಕಾಗಿ ನೀಡಿರುವ ಹಣಕ್ಕೆ ಅನುಗುಣವಾಗಿ ಅವನು ಸಹಸದಸ್ಯರೊಂದಿಗೆ ಅದರ ಲಾಭವನ್ನೂ ಹಂಚಿಕೊಳ್ಳುತ್ತಾನೆ.

ಬಂಡವಾಳ ವ್ಯವಸ್ಥೆ ಹಸ್ತಕ್ಷೇಪರಹಿತ ನೀತಿಯ ಪ್ರಭಾವಕ್ಕೆ ಒಳಗಾಗಿದ್ದ ಕಾಲದಲ್ಲಿ, ಸರ್ಕಾರ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಪ್ರಜೆಗಳ ಆರ್ಥಿಕ ವಿಚಾರಗಳಲ್ಲಿ ಕೈಹಾಕುತ್ತಿದ್ದಾಗ, ಎಂದರೆ ಬಂಡವಾಳ ವ್ಯವಸ್ಥೆಯ ಆರಂಭದೆಶೆಯಲ್ಲಿ, ಉತ್ಪಾದಕರ ಸಹಕಾರ ಚಳವಳಿಗೆ ಪ್ರೋತ್ಸಾಹ ದೊರಕಿತು. 1834ರಲ್ಲಿ ಬ್ರಿಟನ್ನಿನಲ್ಲಿ ರಾಬರ್ಟ್ ಓವೆನ್ ಮನೆಕಟ್ಟುವವರ ರಾಷ್ಟ್ರೀಯ ಸಂಘ ಸ್ಥಾಪಿಸಿದ. ಸಹಕಾರಿ ಕಾರ್ಯಶಾಲೆಗಳ ಸ್ವಾಮ್ಯ ಹೊಂದಿದ್ದ ಇಂಥ ಉತ್ಪಾದಕರ ಸಹಕಾರ ಸಂಘಗಳು ಐರೋಪ್ಯ ದೇಶಗಳಲ್ಲೂ ಸ್ಥಾಪಿತವಾದುವು. 1890ರ ವೇಳೆಗೆ ಇಟಲಿ, ಫ್ರಾನ್ಸ್‌ಗಳ ವಿನಾ ಇತರ ದೇಶಗಳಲ್ಲಿ ಈ ಚಳವಳಿಗೆ ಸೋಲಾಯಿತು.
ಉತ್ಪಾದಕರ ಸಹಕಾರ ವ್ಯವಸ್ಥೆ ಅವ್ಯವಹಾರ್ಯ ಆದರ್ಶ ಚಳವಳಿಯೆಂಬುದು ಸ್ಪಷ್ಟ. ಎಲ್ಲಿ ಅಗಾಧ ಬಂಡವಾಳದ ಅಗತ್ಯವಿದೆಯೋ, ಎಲ್ಲಿ ತಾಂತ್ರಿಕ ಬದಲಾವಣೆ ಶೀಘ್ರಗತಿಯಲ್ಲಿ ಸಂಭವಿಸುವುವೋ ಅಂಥ ಎಡೆಗಳಲ್ಲಿ ಸಹಕಾರತತ್ತ್ವ ಯಶಸ್ವಿಯಾಗಲಾರದು. ಈ ಚಳವಳಿ ಹೆಚ್ಚು ಬಂಡವಾಳ ಶೇಖರಿಸಲಾರದಾದ್ದರಿಂದ ಇದು ಸಂಶೋಧನೆಯ ಫಲಿತವಾದ ಅತ್ಯಂತ ನವೀನ ತಂತ್ರಜ್ಞಾನದ ಪ್ರಯೋಜನ ಪಡೆಯಲಾರದು. ಉತ್ಪಾದನೆಯಲ್ಲಿ ಯಾರ ಸಾಮರ್ಥ್ಯವೂ, ಮುನ್ನೋಟವೂ ಪ್ರಮುಖ ಅಂಶಗಳಾಗಿವೆಯೊ ಅಂಥ ವ್ಯವಸ್ಥಾಪಕರಿಗೆ ಹಾಗೂ ಸಂಘಟಕರಿಗೆ ಸೂಕ್ತ ಸಂಭಾವನೆ ನೀಡಲಾರದು. ಅಲ್ಲದೆ, ಗ್ರಾಹಕರ ಸಹಕಾರ, ಮಾರಾಟದ ಸಹಕಾರ ಮುಂತಾದ ಇತರ ಸಹಕಾರ ಚಳವಳಿಗಳಂತೆ ಇದಕ್ಕೂ ಸಹಕಾರದ ಆದರ್ಶಗಳ ಬಗ್ಗೆ ಉತ್ಸಾಹವುಳ್ಳ ಜನರ ಅಗತ್ಯವುಂಟು. ಸ್ವಸಹಾಯ, ಮಿತವ್ಯಯ, ಸಹೋದರ ಭಾವ-ಮುಂತಾಗಿ ಒಬ್ಬನನ್ನು ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಮಾನವೀಯ ಗುಣಗಳು ಇವರಲ್ಲಿ ಇರಬೇಕು. ಉತ್ಪಾದಕರ ಸಹಕಾರವೇ ಆಗಲಿ, ಗ್ರಾಹಕರ ಸಹಕಾರವೇ ಆಗಲಿ, ಪ್ರತಿಯೊಂದು ಬಗೆಯ ಸಹಕಾರಕ್ಕೂ ಶಿಕ್ಷಣ ಅಗತ್ಯ, ಸ್ವಾರ್ಥತ್ಯಾಗದ ಮನೋಭಾವ ಇರಬೇಕು. ಆಧುನಿಕ ಸಂಗ್ರಹಣಶೀಲ ಸಮಾಜದಲ್ಲಿ ಈ ಮುಖ್ಯ ಗುಣಗಳೇ ಇಲ್ಲವಾಗಿವೆ. ಆರಂಭಕಾಲದಲ್ಲಿ ಪ್ರಚಾರಕರ ಉತ್ಸಾಹದಿಂದ ಮೊದಲಾದ ಈ ಚಳವಳಿ ಕ್ರಮೇಣ ವ್ಯವಹಾರ ಸಂಘಟನೆಯ ಇನ್ನೊಂದು ಪ್ರಕಾರವಾಗಿ ಪರಿವರ್ತನೆಗೊಂಡಿತು. ಸ್ವಾರ್ಥ ಹಿತಾಸಕ್ತಿಗಳು ಇದರೊಳಕ್ಕೂ ನುಸುಳಿಕೊಂಡುವು.

ಇಟಲಿ ಹಾಗೂ ಫ್ರಾನ್ಸ್‌ಗಳಲ್ಲಿ ಮಾತ್ರ ಈ ಚಳವಳಿ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ಏಕೆಂದರೆ ಈ ದೇಶಗಳ ಸರ್ಕಾರಗಳು ಸಣ ಪ್ರಮಾಣದ ಉದ್ಯಮಗಳಿಗೆ ಪೋಷಣೆ ನೀಡಿದುವು, ಅವಕ್ಕೆ ಧನಸಹಾಯ ನೀಡಿದುವು. ಬಂಡವಾಳಿಗ ಸ್ಪರ್ಧಿಗಳನ್ನೆದುರಿಸುವಂತೆ ಅವುಗಳಿಗೆ ಸಾಲದ ಸೌಲಭ್ಯವನ್ನೂ, ಮಾರಾಟದ ಸವಲತ್ತುಗಳನ್ನು ದೊರಕಿಸುವ ಭರವಸೆ ನೀಡಿದುವು. ಸರ್ಕಾರದ ಒತ್ತಾಸೆ ಇಲ್ಲದ ಇತರ ದೇಶಗಳಲ್ಲಿ ಗ್ರಾಹಕರ ಸಹಕಾರಕ್ಕೆ ಈ ಚಳವಳಿ ಎಡೆಮಾಡಿಕೊಟ್ಟಿತು; ಇಲ್ಲಿ ಗ್ರಾಹಕರ ಸಹಕಾರವೇ ಉತ್ಪಾದನೆಯ ಕಾರ್ಯಗಳಲ್ಲೂ ತೊಡಗಿತು.
ಬಂಡವಾಳ ವ್ಯವಸ್ಥೆಯಲ್ಲಿ ಬಂಡವಾಳಿಗನ ವಿರುದ್ಧವಾಗಿ ಹೂಡಿದ ಚಳವಳಿಯೇ ಉತ್ಪಾದಕರ ಸಹಕಾರ. ಸರ್ಕಾರೀ ಉದ್ಯಮ ಸಂಘಟನೆಯೂ ಸರ್ಕಾರೀ ಕ್ಷೇತ್ರವೂ ಅತ್ಯಂತ ಪ್ರಧಾನ ಪಾತ್ರ ವಹಿಸುತ್ತಿರುವ ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ಈ ಚಳವಳಿಯ ಪ್ರಾಮುಖ್ಯ ನಷ್ಟವಾಗಿದೆ. ಉತ್ಪಾದಕರ ಸಹಕಾರದ ಭವಿಷ್ಯ ಇರುವುದು ಕೈಗಾರಿಕಾ ಸಹಕಾರ ಸಂಘಗಳಲ್ಲಿ ಮಾತ್ರ ; ಸಹಕಾರೀಕ್ಷೇತ್ರದಲ್ಲಿ ಗುಡಿಸಲು ಕೈಗಾರಿಕೆ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸಂಘಟಿಸುವುದೇ ಉದ್ದೇಶವಾದ ಈ ಬಗೆಯ ಸಹಕಾರ ಸಂಘಗಳಿಗೆ ಕಡಿಮೆ ಬಂಡವಾಳ ಸಾಕು; ಇವುಗಳಲ್ಲಿ ಕಾರ್ಮಿಕರ ನೈಪುಣ್ಯವೂ ಅವಧಾನವೂ ಅಧಿಕವಾಗಿ ಬೇಕು. ಇವು ದೊಡ್ಡ ಕೈಗಾರಿಕೆಗಳಿಗೆ ಸಹಾಯಕಗಳಾಗಿ ಕಾರ್ಯ ನಡೆಸಬಹುದು. ಭಾರತದಂಥ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇವು ಬಹುಮಟ್ಟಿಗೆ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬಲ್ಲುವು.	(ಜೆ.ಕೆ.ಐ.)

ಉತ್ಪಾದನ ಗಣತಿ
ಉತ್ಪಾದನೆಯ ಘಟಕಗಳ ಎಣಿಕೆ (ಸೆನ್ಸಸ್ ಆಫ್ ಪ್ರೊಡಕ್ಷನ್). ಉತ್ಪಾದನೆಯ ಗಣತಿಯೂ ಜನಗಣತಿಯಂತೆಯೇ ಎಂದು ಹೇಳಬಹುದಾದರೂ ಇವೆರಡಕ್ಕೂ ವ್ಯತ್ಯಾಸಗಳುಂಟು. ಎಲ್ಲ ಕಾಲ ದೇಶಗಳಲ್ಲೂ ಜನಗಣತಿ ಒಂದೇ ತರಹ. ಏಕೆಂದರೆ ಎಣಿಕೆಗೆ ಒಳಗಾದ ಘಟಕವನ್ನು ಸುಲಭವಾಗಿ ಗುರುತಿಸಬಹುದು; ಅದು ಸುಲಭವಾಗಿ ವ್ಯಾಖ್ಯೆಗೆ ಸಿಗುವಂಥದು. ಆದರೆ ಇದು ಹಾಗಲ್ಲ. ಎಣಿಕೆಗೆ ಒಳಪಡಿಸಬೇಕಾದ ಉತ್ಪಾದನ ಘಟಕ ಯಾವುದು ಎಂಬುದನ್ನು ನಿರ್ಣಯಿಸುವುದು ಬಲುಕಷ್ಟ. ಜನಗಣತಿಯ ಉದ್ದೇಶ ಹೆಚ್ಚು ಸರಳ, ನೇರ. ಉತ್ಪಾದನೆಯ ಗಣತಿಯ ಉದ್ದೇಶದ ವ್ಯಾಖ್ಯೆ ಕಠಿನತರ, ಭಿನ್ನ ಭಿನ್ನವೂ ಹೌದು. ಉತ್ಪಾದನೆಯನ್ನು ಕುರಿತ ಭಾವನೆಗಳೂ ಕಾಲದಿಂದ ಕಾಲಕ್ಕೆ ಬದಲಾಗುತ್ತಿವೆ. 18ನೆಯ ಶತಮಾನದ ಫ್ರೆಂಚ್ ಪ್ರಕೃತಿ ಪ್ರಾಧಾನ್ಯವಾದಿಗಳ ದೃಷ್ಟಿಯಲ್ಲಿ ವ್ಯವಸಾಯೋತ್ಪಾದನೆಯೊಂದೇ ನಿಜವಾದ ಉತ್ಪಾದನೆ. ಆದರೆ ಇಂದಿನ ದೃಷ್ಟಿ ತುಂಬ ವಿಶಾಲ. ಕಮ್ಯೂನಿಸ್ಟ್‌ ವ್ಯವಸ್ಥೆಯಲ್ಲೂ ಬಂಡವಾಳವಾದಿ ವ್ಯವಸ್ಥೆಯಲ್ಲೂ ಉತ್ಪಾದನೆಯ ಮೊತ್ತದ ಬಗ್ಗೆ ಭಿನ್ನ ಕಲ್ಪನೆಗಳಿವೆ.

ಗಣತಿಯೆಂಬುದು ವ್ಯಾಪಕಾರ್ಥವುಳ್ಳ ಪದ. ಗಣತಿ ಮಾಡಲು ಒಂದು ದೇಶ ಅಥವಾ ಪ್ರದೇಶವನ್ನು ಇಡಿಯಾಗಿ ಗಣನೆಗೆ ತೆಗೆದುಕೊಳ್ಳಬೇಕಾದದ್ದು ಅವಶ್ಯ. ಅಲ್ಲಿನ ಒಟ್ಟು ಉತ್ಪಾದನೆಯ ಲೆಕ್ಕ ತೆಗೆದುಕೊಂಡಾಗಲೇ ಉತ್ಪಾದನ ಗಣತಿ ಸಮಗ್ರವೆನಿಸಿಕೊಳ್ಳುತ್ತದೆ. ವ್ಯವಸಾಯ ಗಣತಿ, ಕೈಗಾರಿಕೆಯ ಹಾಗೂ ಗಣಿ ಉದ್ಯಮದ ಗಣತಿ, ವಿತರಣೆಯ ಗಣತಿ ಅಥವಾ ವ್ಯವಹಾರ ಗಣತಿ-ಎಂದು ಬೇರೆ ಬೇರೆ ವಿಭಾಗಗಳಲ್ಲಿ ಉತ್ಪಾದಕ ಘಟಕಗಳ ಎಣಿಕೆ ಮಾಡುವುದು ಆಧುನಿಕ ಪದ್ಧತಿ.

ಉತ್ಪಾದನ ಗಣತಿಯ ಬಗ್ಗೆ ಸಮಗ್ರ ಧೋರಣೆ ತಳೆದ ಮೊದಲ ರಾಷ್ಟ್ರವೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನಗಳು. ಮೊದಲ ಬಾರಿಗೆ ಅಲ್ಲಿನ ಕಾಂಗ್ರೆಸ್ಸು ಈ ಬಗ್ಗೆ ಕ್ರಮ ಕೈಗೊಂಡಿದ್ದು 1810ರಲ್ಲಿ. ಜನಗಣತಿಯ ಅಧಿಕಾರಿಗಳು ತಂತಮ್ಮ ಜಿಲ್ಲೆ, ಪ್ರದೇಶ ಮತ್ತು ವಿಭಾಗಗಳಲ್ಲಿನ ತಯಾರಿಕಾಸಂಸ್ಥೆಗಳ ಮತ್ತು ಅವುಗಳ ತಯಾರಿಕೆಗಳ ಲೆಕ್ಕ ತೆಗೆಯ ಬೇಕೆಂಬ ಉದ್ದೇಶಕ್ಕೆ ಅನುಸಾರವಾಗಿ ಮುಂದೆ (1818) ಒಂದು ಪ್ರಶ್ನಾವಳಿ ಸಿದ್ಧವಾಯಿತು. ತಯಾರಿಕೆಯ ಸ್ವರೂಪ, ಅದಕ್ಕೆ ಹೂಡಲಾದ ಕಚ್ಚಾ ಸಾಮಗ್ರಿ, ನೇಮಕವಾಗಿದ್ದ ಸಿಬ್ಬಂದಿಯ ಸಂಖ್ಯೆ, ವೆಚ್ಚಗಳು, ಬಂಡವಾಳ, ಉತ್ಪಾದನೆ ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
ಒಂದು ಕೈಗಾರಿಕೆಯಲ್ಲಿನ ಹಾಗೂ ದೇಶದ ಎಲ್ಲ ಕೈಗಾರಿಕೆಗಳಲ್ಲಿನ ಎಲ್ಲ ಸಂಸ್ಥೆಗಳ ನಿವ್ವಳ ಉತ್ಪತ್ತಿಗಳ ಮೊತ್ತ ಬಲು ಮುಖ್ಯ. ಏಕೆಂದರೆ ಇದರಿಂದ ಸ್ಥೂಲವಾಗಿ ಅಲ್ಲಿನ ರಾಷ್ಟ್ರೀಯ ಉತ್ಪನ್ನಕ್ಕೆ ಕೈಗಾರಿಕೆಗಳ ಕೊಡುಗೆಯೆಷ್ಟೆಂಬುದು ಗೊತ್ತಾಗುತ್ತದೆ. ಉತ್ಪಾದನೆಯಾದ ಪ್ರತಿಯೊಂದು ಪದಾರ್ಥದ ಆರ್ಥಿಕ ವೆಚ್ಚ, ಶ್ರಮ, ಸಾಮಗ್ರಿ ಇಂಧನಗಳೇ ಮುಂತಾದ ಗ್ರಾಸಗಳ ವೆಚ್ಚಗಳ ವಿವರ-ಇವೆಲ್ಲವೂ ದೊರಕುವುದರಿಂದ ಆರ್ಥಿಕ ವಿಶ್ಲೇಷಣೆಗೆ ಇದೇ ಆಧಾರ. ನಿವ್ವಳ ಉತ್ಪತ್ತಿಗೂ ನಿಯೋಜಿತ ಬಂಡವಾಳಕ್ಕೂ ಇರುವ ಸಂಬಂಧದ ಪರಿಶೀಲನೆಯಿಂದ ಬಂಡವಾಳದ ಉತ್ಪಾದಕತೆಯೂ ನಿವ್ವಳ ಉತ್ಪತ್ತಿಗೂ ಕೂಲಿಗೂ ಇರುವ ಸಂಬಂಧದಿಂದ ಕಾರ್ಮಿಕರ ಉತ್ಪಾದಕತೆಯೂ ವ್ಯಕ್ತಪಡುತ್ತದೆ. ಒಟ್ಟು ಉತ್ಪತ್ತಿಯಲ್ಲಿ ಶ್ರಮದ ಪಾಲೆಷ್ಟೆಂಬುದನ್ನು ಒಟ್ಟು ವೇತನ ಹಾಗೂ ಕೂಲಿಗಳ ಮೊತ್ತದಿಂದ ತಿಳಿಯುವುದು ಸಾಧ್ಯ. ಉಳಿದ ಭಾಗ ಇತರ ವೆಚ್ಚಗಳಿಗೆ ಸಂಬಂಧಿಸಿದ್ದು ವ್ಯತ್ಯಾಸದ ಅಧ್ಯಯನ ಆರ್ಥಿಕವಾಗಿ ಬಲು ಮುಖ್ಯ. ಉತ್ಪಾದನೆ ಶ್ರಮಪ್ರಧಾನವೇ ಅಥವಾ ಬಂಡವಾಳ ಪ್ರಧಾನವೇ, ಕೈಗಾರಿಕೆ (ಹಾಗೂ ದೇಶ) ಆರ್ಥಿಕ ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದೆಯೇ-ಮುಂತಾದ ಸ್ವಾರಸ್ಯಕರ ಅಂಶಗಳ ಮುಸುಕು ತೆರೆದು ಮುಂದೆ ನಿಲ್ಲುತ್ತವೆ. ಪ್ರಚಲಿತ ಅನುಭೋಗಕ್ಕೆ ಒದಗುವ ಪದಾರ್ಥಗಳ ಉತ್ಪಾದನೆಯಷ್ಟು, ಹೊಸ ಹೊಸ ಬಂಡವಾಳವಾಗಿ ಪರಿವರ್ತನೆಗೊಳ್ಳುವ ಪದಾರ್ಥದ (ಉತ್ಪಾದಕ ಸರಕಿನ) ಉತ್ಪಾದನೆಯೆಷ್ಟು-ಎಂಬುದೆಲ್ಲವೂ ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಬಲು ಉಪಯುಕ್ತ, ಅತ್ಯಂತ ಅವಶ್ಯ.

ಒಂದೊಂದು ಉತ್ಪಾದನ ಘಟಕಕ್ಕೆ ಸಂಬಂಧಿಸಿದ ಅಂಕಿಗಳನ್ನು ಸಂಗ್ರಹಿಸುವುದು ಆಧುನಿಕ ಗಣತಿಯ ವಿಧಾನ. ನಾನಾ ಪದಾರ್ಥಗಳ ತಲೆಕಟ್ಟುಗಳ ಅಡಿಯಲ್ಲಿ ಇವುಗಳನ್ನೆಲ್ಲ ಒಟ್ಟುಮಾಡುವುದು ಸುಲಭವಾಗುತ್ತದೆ.
ಕಾಲದ ಒಂದು ಗೊತ್ತಾದ ಬಿಂದುವಿನಲ್ಲಿದ್ದಂತೆ ಗಣನೆ ಮಾಡುವುದೇ ಉತ್ಪಾದನ ಗಣತಿಯಲ್ಲಿ ಸಾಮಾನ್ಯವಾಗಿ ಅನುಸರಿಸುವ ವಿಧಾನ. ಆದರೆ ಉತ್ಪಾದನೆಯೆಂಬುದು ಒಂದು ಅನುಸ್ಯೂತ ಪ್ರವಾಹ. ಆದ್ದರಿಂದ ಭಾರತ, ಬ್ರಿಟನ್, ಅಮೆರಿಕಗಳಂಥ ಕೆಲವು ದೇಶಗಳ ಗಣತಿಗೆ ಒಂದು ಗೊತ್ತಾದ ಕಾಲದಲ್ಲಿ ಸಂಭವಿಸಿದ ಉತ್ಪತ್ತಿಯ ಎಣಿಕೆಯೇ ಗುರಿ (ಪ್ರವಾಹ). ಆದರೆ ಉತ್ಪಾದೀ ಸಾಧನಗಳ ರಚನೆ ಹಾಗೂ ವಿತರಣೆಯ ಗಣತಿಯೇ ಐರೋಪ್ಯ ರಾಷ್ಟ್ರಗಳ ಪದ್ಧತಿ. ಉತ್ಪಾದನ ಸಂಸ್ಥೆಗಳನ್ನು ಕುರಿತ ವಿವರಗಳಿಗೆ ಈ ದೇಶದಲ್ಲಿ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ.
ಆರ್ಥಿಕ ಚಟುವಟಿಕೆಯ ಮಟ್ಟವನ್ನಳೆಯುವುದಕ್ಕೆ ಉತ್ಪಾದನೆಯ ಅಂಕಿ-ಅಂಶಗಳನ್ನು ಬಳಸುವುದು ಇಂದು ಎಲ್ಲ ಮುಂದುವರಿದ ದೇಶಗಳ ಪದ್ಧತಿ. ಆರ್ಥಿಕ ಚಟುವಟಿಕೆಗಳ ಏರಿಳಿತಗಳನ್ನು ತಡೆಗಟ್ಟಿ ಬೆಳೆವಣಿಗೆಗೆ ಉತ್ತೇಜನ ನೀಡಲು ಸರ್ಕಾರ ಕೈಗೊಳ್ಳಬೇಕಾದ ನಾನಾ ಆರ್ಥಿಕ ಕ್ರಮಗಳಿಗೆ ಈ ಅಂಕಿಗಳೇ ಆಧಾರ. ಕೈಗಾರಿಕೆ ಹಾಗೂ ವ್ಯವಸಾಯೋತ್ಪಾದ ನೆಯ ಸೂಚ್ಯಂಕಗಳ ರಚನೆ ಹಾಗೂ ಪ್ರಕಟನೆಗೆ ಈಚೆಗೆ ಹೆಚ್ಚು ಹೆಚ್ಚು ಗಮನ ನೀಡಲಾಗಿದೆ.

ಉತ್ಪಾದನ ಗಣತಿ ಹಾಗೂ ರಾಷ್ಟ್ರೀಯ ವರಮಾನ
ಒಂದು ದೇಶದ ಸಮಗ್ರ ಆರ್ಥಿಕ ಪ್ರಗತಿಯ ಸೂಚಕವಾದ ರಾಷ್ಟ್ರೀಯ ವರಮಾನವನ್ನು ಅಳೆಯಲು ಬಳಸುವ ಮೂರು ಮುಖ್ಯ ವಿಧಾನಗಳಲ್ಲಿ ಗಣತಿ ವಿಧಾನವೂ ಒಂದು. ವರಮಾನ ಗಣತಿ ವಿಧಾನವೂ ಖರ್ಚು, ಬಂಡವಾಳ ನಿಯೋಜನೆ ಮತ್ತು ಉಳಿತಾಯ ಗಣತಿ ವಿಧಾನವೂ ಉಳಿದ ಎರಡು. ಈ ವಿಧಾನಗಳಲ್ಲಿ ಯಾವುದನ್ನು ಅನುಸರಿಸಬಹುದು, ಅಥವಾ ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಅನುಸರಿಸಬೇಕೆ ಎಂಬುದು ಒಂದು ದೇಶದ ಆರ್ಥಿಕ ಬೆಳವಣಿಗೆಯ ಮಟ್ಟ., ಅಂಕಿ-ಅಂಶಗಳ ಲಭ್ಯತೆ ಮತ್ತು ಜನಗಳ ವಿದ್ಯಾಮಟ್ಟ-ಇವೆಲ್ಲವನ್ನೂ ಅವಲಂಬಿಸಿರುತ್ತದೆ.
ಒಂದು ದೇಶದ ಜನ ಒಂದು ವರ್ಷದಲ್ಲಿ ಉತ್ಪಾದನೆ ಮಾಡಿದ ಸರಕು ಸೇವೆಗಳ ಹಣದ ಮೌಲ್ಯವೇ ರಾಷ್ಟ್ರೀಯ ವರಮಾನವೆನ್ನಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಹೊರದೇಶಗಳಿಂದ ಬಂದ ನಿವ್ವಳ ಆದಾಯವನ್ನು ಒಳಗೊಂಡು ಒಂದು ರಾಷ್ಟ್ರದ ವಿವಿಧ ಆರ್ಥಿಕ ಕ್ಷೇತ್ರಗಳಿಂದ ಸೇರಿಸಲಾದ ಸರಕು ಸೇವೆಗಳ ಉತ್ಪಾದನೆಯ ನಿವ್ವಳ ಬೆಲೆಯ ಉತ್ಪಾದನ ಗಣತಿಯೇ ರಾಷ್ಟ್ರೀಯ ವರಮಾನದ ಲೆಕ್ಕಾಚಾರಕ್ಕೆ ಆಧಾರ. ಉತ್ಪಾದನೆಯಾದ ಸರಕು ಸೇವೆಗಳ ಮೌಲ್ಯವನ್ನು ಮಾರುಕಟ್ಟೆಯ ಬೆಲೆಯ ಲೆಕ್ಕದಲ್ಲಿ ಕಟ್ಟಿದ್ದಾದರೆ ಅದು ಮಾರುಕಟ್ಟೆಯ ಬೆಲೆಯಾಧಾರದ ರಾಷ್ಟ್ರೀಯ ವರಮಾನ. ಅದರ ಬದಲು ಉತ್ಪಾದನೆಯ ವಿವಿಧ ಅಂಗಗಳು ಪಡೆಯುವ ಬೆಲೆಗೆ ಅನುಗುಣವಾಗಿ ಮೌಲ್ಯ ನಿಷ್ಕರ್ಷೆ ಮಾಡಿದ್ದಾದರೆ ಅದು ಉತ್ಪಾದನಾಂಗಗಳ ಬೆಲೆಗಳ ರೀತಿಯ ರಾಷ್ಟ್ರೀಯ ವರಮಾನ. ಈ ರೀತಿ ಉತ್ಪಾದನ ಗಣತಿ ಮಾಡುವಾಗ ಒಂದು ದೇಶದಲ್ಲಿ ವಾಸಿಸುತ್ತಿರುವವರ ಶ್ರಮ ಮತ್ತು ಬಂಡವಾಳಗಳ ಮೂಲಕ ಆದ ಉತ್ಪಾದನೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಆದರೆ ಇಂಥವರು ಯಾರು ಎಂಬುದನ್ನು ಕೆಲವು ವೇಳೆ ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಒಬ್ಬ ವ್ಯಕ್ತಿ ಖಾಯಂ ಆಗಿ ಒಂದು ದೇಶದವನೇ ಆದರೂ ಆತ ಇನ್ನೊಂದು ದೇಶದಲ್ಲಿ ಕೆಲಸ ಮಾಡುತ್ತಿರಬಹುದು. ಆತ ಕೆಲಸ ಮಾಡುತ್ತಿರುವ ಸಂಸ್ಥೆಯ ಮಾಲೀಕ ಮೂರನೆಯ ದೇಶದವನಾಗಿರಬಹುದು. ಒಂದು ದೇಶದ ಖಾಯಂ ನಿವಾಸಿ ಯಾರು ಎಂಬುದರ ಬಗ್ಗೆ ಎಲ್ಲ ದೇಶಗಳಲ್ಲೂ ಏಕರೀತಿಯ ಅರ್ಥವಿವರಣೆಯಿಲ್ಲ.

ಉತ್ಪಾದನ ಗಣತಿಯ ಮೂಲಕ ರಾಷ್ಟ್ರೀಯ ವರಮಾನವನ್ನು ಅಳೆಯಬೇಕಾದರೆ ಮುಖ್ಯವಾಗಿ ವಿವಿಧ ಉತ್ಪನ್ನಗಳ ಅಂಕಿ-ಅಂಶಗಳು ಸಿಕ್ಕಬೇಕು; ಈ ಅಂಕಿ-ಅಂಶಗಳು ಆದಷ್ಟು ಖಚಿತವಾಗಿರಬೇಕು. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಉತ್ಪಾದಕರು ಸಾಮಾನ್ಯ ವಾಗಿ ಅಂಕಿ-ಅಂಶ ಇಟ್ಟಿರುತ್ತಾರೆ. ಇವನ್ನು ಸಂಗ್ರಹಿಸಲು ಸಾಕಷ್ಟು ನಿಪುಣರೂ ಅಲ್ಲಿ ಇರುತ್ತಾರೆ. ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಉತ್ಪಾದನೆಯ ಅಥವಾ ಸೇವೆಗಳ ಮೌಲ್ಯ ಎರಡು ಸಲ ಎಣಿಕೆಗೆ ಸೇರದಂತೆ ನೋಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಬ್ರೆಡ್ಡಿನ ಉತ್ಪಾದನೆಯ ಲೆಕ್ಕ ಹಾಕುವಾಗ ಅದರಲ್ಲಿ ಅಡಕವಾಗಿರುವ ಗೋದಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ಒಂದು ವರ್ಷದಲ್ಲಿ ಒಂದು ಗುಂಪಿನ ಜನರಿಂದ ಉತ್ಪಾದನೆಯಾದ ಒಟ್ಟು ಉತ್ಪಾದನೆಯಲ್ಲಿ ಬೇರೆಯವರಿಂದ ಪಡೆಯಲಾದ ಉತ್ಪಾದನೆಯನ್ನು ಕಳೆದರೆ ಉಳಿಯುವುದೇ ನಿಜವಾದ ಉತ್ಪಾದನೆ. ಬ್ರೆಡ್ಡಿನಲ್ಲಿ ವಸ್ತುತಃ ಅಡಕವಾಗಿರುವ ಗೋದಿಯ ಪ್ರಮಾಣ ಎಲ್ಲರಿಗೂ ಸುಲಭವಾಗಿ ತಿಳಿಯುತ್ತದೆ. ಅದೇ ರೀತಿ ಉಣ್ಣೆಯ ಬಟ್ಟೆಯ ಉತ್ಪಾದನೆಯಲ್ಲಿ ಉಣ್ಣೆ ಸೇರಿರುವುದಾದರೂ ಆ ಬಟ್ಟೆಯ ಉತ್ಪಾದನೆಯಲ್ಲಿ ಪ್ರತಿ ವರ್ಷವೂ ಉಣ್ಣೆಯ ದಾರ ತೆಗೆಯುವ ಮತ್ತು ಬಟ್ಟೆ ನೇಯುವ ಯಂತ್ರಗಳ ಸವೆದು ಹೋದ ಭಾಗವೂ ಸೇರಿರುತ್ತದೆಯೆನ್ನುವುದು ಗೋಚರವಾಗುವುದಿಲ್ಲ. ಬಂಡವಾಳ ವಸ್ತುವಿನ ಸವೆತ ಸಂರಕ್ಷಣೆಗಳ ವೆಚ್ಚವನ್ನೂ ಒಟ್ಟು ಉತ್ಪಾದನೆಯಲ್ಲಿ ಕಳೆಯಬೇಕಾಗುತ್ತದೆ.

ಅಭಿವೃದ್ಧಿ ಹೊಂದಿಲ್ಲದ ಅಥವಾ ಹೊಸದಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರಾಷ್ಟ್ರೀಯ ವರಮಾನವನ್ನು ಉತ್ಪಾದನ ಗಣತಿಯ ವಿಧಾನದ ಮೂಲಕ ಅಳೆಯಲು ಅನೇಕ ತೊಂದರೆಗಳಿವೆ. ಮೊದಲನೆಯದಾಗಿ ಉತ್ಪಾದನೆಯ ಮೌಲ್ಯವನ್ನು ಅಳೆಯುವಾಗ ಸಾಮಾನ್ಯವಾಗಿ ದೇಶದಲ್ಲಿ ಉತ್ಪನ್ನವಾಗುವ ಸರಕು ಮತ್ತು ಸೇವೆಗಳ ಬಹುಭಾಗ ಹಣಕ್ಕೆ ಪ್ರತಿಯಾಗಿ ವಿನಿಮಯವಾಗುತ್ತದೆಂದು ಒಪ್ಪಬಹುದು. ಆದರೆ ಭಾರತದಂಥ ದೇಶದಲ್ಲಿ ಉತ್ಪಾದನೆಯಾಗುವ ಸರಕು ಸೇವೆಗಳ ಗಣನೀಯ ಪ್ರಮಾಣ ಮಾರುಕಟ್ಟೆಗೆ ಬರುವುದೇ ಇಲ್ಲ. ಈ ಭಾಗ ಉತ್ಪಾದಕರಿಂದಲೇ ಅನುಭೋಗಿಸಲ್ಪಡುತ್ತದೆ. ಅಥವಾ ಬೇರೆ ವಸ್ತು ಸೇವೆಗಳಿಗೆ ವಿನಿಮಯವಾಗುತ್ತದೆ. ಆದ್ದರಿಂದ ಇವುಗಳಿಗೆ ನಾವು ಬೆಲೆ ಕಟ್ಟಬೇಕಾಗುತ್ತದೆ. ಇದು ಸುಲಭವಲ್ಲ. ಇಂಥ ಪರಿಸ್ಥಿತಿಯಲ್ಲಿ ದೇಶದ ವರಮಾನವನ್ನು ವರ್ಗೀಕರಣ ಮಾಡುವಾಗ ಹಣ ಬಳಸುವ ಹಾಗೂ ಹಣ ಬಳಸದ ವಿಭಾಗಗಳೆಂದು ವರ್ಗೀಕರಣ ಮಾಡಬೇಕಾಗುತ್ತದೆ.

ಎರಡನೆಯದಾಗಿ ಭಾರತದಂಥ ದೇಶದಲ್ಲಿ ಅನೇಕ ಉತ್ಪಾದಕರು ಉತ್ಪಾದನೆಯ ಪ್ರಮಾಣ ಮತ್ತು ಬೆಲೆಯ ವಿಷಯದಲ್ಲಿ ಯಾವ ಖಚಿತ ಅಂದಾಜನ್ನೂ ಹೊಂದಿಲ್ಲದ್ದರಿಂದ ಉತ್ಪಾದನೆಗೆ ಬೆಲೆ ಕಟ್ಟುವುದು ಕಷ್ಟ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆರ್ಥಿಕ ಅಂಕಿ-ಅಂಶಗಳು ನೇರವಾಗಿ ಉತ್ಪಾದಕರಿಂದ ಸಂಗ್ರಹಿತವಾಗುತ್ತವೆ. ಅವರು ತಾವು ತೊಡಗಿರುವ ಆರ್ಥಿಕ ಚಟುವಟಿಕೆಗಳ ಮೂಲಕ ಆಗುವ ಉತ್ಪಾದನೆಯ ಪ್ರಮಾಣ ಮತ್ತು ಬೆಲೆಯ ಅರಿವನ್ನು ಪಡೆದಿರುತ್ತಾರೆ. ಆದರೆ ಉತ್ಪಾದಕರಿಂದ ನೇರವಾಗಿ ಉತ್ಪಾದನೆಯ ಬೆಲೆಯನ್ನು ಸಂಗ್ರಹಿಸು ವಾಗ ಹಿಂದುಳಿದ ದೇಶಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೋಟ್ಯಂತರ ಜನರನ್ನು ನೇರವಾಗಿ ಸಂದರ್ಶಿಸುವುದರಲ್ಲಿ ಆಗುವ ಅಗಾಧ ಖರ್ಚು, ಮಾಹಿತಿ ಸಂಗ್ರಹಿಸಲು ಅಗತ್ಯವಾದ ತಜ್ಞರ ಅಭಾವ, ಅತ್ಯಧಿಕ ಜನರ ನಿರಕ್ಷರತೆ, ಸ್ವಂತ ಅನುಭೋಗಕ್ಕಾಗಿಯೇ ನಡೆಯುತ್ತಿರುವ ಬಹುಪಾಲು ಉತ್ಪಾದನೆ, ಉತ್ಪಾದಕರಲ್ಲಾಗಲಿ ಅನುಭೋಗಿಗಳಲ್ಲಾಗಲಿ ತಮ್ಮ ಉತ್ಪಾದನ ಅಥವಾ ಅನುಭೋಗದ ವಿಷಯದಲ್ಲಿ ಯಾವ ಲೆಕ್ಕವನ್ನೂ ಇಡುವ ಅಭ್ಯಾಸವಿಲ್ಲದ ಸ್ಥಿತಿ-ಇವು ಮುಖ್ಯ ಸಮಸ್ಯೆಗಳು. ಇಂಥ ಸಂದರ್ಭಗಳಲ್ಲಿ ಉತ್ಪಾದನೆಯ ಬೆಲೆಯನ್ನು ಅಳೆಯುವಾಗ ಸ್ವಲ್ಪಮಟ್ಟಿಗೆ ಊಹೆಯ ಅಂಶವನ್ನು ಸೇರಿಸಬೇಕಾಗುತ್ತದೆ. ಅದರಲ್ಲೂ ಸಣ್ಣ ಪ್ರಮಾಣದ ಉದ್ಯಮಗಳಲ್ಲಿ ಮತ್ತು ಗೃಹೋದ್ಯಮಗಳಲ್ಲಿ ಈ ಊಹೆಯ ಪ್ರಮಾಣ ಹೆಚ್ಚು.

ಮೂರನೆಯದಾಗಿ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲಿ ಕಸುಬುಗಳನ್ನು ವ್ಯವಸಾಯ, ಕೈಗಾರಿಕೆ, ವ್ಯಾಪಾರ ಈ ರೀತಿ ನಿರ್ದಿಷ್ಟವಾಗಿ ವಿಂಗಡಣೆ ಮಾಡಲು ಸಾಧ್ಯವಿಲ್ಲ. ಒಂದೇ ಗುಂಪಿನವರು ವ್ಯವಸಾಯ ಕೈಗಾರಿಕೆ ವ್ಯಾಪಾರಗಳೇ ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಿರುವ ಸಂಭವವೂ ಉಂಟು. ಉದಾಹರಣೆಗೆ, ಬೇಸಾಯಗಾರರಲ್ಲೆ ಅನೇಕರು ಪಟ್ಟಣಗಳಲ್ಲಿನ ಕೈಗಾರಿಕೆಗಳಲ್ಲೂ ಕೆಲಸ ಮಾಡಬಹುದು. ವ್ಯವಸಾಯದ ಕೆಲಸ ಇಲ್ಲದಾಗ ಸಣ್ಣ ಕೈಗಾರಿಕೆಗಳಲ್ಲೂ ಕೂಲಿ ಕೆಲಸಗಳಲ್ಲೂ ನಿರತರಾಗಬಹುದು. ಆದ್ದರಿಂದ ಕೈಗಾರಿಕಾ ಮೂಲದಿಂದ ಉತ್ಪನ್ನವಾಗುವ ವರಮಾನವನ್ನು ಅಳೆಯುವಾಗ ಆ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಕೈಗಾರಿಕಾ ಕೆಲಸದಿಂದ ಮಾತ್ರ ವರಮಾನ ಪಡೆಯುತ್ತಿದ್ದಾರೆಂದು ಹೇಳಲಾಗುವುದಿಲ್ಲ.

ನಾಲ್ಕನೆಯದಾಗಿ ಭಾರತದಂಥ ದೊಡ್ಡ ದೇಶದಲ್ಲಿ ಒಂದು ಪ್ರದೇಶದ ಪರಿಸ್ಥಿತಿ ಇನ್ನೊಂದರಲ್ಲಿರುವುದಿಲ್ಲ. ಒಂದು ಪ್ರದೇಶದಲ್ಲಿ ಸಂಗ್ರಹಿಸಲಾದ ಅಂಕಿ-ಅಂಶಗಳ ಆಧಾರದ ಮೇಲೆ ಮಾಡಬಹುದಾದ ನಿರ್ಧಾರವನ್ನು ಬೇರೊಂದು ಪ್ರದೇಶಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ಆದ್ದರಿಂದ ರಾಷ್ಟ್ರೀಯ ವರಮಾನದ ಅಂದಾಜು ಮಾಡುವಾಗ ಸಂಗ್ರಹಿಸುವ ಅಂಕಿ-ಅಂಶಗಳ ಸ್ವರೂಪದ ಸ್ಪಷ್ಟ ಕಲ್ಪನೆ ಇರುವುದಗತ್ಯ.

ಈ ಎಲ್ಲ ತೊಂದರೆಗಳ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಅಂಕಿ-ಅಂಶಗಳನ್ನು ಸಂಗ್ರಹಿಸು ವುದೇ ದೊಡ್ಡ ಸಮಸ್ಯೆ. ವ್ಯವಸಾಯ ಕ್ಷೇತ್ರಗಳಲ್ಲಿ ಉತ್ಪನ್ನ ಬೆಲೆ ಮತ್ತು ಉತ್ಪಾದನೆಯ ಖರ್ಚುಗಳ ವಿಷಯದಲ್ಲಿ ಇರುವ ಅಂಕಿ-ಅಂಶಗಳು ಸಾಮಾನ್ಯವಾಗಿ ಕಾರ್ಖಾನೆಗಳಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರದ ಕಾರ್ಯಗಳ ಬಗ್ಗೆ ಇರುವ ಅಂಕಿ-ಅಂಶಗಳು ವಿಪುಲವಾಗಿದ್ದರೂ ಅವನ್ನು ನಿರ್ದಿಷ್ಟವಾದ ಆರ್ಥಿಕ ವಿಂಗಡಣೆಗೆ ಒಳಪಡಿಸುವುದು ಕಷ್ಟ. ಕೆಲಸದಲ್ಲಿ ನಿರತರಾಗಿರುವವರ ಅಂಕಿ-ಅಂಶಗಳು ನಿಖರವಾಗಿಲ್ಲ. ಅಂತಾರಾಷ್ಟ್ರೀಯ ಲೆಕ್ಕದಲ್ಲೂ ಅಂಕಿ-ಅಂಶಗಳು ಪೂರ್ಣವಾಗಿ ಖಚಿತವಾಗಿರುವುದೆಂದು ಹೇಳಲು ಸಾಧ್ಯವಿಲ್ಲ.

ಈ ತೊಂದರೆಗಳ ಜೊತೆಗೆ ಅನೇಕ ಆರ್ಥಿಕ ವಿಭಾಗಗಳಲ್ಲಿ ಅಂಕಿ-ಅಂಶಗಳು ದೊರಕುವುದಿಲ್ಲ. ವ್ಯವಸಾಯದಲ್ಲಿ ಉತ್ಪಾದನೆಯ ಖರ್ಚಿನ ರಚನೆ, ವ್ಯವಸಾಯದಲ್ಲಿ ನಿರತರಾಗಿರುವವರ ಅನುಭೋಗಿ ವೆಚ್ಚ ಮತ್ತು ಅವರ ಉಳಿತಾಯ-ಇವುಗಳ ಬಗ್ಗೆ ನಿಖರವಾದ ಅಂಕಿ-ಅಂಶಗಳು ಸಿಕ್ಕುವುದಿಲ್ಲ. ಪಟ್ಟಣದಲ್ಲಿರುವ ಜನರಲ್ಲೂ ವಿವರವಾದ ಅನುಭೋಗಿ ಖರ್ಚು ಮತ್ತು ಉಳಿತಾಯದ ಬಗ್ಗೆ ಅಂಕಿ-ಅಂಶಗಳು ಸಿಗುವುದಿಲ್ಲ. ವಿವಿಧ ವರ್ಗಗಳಲ್ಲಿ ಯಾವ ರೀತಿಯಲ್ಲಿ ಆದಾಯ ಹಂಚಿಕೆಯಾಗಿದೆ ಎಂಬ ವಿಷಯದಲ್ಲಿ ಖಚಿತವಾದ ಅಂಕಿ-ಅಂಶಗಳ ಅಭಾವವಿದೆ. ಮನೆಗೆಲಸ, ಗ್ರಾಮಾಂತರ ಸಾರಿಗೆ, ಬಂಡವಾಳ ಶೇಖರಣೆ-ಇವುಗಳ ಬಗ್ಗೆ ಸರಿಯಾದ ಅಂಕಿ-ಅಂಶಗಳು ಸಿಗುವುದಿಲ್ಲ. ಒಟ್ಟಿನಲ್ಲಿ ಅಂಕಿ-ಅಂಶಗಳ ಅಭಾವ ಅಥವಾ ಅಪೂರ್ಣತೆಯ ಕಾರಣದಿಂದ ಉತ್ಪಾದನ ಗಣತಿ ಬಲು ಕಷ್ಟದ ಕೆಲಸ.

ಒಂದು ದೇಶದ ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಉತ್ಪಾದನ ಗಣತಿ ಹಾಗೂ ವರಮಾನ ಗಣತಿ, ಈ ಎರಡು ವಿಧಾನಗಳನ್ನೂ ಉಪಯೋಗಿಸಬಹುದು. ಭಾರತದಲ್ಲೂ ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಈ ಎರಡು ವಿಧಾನಗಳಲ್ಲಿ ಯಾವುದೊಂದನ್ನೂ ಪುರ್ತಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ಅನ್ವಯಿಸಲು ಸಾಧ್ಯವಿಲ್ಲ. ಇವೆರಡನ್ನೂ ಹೊಂದಿಸಿ ಬಳಸಬೇಕಾಗುತ್ತದೆ.
ಗಣತಿಯ ಅಂಕಿ-ಅಂಶಗಳ ಅಭಾವವಿರುವ ಕಡೆ ಅಥವಾ ಅಪೂರ್ಣವಾಗಿರುವ ಕಡೆ ಊಹೆಯ ನೆರವು ಪಡೆಯಬೇಕಾಗುತ್ತದೆ. ಇದರಿಂದ ರಾಷ್ಟ್ರೀಯ ವರಮಾನದ ಅಂದಾಜುಗಳು ಪೂರ್ಣವಾಗಿ ಸರಿಯಾಗಿರುತ್ತವೆಂದು ಹೇಳಲಾಗುವುದಿಲ್ಲ. ಉತ್ಪಾದನ ಅಂಕಿ-ಅಂಶಗಳು ಸರಿಯಾಗಿ ದೊರೆಯುವ ಪಾಶ್ಚಾತ್ಯ ದೇಶಗಳಲ್ಲೂ ರಾಷ್ಟ್ರೀಯ ವರಮಾನದ ಅಂದಾಜು ಪೂರ್ಣವಾಗಿ ಸರಿಯಾಗಿರುವುದಿಲ್ಲ.
ಈಗ ಭಾರತದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಅಂಕಿ-ಅಂಶಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರೀಯ ಅಂಕಿ-ಅಂಶ ಸಂಸ್ಥೆಯ ಒಂದು ಭಾಗವಾಗಿ ರಾಷ್ಟ್ರೀಯ ವರಮಾನ ಅಂದಾಜು ಘಟಕ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಕಿ-ಅಂಶ ಸಂಗ್ರಹಣಾಧಿಕಾರಿಗಳ ಸಭೆ ಆಗಾಗ ಸೇರಿ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮಗಳ ಫಲವಾಗಿ ಸಂಗ್ರಹಿಸಿದ ಅಂಕಿ-ಅಂಶಗಳ ಗುಣ ಮತ್ತು ವ್ಯಾಪಕತೆ ಹೆಚ್ಚುತ್ತಿದೆ. ಆದ್ದರಿಂದ ಉತ್ಪಾದನ ಗಣತಿಯ ವಿಧಾನದಿಂದ ಹೆಚ್ಚು ಹೆಚ್ಚು ನಿಖರವಾಗಿ ರಾಷ್ಟ್ರೀಯ ವರಮಾನದ ಅಂದಾಜು ಮಾಡುವುದು ಸಾಧ್ಯವಾಗಿದೆ.	(ಎಸ್.ಎಂ.ವಿ.)

ಉತ್ಪಾದನ ನಿರ್ವಹಣೆ
ಒಂದು ಉದ್ಯಮಸಂಸ್ಥೆಯ ಉತ್ಪತ್ತಿಯ ಮೊತ್ತದ ಯೋಜನೆ; ಪದಾರ್ಥದ ಉತ್ಪಾದನೆಗೆ ಅಗತ್ಯವಾದ ನಾನಾ ಕ್ರಿಯೆಗಳ ನಿರ್ದೇಶನ, ಸಂಘಟನೆ ಹಾಗೂ ನಿಯಂತ್ರಣ (ಪ್ರೊಡಕ್ಷನ್ ಮ್ಯಾನೇಜ್ಮೆಂಟ್). ಎಲ್ಲಿ, ಹೇಗೆ, ಯಾವಾಗ ಪದಾರ್ಥವನ್ನು ಉತ್ಪಾದಿಸಬೇಕು ಎಂಬ ಯೋಜನೆ, ತದನುಗುಣವಾಗಿ ಉತ್ಪಾದನಕಾರ್ಯನಿರ್ವಹಣೆ, ತತ್ಸಂಬಂಧವಾಗಿ ಆಡಳಿತ ಮಂಡಳಿಗೆ ಸಮಯೋಚಿತ ಸಲಹೆ-ಇವೆಲ್ಲವೂ ಇದರಲ್ಲಿ ಅಂತರ್ಗತವಾಗಿವೆ. ಒಂದು ಸಂಸ್ಥೆಯಲ್ಲಿ ಉತ್ಪಾದನ ವಿಭಾಗ ಅತಿ ಮುಖ್ಯ ಅಂಗ. ಆಡಳಿತ ಮಂಡಲಿಯ ಆದೇಶಾನುಸಾರ ತಯಾರು ಮಾಡುವುದು ಇದರ ಕೆಲಸ. ಒಂದು ಸಂಸ್ಥೆಯ ಅಳಿವು-ಉಳಿವುಗಳು ಆ ಸಂಸ್ಥೆಯ ಉತ್ಪಾದನ ನಿರ್ವಹಣೆಯನ್ನೇ ಅವಲಂಬಿಸಿದೆ. ಪದಾರ್ಥವನ್ನು ಸರಿಯಾದ ಕಾಲದಲ್ಲಿ. ಅಚ್ಚುಕಟ್ಟಾಗಿ. ಕಡಿಮೆ ವೆಚ್ಚದಲ್ಲಿ ಗಿರಾಕಿಗಳ ಅಭಿಲಾಷೆಗೆ ತಕ್ಕಂತೆ ಉತ್ಪಾದಿಸಬೇಕಾದರೆ ಈ ಕಾರ್ಯಕ್ಕೆ ಅನೇಕ ವಿಭಾಗಗಳ ಸಹಕಾರ ಅತ್ಯಾವಶ್ಯಕ. ಉತ್ಪಾದನಕಾರ್ಯವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಒಂದು ಬೃಹತ್ ನಿರ್ವಹಣ ವ್ಯವಸ್ಥೆಯನ್ನೇ ಸ್ಥಾಪಿಸಿ ನಡೆಸ ಬೇಕಾಗುತ್ತದೆ. 

ಉತ್ಪಾದನಕಾರ್ಯದ ವ್ಯಾಪ್ತಿ
ಒಂದು ದೃಷ್ಟಿಯಲ್ಲಿ ಉತ್ಪಾದನ ಕಾರ್ಯದ ವ್ಯಾಪ್ತಿ ಬಲು ಕಿರಿದೆನಿಸಬಹುದು. ಪದಾರ್ಥ ತಯಾರಿಕೆಯಷ್ಟೇ ಇದರ ಕೆಲಸವೆಂದೂ ಬೇರೆ ಯಾವ ಜವಾಬ್ದಾರಿಯೂ ಇದರದಲ್ಲವೆಂದೂ ಭಾವಿಸುವುದು ತಪ್ಪು. ಪದಾರ್ಥ ತಯಾರಿಕೆ ಯಷ್ಟೇ ಇದರ ಹೊಣೆಯಲ್ಲ. ತಯಾರಿಕೆಗೆ ಮೊದಲು ಆ ಪದಾರ್ಥದ ಭವಿಷ್ಯವನ್ನು ಅರಿತುಕೊಳ್ಳಬೇಕು. ಅದನ್ನು ತಯಾರು ಮಾಡಲು ಯಾವ ಯಾವ ಸಾಧನ ಸಾಮಗ್ರಿ ಎಷ್ಟೆಷ್ಟು ಪ್ರಮಾಣದಲ್ಲಿ ಯಾವ ಯಾವ ರೀತಿಯಲ್ಲಿ ಯಾವ ಯಾವ ಕಾಲಕ್ಕೆ ಅಗತ್ಯ. ಯಾವ ಬಗೆಯ ಕುಶಲಕೆಲಸಗಾರರು ಎಷ್ಟು ಸಂಖ್ಯೆಯಲ್ಲಿ ಯಾವ ಕಾಲಕ್ಕೆ ಒದಗಬೇಕು. ತಯಾರಿಕೆಯ ವಿಧಾನಗಳು ಹೇಗಿರಬೇಕು-ಎಂಬ ವಿಷಯಗಳ ಜೊತೆಯಲ್ಲಿ ಉತ್ಪಾದನೆಯ ವೆಚ್ಚ, ಗುಣ. ಉಪಯೋಗ ಇತ್ಯಾದಿಗಳನ್ನು ನಿರ್ಧರಿಸುವ ಜವಾಬ್ದಾರಿಯೂ ಉತ್ಪಾದನ ಕಾರ್ಯದ ಸೀಮೆಯೊಳಗೆ ಬರತಕ್ಕದ್ದೇ ಆಗಿದೆ. 

ಉತ್ಪಾದನ ಸಂಘಟನೆ
ಕಾರ್ಖಾನೆಯ ಪ್ರಧಾನ ಅಂಗವಾದ ಉತ್ಪಾದನ ವಿಭಾಗ ಮಿಕ್ಕ ವಿಭಾಗಗಳಿಂದ ದೂರವಾಗಿ ಉಳಿಯುವಂತಿಲ್ಲ. ಉತ್ಪಾದನ ಕಾರ್ಯದಲ್ಲಿ ನಿರತನಾದ ವ್ಯವಸ್ಥಾಪಕನಿಗೆ ಇತರ ಎಲ್ಲ ವಿಭಾಗಗಳ ಸಹಾಯ ಸಹಕಾರ ಅತ್ಯಂತ ಅವಶ್ಯ. ಉತ್ಪಾದಿಸ ಲಿರುವ ಪದಾರ್ಥಕ್ಕೆ ಬೇಡಿಕೆ ಇದೆಯೆ, ಇಲ್ಲವೆ-ಎಂಬುದನ್ನು ಮೊಟ್ಟಮೊದಲು ಆತ ವಿಕ್ರಯ ವಿಭಾಗದ ಮುಖ್ಯಸ್ಥನಿಂದ ತಿಳಿದುಕೊಳ್ಳಬೇಕು. ಬೇಡಿಕೆ ಇಲ್ಲದ ಪಕ್ಷದಲ್ಲಿ ಅದಕ್ಕೆ ಮಾರುಕಟ್ಟೆ ಸೃಷ್ಟಿ ಸಾಧ್ಯವೇ? ಮಾರುಕಟ್ಟೆಯಲ್ಲಿ ಯಾವ ಬಗೆಯ ಪದಾರ್ಥಕ್ಕೆ ಬೇಡಿಕೆಯುಂಟು ಎಂಬುದನ್ನು ಆತ ತಿಳಿದುಕೊಳ್ಳಬೇಕು. ಉತ್ಪಾದನೆಯಲ್ಲಿ ತೊಡಗಲು ಸಾಕಷ್ಟು ಕೆಲಸಗಾರರು ಇರುವರೆ, ಇಲ್ಲವೆ ಎಂಬುದನ್ನು ಕಾರ್ಮಿಕಾಧಿಕಾರಿಯಿಂದ ಅರಿತುಕೊಳ್ಳುವುದಗತ್ಯ. ಯಂತ್ರ ಸಜ್ಜಿಕೆ, ಆರ್ಥಿಕ ಸಹಾಯ, ಸರಕು ಸರಬರಾಜು ಇತ್ಯಾದಿ ವಿಷಯಗಳ ಬಗ್ಗೆ ಆಯಾ ವಿಭಾಗಾಧಿಕಾರಿಗಳೊಡನೆ ಚರ್ಚಿಸಿ ಅನಂತರ ಉತ್ಪಾದನೆಯ ಯೋಜನೆ ತಯಾರಿಸಬೇಕು. ಈ ಯಾವ ಪೂರ್ವ ಸಿದ್ಧತೆಯೂ ಇಲ್ಲದೆಯೇ ಉತ್ಪಾದನೆಯಲ್ಲಿ ತೊಡಗಿದರೆ ತೊಂದರೆ ಉದ್ಭವಿಸುವುದು ಖಂಡಿತ. ಕಚ್ಚಾ ಸಾಮಗ್ರಿ ಸರಬರಾಜು ಇಲ್ಲದೆಯೂ ಯಂತ್ರಸೌಲಭ್ಯ ದೊರೆಯದೆಯೂ ಕೆಲಸಗಾರರ ಅಭಾವದಿಂದಲೂ ಉತ್ಪಾದನೆ ಸ್ಥಗಿತಗೊಳ್ಳಬಹುದು.

ಪದಾರ್ಥಗಳಿಗಾಗಿ ಗ್ರಾಹಕರಿಂದ ಆದೇಶ ಬಂದಾಗ, ಅಂಥ ಬೇಡಿಕೆಯನ್ನು ಒಪ್ಪಿಸಿ ಕೊಳ್ಳುವ ಮೊದಲು ಆಡಳಿತ ಮಂಡಲಿಯವರು ಉತ್ಪಾದನ ವ್ಯವಸ್ಥಾಪಕನ ಸಲಹೆ ಪಡೆಯುವ ವಾಡಿಕೆಯುಂಟು. ಈತನ ಸಲಹೆಯ ಮೇಲೆಯೇ ಸರಕು ಸರಬರಾಜು ಮಾಡುವ ಅಥವಾ ಬಿಡುವ ನಿರ್ಧಾರ ಕೈಗೊಳ್ಳಲಾಗುತ್ತದೆ.

ಉತ್ಪಾದನ ನಿರ್ವಹಣೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ, ಎಲ್ಲ ಕಾರ್ಯಗಳನ್ನೂ ಸುಲಲಿತವಾಗಿಯೂ ಅಚ್ಚುಕಟ್ಟಾಗಿಯೂ ನಿರ್ವಹಿಸುವ ಉದ್ದೇಶದಿಂದ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಇದಕ್ಕೆ ಸಹಾಯಕವಾಗಿ ವಿಭಾಗಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದವೆಂದರೆ: 1 ಉತ್ಪನ್ನ ಸಂಶೋಧನೆ ವಿಭಾಗ, 2 ಉತ್ಪನ್ನ ಕಾರ್ಯದ ನಿಯೋಜನೆ ಹಾಗೂ ನಕ್ಷಾಲೇಖನ ವಿಭಾಗ, 3 ಸಾಮಗ್ರಿವಿವರಣ, ಸಂಗ್ರಹಣ, ದಾಸ್ತಾನು ವಿಭಾಗ, 4 ಪ್ರಮಾಣ ವಿಭಾಗ, 5 ಪರೀಕ್ಷಣ ವಿಭಾಗ, 6 ಗುಣ ನಿಯಂತ್ರಣ ವಿಭಾಗ, 7 ವೆಚ್ಚ ವಿಶ್ಲೇಷಣೆ ಮತ್ತು ವೆಚ್ಚ ನಿಯಂತ್ರಣ ವಿಭಾಗ ಹಾಗೂ 8 ಕಾರ್ಯವಿಧಾನದ ಅಧ್ಯಯನ ಹಾಗೂ ಸಿದ್ದತಾ ವಿಭಾಗ, ಸಣ್ಣ ಸಣ್ಣ ಉದ್ಯಮಸಂಸ್ಥೆಗಳಲ್ಲಿ ಮೇಲ್ಕಂಡ ವಿಭಾಗಗಳ ಕಾರ್ಯವನ್ನೆಲ್ಲ ಉತ್ಪಾದನೆಯ ವಿಭಾಗವೇ ನಿರ್ವಹಿಸಬೇಕಾಗುತ್ತದೆ.

ಇನ್ನು ಕೆಲವು ಸಂಸ್ಥೆಗಳು ಉತ್ಪಾದನ ಕಾರ್ಯವನ್ನು ನಿರ್ವಹಿಸುವ ರೀತಿ ಭಿನ್ನವಾದದ್ದು. ಅಲ್ಲಿ ಈ ಕಾರ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ : 1 ಕಾರ್ಯಾತ್ಮಕ ವ್ಯವಸ್ಥೆ (ಫಂಕ್ಷನಲ್ ಆರ್ಗನೈಸೇóಷನ್) ಮತ್ತು 2 ಪಂಕ್ತಿ ಮತ್ತು ಸಿಬ್ಬಂದಿ ವ್ಯವಸ್ಥೆ (ಲೈನ್ ಅಂಡ್ ಸ್ಟ್ಯಾಫ್ ಆರ್ಗನೈಸೇóಷನ್).

ಶ್ರಮವಿಭಜನೆ ಹಾಗೂ ವಿಶೇಷ ಪರಿಶ್ರಮಗಳಿಂದ ಲಭಿಸುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ಉತ್ಪಾದನ ಕಾರ್ಯ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳು ವುದು ಕಾರ್ಯಾತ್ಮಕ ವ್ಯವಸ್ಥೆಯ ಹೊಣೆ. ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವುದು ಸಾಧ್ಯವಾಗುವಂತೆ ನಾನಾ ವಿಭಾಗಗಳನ್ನು ತೆರೆದು ಉತ್ಪಾದನ ಕಾರ್ಯ ನೇರಮಾರ್ಗದಲ್ಲಿ ನಡೆಯುವಂತೆ ಏರ್ಪಡಿಸುವ ವ್ಯವಸ್ಥೆಯೇ ಪಂಕ್ತಿ ಮತ್ತು ಸಿಬ್ಬಂದಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸೂಚನೆಗಳು ಮೇಲಿನ ಅಧಿಕಾರಿಯಿಂದ ಕೆಳಗಿನ ಅಧಿಕಾರಿಗೆ ಕ್ರಮವಾಗಿ ಬರುತ್ತವೆ. ಅದೇ ರೀತಿಯಲ್ಲಿ ಕೆಳಗಿನಿಂದ ವಿಷಯಗಳು ಹಂತ ಹಂತವಾಗಿ ಮೇಲೇರಿ ಉನ್ನತಾಧಿಕಾರಿಯನ್ನು ತಲುಪುತ್ತವೆ.

ಉತ್ಪಾದನೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವು ಸಮಸ್ಯೆಗಳು ಸಾಮಾನ್ಯ, ಸುಲಭವಾಗಿ ಪರಿಹಾರ್ಯ. ಮತ್ತೆ ಕೆಲವು ಹೆಚ್ಚು ಮುಖ್ಯ, ಜಟಿಲ. ಇಂಥವುಗಳ ಪರಿಹಾರ ಸುಲಭವೇನಲ್ಲ; ಆದರೆ ಇವನ್ನು ಹಾಗೆಯೇ ಬಿಡಲೂ ಸಲ್ಲ. ಅಂದರೆ ಈ ಸಮಸ್ಯೆಗಳ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲೇ ಬೇಕಾಗುತ್ತದೆ, ಪರಿಹಾರ ಕಂಡು ಹಿಡಿಯಲೇ ಬೇಕಾಗುತ್ತದೆ.
ಉತ್ಪಾದನೆಯ ಕಾರ್ಯಕ್ಕೆ ಬೇಕಾಗುವ ಜನ, ಧನ, ಸಾಮಗ್ರಿ, ಉತ್ಪಾದನಕಾಲ ಇತ್ಯಾದಿಗಳನ್ನು ಯೋಗ್ಯರೀತಿಯಲ್ಲಿ ಆರಿಸಲೇಬೇಕಾಗುತ್ತದೆ. ಆಗ ಆರ್ಥಿಕ, ತಾಂತ್ರಿಕ ಮತ್ತು ಮಾನವೀಯ ಸಮಸ್ಯೆಗಳು ಉದ್ಭವಿಸುತ್ತವೆ. ಒಂದೊಂದೂ ಒಂದು ದೃಷ್ಟಿಯಿಂದ ಅತಿಮುಖ್ಯವೆನಿಸಿದರೂ ಮತ್ತೊಂದು ದೃಷ್ಟಿಯಿಂದ ಹಾನಿಕರವೆನಿಸಬಹುದು. ತಾಂತ್ರಿಕ ದೃಷ್ಟಿಯಿಂದ ಲಾಭಕರವೆನಿಸಿದ್ದು ಆರ್ಥಿಕವಾಗಿ ನಷ್ಟಕರವಾಗಿರಬಹುದು. ಏನೇ ಆದರೂ ಸಮಸ್ಯೆಗಳನ್ನು ಪರಿಹರಿಸುವಾಗ ಮಾನವೀಯತೆಗೆ ಪ್ರಾಶಸ್ತ್ಯ ಕೊಡುವುದೂ ಅಗತ್ಯವಾದೀತು.

ಉತ್ಪಾದನೆಯ ಸಮಸ್ಯೆಗಳನ್ನು ಪರಿಹರಿಸುವ ಸುಲಭಮಾರ್ಗವೆಂದರೆ ಅವುಗಳ ವಿಶ್ಲೇಷಣೆ; ಚಿಕ್ಕ ತುಂಡುಗಳಾಗಿ ಅವುಗಳ ವಿಭಜನೆ. ಮೊದಲು ಸಾಮಾನ್ಯವಾದ ಸಣ್ಣ ಸಣ್ಣ ಸಮಸ್ಯೆಗಳನ್ನು ಮೂಲ ಸಮಸ್ಯೆಯಿಂದ ಬೇರ್ಪಡಿಸಿಕೊಳ್ಳಬೇಕು. ಅನಂತರ ಆ ಪ್ರತಿಯೊಂದು ಸಮಸ್ಯೆಯೂ ನಿರ್ದಿಷ್ಟ ಉಪಸಮಸ್ಯೆಗಳೊಡನೆ ಬೆರೆಯುವಂತೆ ಮಾಡಿ ಪರೋಕ್ಷ ಮಾರ್ಗದಿಂದ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಕಚ್ಚಾಸಾಮಗ್ರಿಯಿಂದ ಪರಿಪೂರ್ಣ ಪದಾರ್ಥದ ತಯಾರಿಕೆಯೇ ಮುಖ್ಯ ಸಮಸ್ಯೆ. ಈ ಸಮಸ್ಯೆಯನ್ನು ವಿಶ್ಲೇಷಿಸಿದರೆ ಕಚ್ಚಾಸಾಮಗ್ರಿಯ ಸಮಸ್ಯೆ. ಕಾರ್ಮಿಕರ ಸಮಸ್ಯೆ, ಆರ್ಥಿಕ ಸಮಸ್ಯೆ, ಯಂತ್ರೋಪಕರಣಗಳ ಸಮಸ್ಯೆ ಈ ರೀತಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮೊದಲು ಸರಕಿನ ಸಮಸ್ಯೆಯನ್ನು ತೆಗೆದುಕೊಂಡು ಎಷ್ಟು, ಯಾವಾಗ, ಹೇಗೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಂಡರೆ ಮೂಲಭೂತ ಸಮಸ್ಯೆಗೆ ಉತ್ತರ ದೊರೆಯುತ್ತದೆ.

ಮುನ್ಸೂಚನೆ
ಯಾವ ಪದಾರ್ಥ ತಯಾರು ಮಾಡುವುದಕ್ಕೂ ಮುಂಚೆ ಆ ವಸ್ತುವಿಗೆ ಉತ್ತಮ ಬೇಡಿಕೆಯ ಭವಿಷ್ಯ ಇದೆಯೆ ಇಲ್ಲವೆ ಎಂಬುದನ್ನು ಅರಿಯಬೇಕು. ಇದಕ್ಕಾಗಿ ಮಾರುಕಟ್ಟೆಯ ಸಂಶೋಧನೆ ನಡೆಸಬೇಕು. ಇದು ಗ್ರಾಹಕರ ನೈಜ ಬೇಡಿಕೆಯನ್ನು ತಿಳಿಸುತ್ತದೆ. ಅನುಭೋಗಿಗಳಿಗೆ ಯಾವ ತರದ ಪದಾರ್ಥ ಯಾವ ಕಾಲದಲ್ಲಿ ಎಷ್ಟು ಬೆಲೆಗೆ ಬೇಕಾಗಿದೆ ಎಂಬುದು ಗೊತ್ತಾಗುತ್ತದೆ. ಇದರಿಂದ ಉತ್ಪಾದಕ ಸುಲಭವಾಗಿ ಅದೇ ತೆರದ ಪದಾರ್ಥವನ್ನೇ ತಯಾರುಮಾಡಿ ಲಾಭ ಸಂಪಾದನೆಮಾಡಬಹುದು. ಕೆಲವು ವೇಳೆ ಹೊಸ ಪದಾರ್ಥ ತಯಾರುಮಾಡಲು ಹೊರಟರೆ ಅದಕ್ಕೆ ಬೇಡಿಕೆ ಹುಟ್ಟುವಂತೆ ಮಾಡಲು ಸಾಧ್ಯವಿದೆಯೆ, ಎಂದರೆ ಇದಕ್ಕೆ ಮಾರುಕಟ್ಟೆ ಸೃಷ್ಟಿಸಬಹುದೆ (ಕ್ರಿಯೇಟಿಂಗ್ ದಿ ಮಾರ್ಕೆಟ್) ಎಂಬುದನ್ನು ತಿಳಿಯುವುದು ಅತಿ ಮುಖ್ಯ. ಅಂಥ ಸಾಧ್ಯತೆ ಇದ್ದರೆ ತತ್ಕ್ಷಣದಲ್ಲೇ ಅದನ್ನು ಸೃಷ್ಟಿಸಲು ಎಲ್ಲ ಬಗೆಯ ಪ್ರಯತ್ನವನ್ನೂ ಮಾಡಬೇಕು. ಇದಕ್ಕೆ ವಿಕ್ರಯವಿಭಾಗದ ಪೂರ್ಣ ಸಹಕಾರ ಅಗತ್ಯ.

ವಿಕ್ರಯ ವಿಭಾಗ ಮಾರುಕಟ್ಟೆಯ ಸಂಶೋಧನೆಯ ಸಹಾಯದಿಂದ ವಿಕ್ರಯದ ಅಂದಾಜು ಪಟ್ಟಿಯನ್ನು ತಯಾರುಮಾಡಬೇಕು. ಈ ಪಟ್ಟಿಯಲ್ಲಿ ಬೇಡಿಕೆ ಇರುವ ಪದಾರ್ಥದ ಗುಣ, ಲಕ್ಷಣ, ಬೆಲೆ, ಪ್ರಮಾಣ ಉಪಯೋಗ, ಸಂರಕ್ಷಣೆ, ರವಾನಿಸಬೇಕಾದ ದಿನ, ಇದಕ್ಕೆ ಇರುವ ಬೇಡಿಕೆ, ಮುಂದಿನ ಅಂದಾಜು ಬೇಡಿಕೆ ಇತ್ಯಾದಿ ವಿವರಗಳನ್ನು ಕೊಟ್ಟಿರಬೇಕು. ಈ ಪಟ್ಟಿಯನ್ನು ಉತ್ಪಾದನ ವ್ಯವಸ್ಥಾಪಕನಿಗೆ ತಲುಪಿಸಬೇಕು.
ವಿಕ್ರಯದ ಅಂದಾಜು ಪಟ್ಟಿಯ ಆಧಾರದ ಮೇಲೆ ಉತ್ಪನ್ನದ ಅಂದಾಜು ಪಟ್ಟಿಯನ್ನು ತಯಾರಿಸುವುದು ಉತ್ಪಾದನ ವ್ಯವಸ್ಥಾಪಕನ ಕೆಲಸ. ಈ ಪಟ್ಟಿ ಉತ್ಪಾದನೆಗೆ ಬೇಕಾಗುವ ಸಕಲ ಸಲಕರಣೆ, ಜನ ಮತ್ತು ಸಾಮಗ್ರಿಗಳ ವಿವರಣೆ ನೀಡುತ್ತದೆ. ಈ ಪಟ್ಟಿಯನ್ನು ತಯಾರುಮಾಡುವುದಕ್ಕೆ ಮುಂಚೆ ಕೆಳಕಂಡ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿರಬೇಕು.

ಸಾಮಗ್ರಿಗಳು ದಾಸ್ತಾನಿನಲ್ಲಿ ಬೇಕಾಗುವಷ್ಟು ಪ್ರಮಾಣದಲ್ಲಿ ಇವೆಯೆ? ಇಲ್ಲವೆ? ಇಲ್ಲದಿದ್ದರೆ ಸಕಾಲದಲ್ಲಿ ಸಾಮಗ್ರಿಗಳನ್ನು ಸರಬರಾಜು ಮಾಡಿಕೊಳ್ಳಬಹುದೆ? ಎಷ್ಟು ಸರಕನ್ನು ಕೊಳ್ಳಬೇಕು? ಇದಕ್ಕೆ ಹಣವಿದೆಯೆ? ಈಗ ಇರುವ ಕಾರ್ಮಿಕರೇ ಸಾಕೆ? ಇಲ್ಲದಿದ್ದರೆ ಯಾವ ಬಗೆಯ ಕೆಲಸಗಾರರನ್ನು ಎಷ್ಟು ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಬೇಕು? ಇದಕ್ಕೆ ತಕ್ಕ ಯಂತ್ರಗಳು ಇವೆಯೆ ಇಲ್ಲವೆ? ತಯಾರಿಕೆಯ ಕಾಲದಲ್ಲಿ ಯಾವುದಾದರೂ ತೊಂದರೆ ಉದ್ಭವಿಸಿದರೆ ಅದನ್ನು ನಿವಾರಿಸುವ ಶಕ್ತಿ ಇದೆಯೆ? ಹೀಗೆ ಬಗೆ ಬಗೆಯ ಸಮಸ್ಯೆಗಳಿಗೆ ಉತ್ತರ ಪಡೆದು ಕೊಳ್ಳಬೇಕು.

ಇವು ಇಂಥ ಇನ್ನೂ ಹಲವು ಸಮಸ್ಯೆಗಳೂ ಹೊಸಪದಾರ್ಥ ತಯಾರು ಮಾಡುವಾಗ ಉದ್ಭವಿಸುವಂಥವು. ಹಿಂದಿನಿಂದ ತಯಾರು ಮಾಡುತ್ತಿರುವ ಪದಾರ್ಥಗಳಿಗಾಗಲಿ ಅಥವಾ ಹಳೆಯ ಸಂಸ್ಥೆಗಳಿಗಾಗಲಿ ಇಷ್ಟೊಂದು ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೂ ಕಾಲದೇಶಗಳ ಬದಲಾವಣೆಯ ದೃಷ್ಟಿಯಿಂದ ಹೊಸ ಬೇಡಿಕೆ ಪುರೈಸುವಾಗ ಈ ಸಮಸ್ಯೆಗಳು ಬಾರದಿರವು.
ಉತ್ಪನ್ನ ಅಂದಾಜು ಪಟ್ಟಿಯನ್ನು ತಯಾರುಮಾಡಿ ಅದನ್ನು ಆಡಳಿತ ಮಂಡಳಿಗೆ ಕಳುಹಿಸಬೇಕು. ಆಡಳಿತ ಮಂಡಳಿಯವರು ಅದರ ಯುಕ್ತಾಯುಕ್ತತೆಯನ್ನು ಕೂಲಂಕಷವಾಗಿ ಚರ್ಚಿಸಿ ಅನಂತರ ನಿರ್ಧಾರ ಕೈಗೊಳ್ಳುತ್ತಾರೆ.

ಗ್ರಾಹಕರ ಆದೇಶಾನುಸಾರ ಪದಾರ್ಥ ತಯಾರುಮಾಡುವ ಸಂಸ್ಥೆಗಳಿಗೆ ಇಷ್ಟೊಂದು ಸಮಸ್ಯೆಗಳಿರುವುದಿಲ್ಲ. ತಯಾರಿಸುವ ವಸ್ತುವಿನ ರೂಪರೇಖೆಯನ್ನು ಗ್ರಾಹಕರೇ ಕೊಟ್ಟಿರುವುದ ರಿಂದಲೂ ಬೇಡಿಕೆಯನ್ನು ಸೃಷ್ಟಿಮಾಡುವ ಹೊಣೆ ಸಂಸ್ಥೆಗೆ ಇಲ್ಲದಿರುವುದರಿಂದಲೂ ಉತ್ಪನ್ನ ಅಂದಾಜು ಪಟ್ಟಿಯನ್ನು ತಯಾರುಮಾಡಿಕೊಂಡರೆ ಸಾಕು. ಆದರೆ ಮುಂದಿನ ಬೇಡಿಕೆಯನ್ನು ನಿರೀಕ್ಷಿಸಿ ಈಗಲೇ ಪದಾರ್ಥ ತಯಾರಿಕೆಯಲ್ಲಿ ತೊಡಗುವ ಸಂಸ್ಥೆಗಳು ಅಂದಾಜುಪಟ್ಟಿಗಳನ್ನು ವಿವರವಾಗಿ ತಯಾರಿಸಬೇಕು.

ಉತ್ಪಾದನ ಯೋಜನೆ ಮತ್ತು ನಿಯಂತ್ರಣ: ಪದಾರ್ಥೋತ್ಪಾದನೆಯ ನಿರ್ಧಾರ ಕೈಗೊಂಡ ಮೇಲೆ ಯಾವರೀತಿಯಲ್ಲಿ ಉತ್ಪಾದಿಸಬೇಕು ಎಂಬ ಸಮಸ್ಯೆ ಉದ್ಭವಿಸುತ್ತದೆ. ಇದಕ್ಕಾಗಿ ಒಂದು ಯೋಜನೆ ತಯಾರಿಸಿ ಆ ಯೋಜನೆಯ ಮಾರ್ಗದಲ್ಲೆ ಉತ್ಪಾದನ ಕಾರ್ಯ ನಡೆಯುವಂತೆ ನೋಡಿಕೊಳ್ಳಬೇಕು. ಉತ್ಪಾದನ ಕಾರ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡು, ಪ್ರತಿಯೊಂದು ಭಾಗದ ಕಾರ್ಯವನ್ನೂ ಸುಗಮವಾಗಿ ನಡೆಸಿಕೊಂಡು ಹೋಗಲು ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಬೇಕು. 1. ಪಥಸೂಚಿ (ರೂಟಿಂಗ್), 2. ಅನುಸೂಚಿ (ಷೆಡ್ಯೂಲಿಂಗ್), 3. ನಿಯಂತ್ರಣ (ಕಂಟ್ರೋಲಿಂಗ್) ಮತ್ತು 4. ರವಾನೆ (ಡಿಸ್ಪ್ಯಾಚ್)-ಇವೇ ಆ ನಾಲ್ಕು ಭಾಗಗಳು.

ಪಥಸೂಚಿ
ಯಾವ ರೀತಿಯಲ್ಲಿ ಉತ್ಪಾದಿಸಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡುವ ಒಂದು ಸೂಚನಾಪಟ್ಟಿ. ಮಾಡಬೇಕಾದ ಕೆಲಸದ ಸಮಸ್ತ ವಿವರಣೆಗಳನ್ನೂ ಇದು ನೀಡುತ್ತದೆ. ಯಾವ ಸಾಮಗ್ರಿಯಿಂದ ಯಾವ ಕಾಲದಲ್ಲಿ, ಯಾವ ಯಂತ್ರಗಳ ಸಹಾಯದಿಂದ ಯಾವ ರೀತಿಯಲ್ಲಿ ಎಷ್ಟು ತಯಾರುಮಾಡಬೇಕು, ಯಾವ ಯಾವ ಸಲಕರಣೆಗಳು ಎಷ್ಟೆಷ್ಟು ಬೇಕು, ಅವುಗಳ ವಿವರಣೆ, ಉತ್ಪಾದನೆಯ ಹಂತಗಳು ಇತ್ಯಾದಿ ವಿಷಯಗಳ ಬಗ್ಗೆ ಇಲ್ಲಿ ವಿವರಣೆ ಇರುತ್ತದೆ ಈ ಪಥಸೂಚಿ ಕೆಲಸದ ಆದೇಶ ನೀಡುವುದಲ್ಲದೆ ಉತ್ಪಾದನೆ ಕಾರ್ಯ ಸುಗಮವಾಗಿ ನಡೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಿಂದ ಕೆಲಸಗಾರರು ಪದೇ ಪದೇ ಕೆಲಸ ಮಾಡಲು ಮೇಲಿನ ಅಧಿಕಾರಿಗಳಿಂದ ಆದೇಶಕ್ಕಾಗಿ ಕಾಯಬೇಕಾದ ಅಗತ್ಯವಿರುವುದಿಲ್ಲ. ಇದರಿಂದ ಮಧ್ಯೆ ಮಧ್ಯೆ ಕೆಲಸ ಸ್ಥಗಿತಗೊಳ್ಳದೆ ನಿರಂತರವಾಗಿ ನಡೆಯಲು ಸಾಧ್ಯ. ಕೆಲಸ ಸ್ತಬ್ದಗೊಂಡದ್ದರಿಂದ ಆಗಬಹುದಾದ ನಷ್ಟಗಳನ್ನೂ ಇದು ನಿವಾರಿಸುತ್ತದೆ. ಈ ಪಥಸೂಚಿಯನ್ನು ಉತ್ಪಾದನೆಗೆ ಪೂರ್ವಭಾವಿಯಾಗಿಯೇ ತಯಾರಿಸಿ ಎಲ್ಲರಿಗೂ ಹಂಚಲಾಗುತ್ತದೆ.

ಅನುಸೂಚಿ
ಪಥಸೂಚಿ ಉತ್ಪಾದನ ಮಾರ್ಗವನ್ನು ಮಾತ್ರ ಸೂಚಿಸುತ್ತದೆ; ಅದರ ಕಾಲವನ್ನು ನಿಯಂತ್ರಿಸುವುದಿಲ್ಲ. ಎಲ್ಲಕ್ಕೂ ಕಾಲ ಅತಿಮುಖ್ಯ. ಉತ್ಪಾದನ ಕಾರ್ಯವನ್ನು ಕಾಲದಿಂದ ನಿಯುಕ್ತಗೊಳಿಸದಿದ್ದರೆ ಉತ್ಪಾದನ ಕಾರ್ಯದಲ್ಲಿ ಅನೇಕ ಘರ್ಷಣೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ನಿಯತಕಾಲಕ್ಕೆ ವಸ್ತುಗಳನ್ನು ತಯಾರುಮಾಡಲು ಸಾಧ್ಯವಾಗದೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ. ಕಾಲ ನಿರ್ಣಯವನ್ನೊಳಗೊಂಡ ಸೂಚನಾಪಟ್ಟಿಯೇ ಅನುಸೂಚಿ. ಯಾವಾಗ ವಸ್ತುಗಳನ್ನು ತರಿಸಿಕೊಳ್ಳಬೇಕು, ಯಾವಾಗ ವಸ್ತುಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ವರ್ಗಾಯಿಸಬೇಕು, ಯಾವ ಕಾಲದಲ್ಲಿ ಯಾವ ಯಂತ್ರವನ್ನು ಉಪಯೋಗಿಸಬೇಕು, ಎಂಬುದೆಲ್ಲ ಇಲ್ಲುಂಟು. ಉತ್ಪಾದನೆಯ ಪ್ರಾರಂಭದಿಂದ ಮುಕ್ತಾಯದವರೆಗೂ ಪ್ರತಿಯೊಂದು ಕ್ರಿಯೆಗೂ ಕಾಲ ಸೂಚಿಸಿರುತ್ತದೆ. ಉಪರಿಕಾಲದ (ಓವರ್ಟೈಮ್) ಕೆಲಸದ ಅವಶ್ಯಕತೆ, ಸಾಮಗ್ರಿಗಳ ಮತ್ತು ಉಪಸ್ಥಿತ ಸಲಕರಣೆಗಳ ನಿರ್ಮಾಣ ಇತ್ಯಾದಿಗಳ ಕಡೆಗೆ ಗಮನ ಹರಿಸಿ, ಉತ್ಪಾದನೆಯ ಕಾರ್ಯ ನಿರ್ದಿಷ್ಟ ಕಾಲದಲ್ಲಿ ಮುಗಿಯು ವಂತೆ ಇದನ್ನು ತಯಾರುಮಾಡಬೇಕು.

ನಿಯಂತ್ರಣ
ಉತ್ಪಾದನಕಾರ್ಯ ಯೋಜಿತ ರೀತಿಯಲ್ಲೇ ಸಾಗುವಂತೆ ನಿಯಂತ್ರಿಸು ವುದು ಅಗತ್ಯ. ತಯಾರಿಕೆಯ ಕಾಲದಲ್ಲಿ ಅನೇಕ ಕಾರಣಗಳಿಂದ ಉತ್ಪಾದನೆಯ ರೀತಿಯ ಬದಲಾವಣೆಯಾಗಿ ಉತ್ಪಾದಿಸುವ ಪದಾರ್ಥದ ಗುಣ. ಆಕಾರ, ಮತ್ತು ಪರಿಮಾಣ ದೃಷ್ಟಿಗಳಿಂದ ದೋಷಯುಕ್ತವಾಗುವ ಸಂಭವವುಂಟು. ಈ ರೀತಿ ದೋಷಯುಕ್ತ ಪದಾರ್ಥಗಳನ್ನು ತಯಾರುಮಾಡಿ ನಷ್ಟಹೊಂದುವುದಕ್ಕೆ ಬದಲಾಗಿ ತಯಾರಿಕೆಯ ಪ್ರತಿಯೊಂದು ಘಟ್ಟದಲ್ಲೂ ಪರೀಕ್ಷೆಗಳನ್ನು ನಡೆಸಿ ದೋಷ ನಿವಾರಿಸಿ ನಿಯಂತ್ರಿಸುವುದು ಅಗತ್ಯ.

ಪ್ರಚಲಿತ ಕಾರ್ಯದ ಪ್ರಗತಿಯನ್ನು ಯೋಜಿತಕಾರ್ಯದೊಡನೆ ತುಲನೆ ಮಾಡುವುದ ರಿಂದ ಕಾರ್ಯ ಬದಲಾವಣೆಯನ್ನಾಗಲಿ ಕಾರ್ಯದೋಷವನ್ನಾಗಲಿ ಸುಲಭವಾಗಿ ಕಂಡುಹಿಡಿ ಯಲು ಸಾಧ್ಯವಾಗುತ್ತದೆ. ಯಾವುದಾದರೂ ದೋಷಕಂಡುಬಂದಲ್ಲಿ ನಿಯಂತ್ರಣಾಧಿಕಾರಿ ಅದನ್ನು ತಕ್ಷಣವೇ ನಿವಾರಿಸಲು ಪ್ರಯತ್ನಿಸುತ್ತಾನೆ. ಉತ್ಪಾದನ ಕಾರ್ಯಪ್ರಗತಿಯನ್ನೂ ಮಧ್ಯೆ ಮಧ್ಯೆ ತಲೆದೋರುವ ಸಮಸ್ಯೆಗಳನ್ನೂ ಆಡಳಿತ ಮಂಡಳಿಗೆ ಈತನೇ ವರದಿಮಾಡಬೇಕು. ಈ ನಿಯಂತ್ರಣದಿಂದ ಮುಂದೆ ಆಗಬಹುದಾದ ನಷ್ಟವನ್ನು ತಪ್ಪಿಸಿಕೊಳ್ಳಲೂ ಶ್ರೇಷ್ಠಮಟ್ಟದ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರುಮಾಡಲೂ ಸಹಾಯವಾಗುತ್ತದೆ. ನಿಯಂತ್ರಣ ವಿಭಾಗ ಮುಖ್ಯವಾಗಿ ವಸ್ತುವಿನ ಗುಣ, ಶಕ್ತಿ, ವೆಚ್ಚ ಮುಂತಾದುವನ್ನು ನಿಯಂತ್ರಿಸುತ್ತದೆ.

ರವಾನೆ
ಉತ್ಪಾದನ ವಿಭಾಗಕ್ಕೆ ಸೂಕ್ತ ಸೂಚನೆಗಳನ್ನು ನೀಡುವುದು, ಉತ್ಪಾದನ ವಿಭಾಗದಿಂದ ಉತ್ಪಾದನೆಯ ಪ್ರಗತಿಯ ವಿಷಯವನ್ನು ತಿಳಿದುಕೊಂಡು ಆಡಳಿತ ಮಂಡಳಿಗೆ ಆ ವಿಷಯವನ್ನು ರವಾನಿಸುವುದು, ಪಥಸೂಚಿ ಮತ್ತು ಅನುಸೂಚಿಗಳ ಸಹಾಯದಿಂದ ಕೆಲಸಗಳನ್ನು ಹಂಚುವುದು, ಯಂತ್ರಗಳನ್ನು ಸಕಾಲಕ್ಕೆ ಒದಗಿಸುವುದು, ಮತ್ತು ಸಲಕರಣೆಗಳ ಸರಬರಾಜುಮಾಡುವುದು ಈ ಕಾರ್ಯಗಳ ಬಗ್ಗೆ ಯೋಗ್ಯ ತೀರ್ಮಾನ ಕೈಗೊಂಡು ಮೇಲ್ವಿಚಾರಕರ ಸಹಾಯದಿಂದ ಕೆಲಸಮಾಡಿಸುವುದು ಇವು ಈ ವಿಭಾಗದ ಕಾರ್ಯಭಾರ.

ಸಾಮಗ್ರಿಗಳ ಬಗ್ಗೆ ತೀರ್ಮಾನ 
ವಸ್ತುವಿನ ಉತ್ಪಾದನೆಗೆ ಅನೇಕ ವಿಧವಾದ ಸಾಮಗ್ರಿಗಳು ಅತ್ಯಾವಶ್ಯಕ. ಕಚ್ಚಾ ಸಾಮಗ್ರಿ. ಮುಂದುವರಿಯುತ್ತಿರುವ ಕೆಲಸ (ವರ್ಕ್-ಇನ್-ಪ್ರೊಗ್ರೆಸ್), ಶೋಧಿತ ಸಾಮಗ್ರಿ, ಪರೋಕ್ಷ ಸಾಮಗ್ರಿ ಮುಂತಾದವು ಹಣಕ್ಕಿಂತ ಹೆಚ್ಚು ಮುಖ್ಯ. ಕೆಲವು ವೇಳೆ ಹಣವನ್ನಾದರೂ ದೊರಕಿಸಿಕೊಳ್ಳಬಹುದು: ಆದರೆ ಸಾಮಗ್ರಿಗಳು ದೊರೆಯುವುದು ಕಷ್ಟ. ಉತ್ಪಾದನ ವಸ್ತುವಿನ ವೆಚ್ಚದಲ್ಲಿ ಸಾಮಾನ್ಯವಾಗಿ ಶೇಕಡಾ 50ರಿಂದ 80 ಭಾಗ ಸಾಮಗ್ರಿ ವೆಚ್ಚವೇ ಆಗಿರುತ್ತದೆ. ಆದ ಕಾರಣ ಇದರ ಬಗ್ಗೆ ಉತ್ಪಾದನೆಗೆ ಪೂರ್ವಭಾವಿಯಾಗಿ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳುವುದು ಅತಿಮುಖ್ಯ. ಸರಿಯಾದ ಕಾಲಕ್ಕೆ ಸಾಮಗ್ರಿಯ ಸರಬರಾಜು ನಿಂತುಹೋದರೆ ಉತ್ಪಾದನೆಯನ್ನೇ ನಿಲ್ಲಿಸಬೇಕಾಗುತ್ತದೆ. ಅಥವಾ ಉತ್ತಮಗುಣದ ಸಾಮಗ್ರಿ ಕೊಳ್ಳದೆ, ವೆಚ್ಚ ಕಡಿಮೆಮಾಡುವ ಉದ್ದೇಶದಿಂದ ಕಡಿಮೆ ಬೆಲೆಯ ಸಾಮಗ್ರಿ ಕೊಂಡು ಅದರಿಂದ ಪದಾರ್ಥ ತಯಾರಿಸಿದರೆ, ಗುಣಮಟ್ಟ ಕಡಿಮೆಯಾಗಿ ಬೇಡಿಕೆಯೇ ಇಲ್ಲದೆ ಸಂಸ್ಥೆ ನಷ್ಟ ಹೊಂದಬೇಕಾಗುತ್ತದೆ.

ಈ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉತ್ಪಾದಿಸಲು ಎಷ್ಟು ಸಾಮಗ್ರಿ ಬೇಕು? ಎಷ್ಟು ಸಾಮಗ್ರಿ ಉಗ್ರಾಣದಲ್ಲಿ ಇರಬೇಕು? ಎಷ್ಟನ್ನು ಕೊಳ್ಳಬೇಕು, ಎಷ್ಟನ್ನು ಸಂಸ್ಥೆಯಲ್ಲೇ ಉತ್ಪಾದಿಸಬೇಕು? ಇವುಗಳನ್ನು ನಿರ್ಧರಿಸುವುದು ಬಹಳ ಕಷ್ಟ. ಹೆಚ್ಚು ಸಾಮಗ್ರಿ ಕೊಂಡು ತಂದು ಇಟ್ಟುಕೊಂಡು ಅದರ ಉಪಯೋಗ ಬಹಳವಾಗಿಲ್ಲದಿದ್ದರೆ ಅದರ ಮೇಲೆ ನಿಯೋಜಿಸಿದ ಬಂಡವಾಳ ವ್ಯರ್ಥ. ದಾಸ್ತಾನು ವೆಚ್ಚ, ಸಾಮಗ್ರಿ ನಿರುಪಯೋಗಿಯಾಗುವ ಸಂಭವ, ನಷ್ಟ ಇತ್ಯಾದಿ ಕಾರಣಗಳಿಂದ ಸಾಮಗ್ರಿಯ ವೆಚ್ಚ ಏರಿ ಉತ್ಪಾದನವೆಚ್ಚ ಹೆಚ್ಚುತ್ತದೆ. ಒಂದು ವೇಳೆ ಕಡಿಮೆ ಪರಿಮಾಣದಲ್ಲಿ ಸಾಮಗ್ರಿ ಕೊಂಡು ದಾಸ್ತಾನು ಮಾಡಿದರೆ, ಕಡೆಯಲ್ಲಿ ಸಾಮಗ್ರಿ ಸಾಲದೆ ಉತ್ಪಾದನೆಯನ್ನು ನಿಲ್ಲಿಸಬೇಕಾಗಬಹುದು. ಗುಣ, ವೆಚ್ಚ, ಉಪಯೋಗ, ಗಾತ್ರ ಇತ್ಯಾದಿಗಳನ್ನು ಹೆಚ್ಚಿಗೆ ಗಮನದಲ್ಲಿ ಇಟ್ಟುಕೊಂಡು ಈ ಬಗ್ಗೆ ನಿರ್ಧರಿಸಬೇಕು. ಇದರ ಜೊತೆಯಲ್ಲಿ ಮಿತವಾಗಿ ಕೊಳ್ಳುವಿಕೆಯಿಂದ ಆಗುವ ಲಾಭ, ಉತ್ಪಾದನೆಗೆ ಅಗತ್ಯವಾಗಿ ಬೇಕಾಗುವ ಸಾಮಗ್ರಿಯ ಪರಿಮಾಣ, ದಾಸ್ತಾನಿನಲ್ಲಿ ಮೀಸಲಿಡಬೇಕಾದ ಪ್ರಮಾಣ ಇತ್ಯಾದಿ ವಿಷಯಗಳನ್ನೂ ತಿಳಿದುಕೊಂಡು ವೆಚ್ಚಕ್ಕೆ ಸಮತೂಗುವಂತೆ ಕೊಳ್ಳುವಿಕೆಯನ್ನು ನಿರ್ಧರಿಸಬೇಕು.

ಸಾಮಗ್ರಿಗಳನ್ನು ಕೊಳ್ಳುವುದೇ ಮುಖ್ಯವಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸುವುದೂ ಅವಶ್ಯಕ. ಹಣಕ್ಕಿಂತ ಮಿಗಿಲಾದ ಸಾಮಗ್ರಿಗಳು ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಅನೇಕ ಕ್ರಮ ಕೈಗೊಳ್ಳಬೇಕು.

ಸಾಮಗ್ರಿಗಳನ್ನು ಸ್ವೀಕರಿಸಿದ್ದಕ್ಕೂ ಅದನ್ನು ಅನೇಕ ವಿಭಾಗಗಳಿಗೆ ಸರಬರಾಜು ಮಾಡಿದ್ದಕ್ಕೂ ಸಾಮಗ್ರಿಗಳ ಖಾತೆಯಲ್ಲಿ ದಾಖಲೆ ಮಾಡಬೇಕು. ಪ್ರತಿಯೊಂದು ಸಾಮಗ್ರಿಗೂ ಒಂದೊಂದು ಸಂಕೇತ ಕೊಡಬೇಕು. ನಿರ್ದಿಷ್ಟ ಸಾಮಗ್ರಿಯನ್ನು ಸುಲಭವಾಗಿ ಪತ್ತೆ ಹಚ್ಚುವುದಕ್ಕೂ ಸಾಮಗ್ರಿಗಳ ವಿಷಯಗಳನ್ನು ಗೋಪ್ಯವಾಗಿ ಇಡುವುದಕ್ಕೂ ಈ ಸಂಕೇತ ಸಹಾಯಕ. ಪ್ರತಿಯೊಂದು ಸಾಮಗ್ರಿಗೂ ಗರಿಷ್ಠ ಪ್ರಮಾಣದ ಮಟ್ಟ, ಕನಿಷ್ಠ ಪ್ರಮಾಣದ ಮಟ್ಟ, ಅಪಾಯ ಪ್ರಮಾಣದ ಮಟ್ಟ, ಹೊಸದಾಗಿ ಸಾಮಗ್ರಿ ಸರಬರಾಜಿಗಾಗಿ ಬೇಡಿಕೆ ಕಳುಹಿಸಬೇಕೆಂಬುದನ್ನು ಸೂಚಿಸುವ ಮಟ್ಟ (ಆರ್ಡರಿಂಗ್ ಲೆವೆಲ್) ಇತ್ಯಾದಿ ಮಟ್ಟಗಳ ಸೂಚನೆಯಿಂದ ವೃಥಾ ಬಂಡವಾಳವನ್ನು ಸಾಮಗ್ರಿಗಳ ಮೇಲೆ ಹೂಡುವುದು ತಪ್ಪುವುದಲ್ಲದೆ, ಸರಕುಗಳನ್ನು ಸಕಾಲದಲ್ಲಿ ಸರಬರಾಜು ಮಾಡಿಕೊಳ್ಳಲು ಸಹಾಯಕವಾಗುತ್ತದೆ. ನಿರಂತರ ಸಾಮಗ್ರಿ ನಿಯಂತ್ರಣದಿಂದ (ಪರ್ಪೆಚುಯಲ್ ಇನ್ವೆಂಟರಿ ಕಂಟ್ರೋಲ್) ನಷ್ಟ ಹೊಂದಿದ, ಹಾಳಾದ, ಉಪಯೋಗಿಸದೆ ಇರುವ ವಸ್ತುಗಳ ಪತ್ತೆ ಸಿಕ್ಕಿ, ಈ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಸಾಧ್ಯ. ಯಾವ ಕಾಲದಲ್ಲಿ ಎಷ್ಟು ಸರಕು ಇದೆ, ಮುಂದಕ್ಕೆ ಎಷ್ಟು ಬೇಕು, ಈಗ ಇರುವ ವಸ್ತುವಿನ ಮೌಲ್ಯವೇನು-ಮುಂತಾದ ವಿಷಯಗಳನ್ನು ಇದು ತಿಳಿಸುತ್ತದೆ. ಇದರಿಂದ ಮುಂದಿನ ಯೋಜನೆ ತಯಾರು ಮಾಡುವುದು ಸುಲಭ.

ಈ ರೀತಿ ಪ್ರತಿಯೊಂದು ಹಂತದಲ್ಲೂ ಸಮಸ್ಯೆಗಳು ಕೈಮೀರಿ ಹೋಗದಂತೆ ಎಚ್ಚರ ವಹಿಸಿ, ಸಾಮಗ್ರಿಗಳ ಬಗ್ಗೆ ಯೋಗ್ಯ ತೀರ್ಮಾನ ಕೈಕೊಂಡು ಉತ್ಪಾದನೆಯ ನಿರ್ವಹಣೆ ಮಾಡಲು ಇದು ಸಹಾಯಕವಾಗಬೇಕು.

ಶ್ರಮನಿರ್ಣಯ
ಉತ್ಪಾದನೆಯ ಕಾರ್ಯದಲ್ಲಿ ಎರಡನೆಯ ಮುಖ್ಯ ಅಂಗವಾದ ಶ್ರಮದ ಪಾತ್ರ ಬಲು ಹಿರಿದು. ಸಾಮಗ್ರಿಗಳು ಇದ್ದಮಾತ್ರಕ್ಕೆ ಉತ್ಪಾದನೆ ಸಾಧ್ಯವಿಲ್ಲ. ಅವನ್ನು ಸೂಕ್ತರೀತಿಯಲ್ಲಿ ಹೊಂದಿಸಿ ಮಾರ್ಪಡಿಸಿದರೆ ಮಾತ್ರ ಪರಿಪೂರ್ಣ ಉತ್ಪನ್ನ ಸಾಧ್ಯ. ಈ ಮಾರ್ಪಾಟಿನ ಕಾರ್ಯ ನಡೆಯುವುದು ಕಾರ್ಮಿಕರಿಂದ. ಇವರ ಬಗ್ಗೆ ಸೂಕ್ತ ನಿರ್ಧಾರ ಅತ್ಯಂತ ಮುಖ್ಯ.

ಈ ಬಗ್ಗೆ ನಿರ್ಧಾರ ಕೈಕೊಳ್ಳಲು ಕಾರ್ಮಿಕಾಧಿಕಾರಿಯ ಸಹಾಯ ಪಡೆಯಬೇಕು. ಪದಾರ್ಥದ ಉತ್ಪಾದನೆಗೆ ಯಾವ ಯಾವ ಬಗೆಯ ಪರಿಣತಿ ಪಡೆದವರು ಎಷ್ಟು ಸಂಖ್ಯೆಯಲ್ಲಿ ಎಷ್ಟು ಕಾಲಕ್ಕೆ ಬೇಕು ಎಂಬುದನ್ನು ನಿರ್ಧರಿಸಿ, ಈಗ ಇರುವವರ ಸಂಖ್ಯೆಯೊಡನೆ ತುಲನೆಮಾಡಿ, ಸಾಲದಿದ್ದರೆ ನೇಮಕ ಮಾಡಿಕೊಳ್ಳಬೇಕು. ಶ್ರಮ ನಷ್ಟವಾಗದಂತೆ ನೋಡಿಕೊಳ್ಳುವ ಸಲುವಾಗಿ, ಕಾಲದ ಅಧ್ಯಯನ (ಟೈಮ್ ಸ್ಟಡಿ), ಚಲನೆಯ ಅಧ್ಯಯನ (ಮೋಷನ್ ಸ್ಟಡಿ) ಮುಂತಾದವುಗಳ ಸಹಾಯದಿಂದ ಪ್ರತಿಯೊಂದು ಕೆಲಸಕ್ಕೂ ಎಷ್ಟು ಕಾಲ ಬೇಕು, ಇದನ್ನು ಹೇಗೆ ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ತೀರ್ಮಾನಿಸಿ ಅದರಂತೆ ಮಾರ್ಗದರ್ಶನ ಮಾಡಬೇಕು. ಈ ಅಧ್ಯಯನದ ಫಲವಾಗಿ ಕೆಲಸಗಾರನ ಕುಶಲತೆಯನ್ನು ಅಳೆಯಲೂಬಹುದು. ಉತ್ತಮ ಕೆಲಸ ಪಡೆದುಕೊಳ್ಳಲೂಬಹುದು.
ಸೌಲಭ್ಯಗಳ ಬಗ್ಗೆ ನಿರ್ಧಾರ: ಬದಲಾಗುತ್ತಿರುವ ಬೇಡಿಕೆಗಳನ್ನು ಪುರೈಸಲು ಹೊಸ ಹೊಸ ಪದಾರ್ಥಗಳನ್ನು ತಯಾರು ಮಾಡಬೇಕಾಗುತ್ತದೆ. ಹಾಗೆ ತಯಾರು ಮಾಡಲು ಈಗ ಇರುವ ಸಾಧನ ಸೌಲಭ್ಯಗಳು ಉಪಯೋಗಕ್ಕೆ ಬಾರದೆ ಅವುಗಳ ಬದಲಾವಣೆಯ ಅವಶ್ಯಕತೆ ಕಂಡುಬರುತ್ತದೆ. ಪದಾರ್ಥ ಉತ್ಪಾದಿಸುವುದಕ್ಕೆ ಮೊದಲು ಭೌತಿಕ ಸೌಲಭ್ಯಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಸ್ಥಳ, ಯಂತ್ರ, ಸಾಮಗ್ರಿ, ಮೇಲ್ವಿಚಾರಣೆ ಇವೇ ಅಲ್ಲದೆ, ಮೊದಲು ಉತ್ಪಾದನೆಯ ಸ್ಥಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಉತ್ಪಾದಿಸುವ ವಸ್ತುವಿಗೆ ಹೆಚ್ಚಿನ ಬೇಡಿಕೆ ದೊರೆಯುವ, ಕಡಿಮೆ ಸಾಗಾಣಿಕೆ ವೆಚ್ಚದಲ್ಲಿ ಸಾಮಗ್ರಿಗಳು ದೊರೆಯುವ, ಉತ್ತಮ ಹವಾಗುಣವಿರುವ, ಸುಲಭ ದರದಲ್ಲಿ ಕೆಲಸಗಾರರು ದೊರೆಯುವ, ಪೈಪೋಟಿ ಅಥವಾ ಸಹಕಾರಿ ಕಾರ್ಖಾನೆಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯಲ್ಲಿರುವ, ಕಡಿಮೆ ಬೆಲೆಯಲ್ಲಿ ನಗರಗಳಿಗೆ ಹತ್ತಿರವಾಗಿರುವ, ಮುಂದೆ ಅಭಿವೃದ್ದಿಪಡಿಸಿಕೊಳ್ಳಲು ಉತ್ತಮ ಅವಕಾಶಹೊಂದಿರುವ ಸ್ಥಳವನ್ನು ಆರಿಸಬೇಕು.

ಸ್ಥಳದ ಆಯ್ಕೆಯಾದ ಮೇಲೆ ಭವನದ ಒಳಗಡೆಗೆ ಬೇಕಾದ ಸಾಧನ ಸಲಕರಣೆಗಳನ್ನು ಆರ್ಥಿಕ ಮತ್ತು ತಾಂತ್ರಿಕ ವಿಚಾರಗಳ ಕಡೆಗೆ ಗಮನಕೊಟ್ಟು ಆರಿಸಿಕೊಳ್ಳಬೇಕು. ಉತ್ಪಾದಿಸುವ ವಸ್ತುವಿನ ಗುಣಲಕ್ಷಣ ಮತ್ತು ಉತ್ಪಾದಿಸುವ ರೀತಿನೀತಿ ಇವುಗಳಿಗೆ ಅನುಗುಣವಾದ ಯಂತ್ರ ಸಾಧನ ಸಲಕರಣೆ ತರಬೇಕು. ಸ್ಥಳಾಭಾವವಿರುವುದರಿಂದ ಕಡಿಮೇ ಸ್ಥಳದಲ್ಲೇ ಸಾಮಗ್ರಿ ಸಂರಕ್ಷಿಸಲು, ಯಂತ್ರಗಳನ್ನು ಸ್ಥಾಪಿಸಲು, ಆಡಳಿತದ ಕಾರ್ಯಗಳನ್ನು ನಿರ್ವಹಿಸಲು ಉತ್ಪಾದಿಸಿದ ಪದಾರ್ಥಗಳನ್ನು ಸಂಗ್ರಹಿಸಿ ಇಡಲು. ಉತ್ತಮ ವಾಹನಮಾರ್ಗ ಹೊಂದಲು ಯೋಜಕರು ಸ್ಥಳಮಾಡಿಕೊಡಬೇಕು. ಒಂದು ಸಲ ನಿರ್ಧರಿಸಿಕೊಂಡ ಸ್ಥಳವನ್ನು ಮತ್ತೊಂದು ಸಲ ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ಥಳದ ರೂಪರೇಖೆಯನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕು. 
ಯೋಜಿತ ಪದಾರ್ಥಗಳನ್ನು ತಯಾರು ಮಾಡಲು ಯಾವ ಯಾವ ಸಲಕರಣೆಗಳು ಬೇಕು ಎಂಬುದನ್ನು ಯೋಜಿಸಿ. ಹೆಚ್ಚು ಬಾಳಿಕೆ ಬರುವ, ಪದಾರ್ಥದ ಗುಣ ಹೆಚ್ಚಿಸುವ, ಚಿನ್ನಾಗಿ ಕೆಲಸಮಾಡುವ, ಯಂತ್ರೋಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ದೊರಕಿಸಿಕೊಳ್ಳಬೇಕು.

ಈ ರೀತಿಯಾಗಿ ಪ್ರತಿಯೊಂದು ವಿಚಾರದಲ್ಲೂ ವೆಚ್ಚದ ನಿಯಂತ್ರಣ ಮಾಡದಿದ್ದರೆ ಉತ್ಪಾದನ ವೆಚ್ಚ ಹೆಚ್ಚಾಗಿ, ಉತ್ಪನ್ನದ ಬೆಲೆ ಏರಿ, ಪದಾರ್ಥಕ್ಕೆ ಬೇಡಿಕೆ ಕಡಿಮೆಯಾಗಿ ಸಂಸ್ಥೆ ನಷ್ಟ ಹೊಂದುವ ಸ್ಥಿತಿಗೆ ಬರುತ್ತದೆ. ಈ ಎಲ್ಲ ವಿಷಯಗಳೂ ಉತ್ಪಾದನೆಯ ಕಾರ್ಯಕ್ಕೆ ಸಂಬಂಧಪಟ್ಟಿರುವುದರಿಂದ, ಉತ್ಪಾದನ ನಿರ್ವಾಹಕ ಅತ್ಯಂತ ಜಾಗರೂಕತೆ ಯಿಂದಲೂ ತೀಕ್ಷ್ಣಬುದ್ಧಿಯಿಂದಲೂ ಇವನ್ನೆಲ್ಲ ನಿರ್ವಹಿಸಬೇಕು. ಅಂದರೆ ಪ್ರತಿಯೊಂದು ಕಾರ್ಯವನ್ನೂ ಯುಕ್ತಾಯುಕ್ತ ಚಿಂತನೆಯಿಂದ ನಿರ್ಧರಿಸಿ. ಅನಂತರ ಪ್ರತಿಯೊಂದು ಘಟ್ಟದಲ್ಲೂ ಆಗಬಹುದಾದಂಥ ಕಷ್ಟ ನಷ್ಟಗಳನ್ನು ನಿಯಂತ್ರಿಸಿ ಪದಾರ್ಥಗಳ ಉತ್ಪಾದನೆ ಮಾಡುವುದೇ ಉತ್ಪಾದನ ನಿರ್ವಹಣೆ.	

ಉತ್ಪಾದನ ಮಟ್ಟ ರೇಖೆಗಳು
ಒಂದು ಗೊತ್ತಾದ ಉತ್ಪನ್ನ ಪರಿಮಾಣವನ್ನು ಪಡೆಯಲು ಸಾಧ್ಯವಾಗುವಂತೆ ಉತ್ಪಾದನಾಂಗಗಳನ್ನು ಯಾವ ಯಾವ ಪ್ರಮಾಣಗಳಲ್ಲಿ ಸಂಯೋಜಿಸಬಹುದೆಂಬುದನ್ನು ತೋರಿಸುವ ರೇಖೆಗಳು (ಪ್ರೊಡಕ್ಷನ್ ಕಾನ್ಟೂರ್ಸ್‌). ಇವುಗಳಲ್ಲಿ ಒಂದೊಂದು ರೇಖೆಯನ್ನೂ ಸಮೋತ್ಪನ್ನ ರೇಖೆ (ಐಸೊ-ಪ್ರಾಡಕ್ಟ್‌ ಕರ್ವ್), ಸಮಗಾತ್ರಿ (ಐಸೊಕ್ವಾಂಟ್), ಸಮಾನೋತ್ಪನ್ನ ರೇಖೆ (ಈಕ್ವಲ್-ಪ್ರಾಡಕ್ಟ್‌ ಕರ್ವ್) ಅಥವಾ ಉತ್ಪನ್ನ ಔದಾಸಿನ್ಯ ರೇಖೆ (ಪ್ರಾಡಕ್ಟ್‌-ಇಂಡಿಫರೆನ್ಸ್‌ ಕರ್ವ್) ಎಂದು ಕರೆಯಬಹುದು.

ಆರ್ಥಿಕ ಸಿದ್ಧಾಂತಗಳಲ್ಲಿ ಬಳಸಲಾಗುವ ಅನೇಕ ನಕ್ಷೆಗಳಲ್ಲಿ ಎರಡೇ ಆಯಾಮಗಳಿರುತ್ತವೆ (ಡೈಮೆನ್ಷನ್ಸ್‌). ಆದ್ದರಿಂದ ಅವು ಎರಡು ಚರ (ವೇರಿಯಬಲ್) ಪರಿಮಾಣಗಳನ್ನು (ಕ್ವಾಂಟಿಟೀಸ್) ಮಾತ್ರ ತೋರಿಸಬಲ್ಲವು. (ಉದಾ : ಬೇಡಿಕೆ, ಸರಬರಾಜು). ಆದರೆ ಎರಡಕ್ಕಿಂತ ಹೆಚ್ಚು ಚರ ಪರಿಮಾಣಗಳಿರುವ ಸಂದರ್ಭಗಳೂ ಉಂಟು. ಉತ್ಪಾದನೆಯನ್ನು ಕುರಿತದ್ದು ಇಂಥ ಒಂದು ಸಂದರ್ಭ. ಇಲ್ಲಿ ಕನಿಷ್ಠ ಪಕ್ಷ ಮೂರು ಚರಗಳಿರುತ್ತವೆ (ಬಂಡವಾಳ, ಶ್ರಮ ಹಾಗೂ ಉತ್ಪನ್ನ). ಬಂಡವಾಳ ಯಾ ಶ್ರಮಗಳಲ್ಲಿ ಯಾವುದನ್ನು ವ್ಯತ್ಯಾಸಗೊಳಿಸಿದರೂ ಉತ್ಪತ್ತಿ ವ್ಯತ್ಯಾಸಗೊಳ್ಳುತ್ತದೆ. ಆದ್ದರಿಂದ ಇಲ್ಲಿ ಭೌಗೋಳಿಕ ವಿಧಾನವಾದ ಮಟ್ಟ ಪದ್ದತಿಯನ್ನನು ಸರಿಸಿ ನಕ್ಷೆ ರಚಿಸುವುದು ಅಗತ್ಯವಾಗುತ್ತದೆ. ಉತ್ಪನ್ನದ ಒಂದೊಂದು ಮಟ್ಟದಲ್ಲೂ ಉಳಿದೆರಡು ಚರಗಳನ್ನು (ಬಂಡವಾಳ, ಶ್ರಮ) ಯಾವ ಯಾವ ಪ್ರಮಾಣಗಳಲ್ಲಿ ಸಂಯೋಜಿಸ ಬಹುದೆಂಬುದನ್ನು (ಒಂದೊಂದು ಮಟ್ಟಕ್ಕೆ ಅನ್ವಯಿಸುವಂತೆ ಒಂದೊಂದು ಮಟ್ಟ ರೇಖೆ ಎಳೆಯುವುದರ ಮೂಲಕ) ತೋರಿಸಬಹುದು.
ಉತ್ಪಾದನೆಗೂ ಉತ್ಪಾದನಾಂಗಗಳಿಗೂ ಇರುವ ಕಾರಕ-ಪರಿಣಾಮ ಸಂಬಂಧಗಳನ್ನು ಗಣಿತಜ್ಞರು ಉತ್ಪಾದನ ಅನುಚರಿಯ (ಪ್ರೊಡಕ್ಷನ್ ಫಂಕ್ಷನ್) ಮೂಲಕ ತೋರಿಸಿಕೊಡುತ್ತಾರೆ. ಒಂದು ನಿರ್ದಿಷ್ಟ ಉತ್ಪತ್ತಿಯನ್ನು ತಯಾರಿಸಲು ಬಳಸಬೇಕಾಗುವ ಕನಿಷ್ಠ ಉತ್ಪಾದನಾಂಗಗಳನ್ನು ಸೂಚಿಸುವುದು ಅಥವಾ ನಿರ್ದಿಷ್ಟ ಉತ್ಪಾದನಾಂಗಗಳನ್ನು ಬಳಸಿ ತಯಾರಿಸಬಹುದಾದ ಪರಮಾವಧಿ ಉತ್ಪತ್ತಿಯನ್ನು ತೋರಿಸುವುದೇ ಉತ್ಪಾದನ ಅನುಚರಿಯ ಉದ್ದೇಶ. ಆದರೆ ಉತ್ಪಾದನ ಅನುಚರಿ ನಿಗದಿಯಾದಂಥದೇನೂ ಅಲ್ಲ; ತಾಂತ್ರಿಕಮಟ್ಟ ಬದಲಾದಂತೆಲ್ಲ ಅದೂ ಬದಲಾಗುತ್ತಿರುತ್ತದೆ. ಜಾರಿಯಲ್ಲಿರುವ ತಾಂತ್ರಿಕಮಟ್ಟದಲ್ಲಿ ಉತ್ಪಾದನೆಯ ಮಟ್ಟ ಮತ್ತು ಉತ್ಪಾದನಾಂಗಗಳ ಸಂಬಂಧವನ್ನು ಇದು ನಿರೂಪಿಸುತ್ತದೆ. ಉದಾಹರಣೆಗೆ, ಥಿ ಅನ್ನು ಉತ್ಪನ್ನ ಪರಿಮಾಣವೆಂದೂ x1,x2,…xಟಿ ಗಳನ್ನು ಉತ್ಪಾದನಾಂಗಗಳ ಪರಿಮಾಣಗ ಳೆಂದೂ ಭಾವಿಸಿದರೆ ಉತ್ಪಾದನ ಅನುಚರಿಯನ್ನು ಈ ಕೆಳಗಿನಂತೆ ಬರೆಯಬಹುದು : 

ಙ =ಜಿ (x1,x2,…xಟಿ)

ಉತ್ಪತ್ತಿಯ ಪರಿಮಾಣ ಅದರ ಉತ್ಪಾದನಾಂಗಗಳ x1, x2,…xಟಿ ಗಳ ಪರಿಮಾಣಗಳನ್ನೇ ಅವಲಂಬಿಸಿದೆಯೆಂಬುದನ್ನು ಇದು ಸೂಚಿಸುತ್ತದೆ. ಈ ಸಮೀಕರಣದ ಪ್ರಕಾರ ಉತ್ಪಾದನಾಂಗ ಗಳ ಪರಿಮಾಣ ಬದಲಾದಂತೆ ಉತ್ಪತ್ತಿಯ ಪರಿಮಾಣವೂ ಬದಲಾಗುತ್ತದೆಂಬುದು ಸ್ಪಷ್ಟ. ಉದಾಹರಣೆಗೆ, ವಿವರಣೆಯನ್ನು ಸರಳಗೊಳಿಸುವ ಸಲುವಾಗಿ, ಉತ್ಪತ್ತಿಯ ಪರಿಮಾಣಕ್ಕೆ ಒಂದೇ ಉತ್ಪಾದನಾಂಗ x1 ಆಧಾರವೆಂದು ಇಟ್ಟುಕೊಳ್ಳೋಣ. (x1) ನ ಪರಿಮಾಣವನ್ನು ಅಧಿಕಗೊಳಿಸಿದಂತೆಲ್ಲ ಉತ್ಪತ್ತಿಯ ಪರಿಮಾಣವೂ ಅಧಿಕಗೊಳ್ಳುತ್ತದೆ. ಇವೆರಡರ ಸಂಬಂಧವನ್ನೂ ಸೂಚಿಸುವಂತೆ ಒಂದು ರೇಖೆಯನ್ನೆಳೆಯಬಹುದು. ಉತ್ಪಾದನಾಂಗಗಳು ಉತ್ಪತ್ತಿಯಾಗಿ ಪರಿವರ್ತನೆ ಹೊಂದುವ ಪ್ರಮಾಣವನ್ನು ಸೂಚಿಸುವುದರಿಂದ ಇದನ್ನು ತಾಂತ್ರಿಕ ಪರಿವರ್ತನೆಯ ವಕ್ರರೇಖೆ (ಟೆಕ್ನಿಕಲ್ ಟ್ರಾನ್ಸ್‌ಫರ್ಮೇಷನ್ ಕರ್ವ್) ಎನ್ನಬಹುದು. ಈ ಕೆಳಗಿನ ನಕ್ಷೆಯಲ್ಲಿ ಉತ್ಪಾದನಾಂಗಗಳ ಪರಿಮಾಣಗಳನ್ನು x ಅಕ್ಷದಲ್ಲೂ ಉತ್ಪತ್ತಿ ಪರಿಮಾಣವನ್ನು ಥಿ ಅಕ್ಷದಲ್ಲೂ ಗುರುತಿಸಿದೆ. 
0 ಬಿಂದುವಿನಿಂದ ನೇರವಾಗಿ ಔx, ಔಥಿ ಗಳಿಗೆ 450 ಯಲ್ಲಿರುವ ಔP ರೇಖೆ x1 ಉತ್ಪಾದನಾಂಗದ ವಿವಿಧ ಪರಿಮಾಣಗಳಿಗೆ ಲಭಿಸುವ ವಿವಿಧ ಉತ್ಪತ್ತಿ ಮಟ್ಟಗಳನ್ನು ಸೂಚಿಸುತ್ತದೆ. x1 ಉತ್ಪಾದನಾಂಗದಲ್ಲಿ ಹೆಚ್ಚುಕಡಿಮೆ ಮಾಡಿದಂತೆ ಉತ್ಪತ್ತಿ ಮಟ್ಟವೂ ಅದೇ ಪ್ರಮಾಣದಲ್ಲಿ ಏರಿಳಿಯುತ್ತದೆ. ಉದಾಹರಣೆಗೆ, ಉತ್ಪಾದನಾಂಗದ ಮಟ್ಟ ಔಒ ಆದರೆ ಅದರಿಂದ ಲಭಿಸುವ ಉತ್ಪತ್ತಿಯ ಮಟ್ಟ ಔಖ; ಔಒ’ಗೆ ಔಖ’ ಮತ್ತು ಔಒ”ಗೆ ಔಖ”. 

ಉತ್ಪಾದನಾಂಗದ (ಅಥವಾ ಉತ್ಪಾದನಾಂಗಗಳ) ಮಟ್ಟಕ್ಕೆ ಅನುಗುಣವಾಗಿ ಉತ್ಪತ್ತಿಯ ಮಟ್ಟದ ಬೆಳವಣಿಗೆಯಿರುತ್ತದೆಂಬುದು ನಕ್ಷೆ 1 ರಿಂದ ವ್ಯಕ್ತವಾಗುತ್ತದೆ. ಆದರೆ ಇವೆರಡಕ್ಕೂ ಬೇರೆ ಬಗೆಯ ಸಂಬಂಧಗಳಿರುವುದೂ ಸಾಧ್ಯ. ನಕ್ಷೆ 2 ರಲ್ಲಿ ಎರಡು ಮಾದರಿಯ ರೇಖೆಗಳನ್ನು ತೋರಿಸಲಾಗಿದೆ. ಔP ರೇಖೆ ಮೇಲಿನಿಂದ ತಗ್ಗಾಗಿದ್ದು (ಕಾನ್ಕೇವ್) ಅದರ ಓಟ (ಸ್ಲೋಪ್) ತೀವ್ರವಾಗಿದೆ. ಅಂದರೆ ಇಲ್ಲಿ ಉತ್ಪಾದನಾಂಗದ ಪರಿಮಾಣವನ್ನು ಹೆಚ್ಚಿಸಿದಂತೆ ಸರಾಸರಿ ಉತ್ಪತ್ತಿಯೂ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತದೆ. ಈ ಪ್ರವೃತ್ತಿಯನ್ನು ಏರುಮುಖ ಪ್ರತಿಫಲ ಸೂತ್ರ (ಲಾ ಆಫ್ ಇನ್ಕ್ರೀಸಿಂಗ್ ರಿಟನ್ರ್ಸ್‌) ವಿಶದಪಡಿಸುತ್ತದೆ. ಕೆಲವು ಉದ್ಯಮಗಳಲ್ಲಿ ಉತ್ಪಾದನಾಂಗಗಳನ್ನು ಹೆಚ್ಚು ಹೆಚ್ಚಾಗಿ ಬಳಸಿದಂತೆ ಅವುಗಳಲ್ಲಿ ಒಂದೊಂದನ್ನೂ ಅಧಿಕ ದಕ್ಷತೆಯಿಂದ ಬಳಸಲು ಸಾಧ್ಯವಾಗುವುದರಿಂದ ಬೃಹದ್ಗಾತ್ರ ಉತ್ಪಾದನೆಯ (ಲಾರ್ಜ್-ಸ್ಕೇಲ್ ಪ್ರೊಡಕ್ಷನ್) ಅನುಕೂಲ ಲಭಿಸುತ್ತದೆ. ಕೆಳಮುಖವಾಗಿ ತಗ್ಗಾಗಿರುವ ಔP’ ರೇಖೆ ಉತ್ಪಾದನೆಯನ್ನು ಕುರಿತು ಸೂಚಿಸುವ ಕಥೆಯೇ ಬೇರೆ. ಇಲ್ಲಿ ಉತ್ಪಾದನಾಂಗವನ್ನು ಹೆಚ್ಚಿಸಿದಂತೆ ಪ್ರತಿಫಲ ಇಳಿಮುಖವಾಗುತ್ತದೆ. ಉತ್ಪಾದನಾಂಗದ ಪರಿಮಾಣ ಹೆಚ್ಚಿಸಿದಂತೆ ಒಟ್ಟು ಉತ್ಪತ್ತಿ ಹೆಚ್ಚಬಹುದಾದರೂ ಅದರ ಸರಾಸರಿ ಯಾವ ವೇಗದಲ್ಲಿ ಇಳಿಯುತ್ತದೆಂಬುದು ಇದರಿಂದ ವ್ಯಕ್ತವಾಗುತ್ತದೆ. ಪ್ರತಿಯೊಂದು ಉತ್ಪತ್ತಿ ಘಟಕಕ್ಕೂ ಹೆಚ್ಚು ಹೆಚ್ಚು ಉತ್ಪಾದನಾಂಗ ಬಳಸಬೇಕಾಗುವುದೆಂದು ಇದರ ಅರ್ಥ.

ಮೇಲಿನ ವಿಶ್ಲೇಷಣೆಯಲ್ಲಿ ಒಂದು ಉತ್ಪಾದನಾಂಗವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಉತ್ಪತ್ತಿಯ ಮಟ್ಟದ ಬದಲಾವಣೆಗಳನ್ನು ಗಮನಿಸಲಾಯಿತು. ಒಂದು ಪದಾರ್ಥದ ಉತ್ಪತ್ತಿಗೆ ಕಾರಣವಾದ ಉತ್ಪಾದನಾಂಗಗಳು ಹಲವಾರು. ಆದ್ದರಿಂದ ಉತ್ಪಾದನ ಮೀಮಾಂಸೆ ಯಲ್ಲಿ ಉತ್ಪತ್ತಿಗೂ ಅನೇಕ ಉತ್ಪಾದನಾಂಗಗಳಿಗೂ ಸಂಬಂಧ ಕಲ್ಪಿಸಬೇಕಾಗುತ್ತದೆ. ನಕ್ಷೆ 3ರಲ್ಲಿ ವಿವಿಧ ಉತ್ಪತ್ತಿ-ಉತ್ಪನ್ನ ಪರಿಮಾಣಗಳಿಗೂ ಎರಡು ಉತ್ಪಾದನಾಂಗಗಳಿಗೂ ಸಂಬಂಧ ಕಲ್ಪಿಸಿ ಉತ್ಪನ್ನಮಟ್ಟ ರೇಖೆಗಳನ್ನು ಎಳೆಯಲಾಗಿದೆ.
ಉತ್ಪಾದನ ಮಟ್ಟರೇಖೆಯನ್ನು ಎಳೆಯುವುದಕ್ಕೆ ಮೊದಲು ಎರಡು ಅಭಿಗೃಹೀತಗಳನ್ನು (ಅಸಂಪ್ಷನ್ಸ್‌) ಇಟ್ಟುಕೊಳ್ಳಬೇಕಾಗುತ್ತದೆ. ಉತ್ಪತ್ತಿ ಪರಿಮಾಣ ಎರಡು ಉತ್ಪಾದನಾಂಗಗಳ ಪರಿಮಾಣಗಳನ್ನೇ ಅವಲಂಬಿಸಿದೆಯೆಂಬುದು ಮೊದಲನೆಯದು. ಹಾಗಿದ್ದ ಪಕ್ಷದಲ್ಲಿ ಉತ್ಪನ್ನ ಅನುಚರಿಯನ್ನು ಹೀಗೆ ಬರೆಯಬಹುದು : 

ಙ=ಜಿ (x1,x2)

x1 ಮತ್ತು x2 ಉತ್ಪಾದನಾಂಗಗಳನ್ನು ಪರಸ್ಪರವಾಗಿ ಪ್ರತಿನಿಧಾನಿಸಬಹುದೆಂಬುದು (ಸಬ್ಸ್ಟಿಟ್ಯೂಟ್) ಎರಡನೆಯ ಅಭಿಗೃಹೀತ. ಅಂಥ ಸಂದರ್ಭದಲ್ಲಿ ಈ ಉತ್ಪಾದನಾಂಗಗಳನ್ನು ಬೇರೆ ಬೇರೆ ಪರಿಮಾಣಗಳಲ್ಲಿ ಸಂಯೋಜಿಸಿ ಒಂದು ನಿರ್ದಿಷ್ಟ ಉತ್ಪತ್ತಿಯನ್ನು ಪಡೆಯಲು ಸಾಧ್ಯ ಎಂಬುದು ವ್ಯಕ್ತಪಡುತ್ತದೆ. x1 ಮತ್ತು x2 ಉತ್ಪಾದನಾಂಗಗಳನ್ನು ಕೆಳಗೆ ತೋರಿಸಿರುವ ವಿವಿಧ ಪರಿಮಾಣಗಳ ಸಂಯೋಜನೆಗಳಲ್ಲಿ ಯಾವುದರಿಂದಲಾದರೂ 100 ಉತ್ಪತ್ತಿ ಘಟಕಗಳನ್ನು ಪಡೆಯುವುದು ಸಾಧ್ಯವೆಂದು ಭಾವಿಸಿ ಸಂಯೋಜನೆಗಳ ನೆರವಿನಿಂದ ಒಂದು ರೇಖೆಯನ್ನು ರಚಿಸಬಹುದು :

x1		2		3		4
x2 		12		6		2

x1 ಉತ್ಪಾದನಾಂಗದ ವಿವಿಧ ಪರಿಮಾಣಗಳನ್ನು ಘಿ ಅಕ್ಷದಲ್ಲೂ x2 ವಿನದನ್ನು ಙ ಅಕ್ಷದಲ್ಲೂ ಗುರುತಿಸಿದರೆ ಔ ಬಿಂದುವಿನ ಕಡೆಗೆ ಉಬ್ಬಿರುವ ರೇಖೆಯೊಂದು ಮೂಡಿಬರುತ್ತದೆ (ನಕ್ಷೆ 3). ಇದು ಸಮೋತ್ಪಾದನ ರೇಖೆ. ಈ ರೇಖೆಯ ಮೇಲಿನ ಪ್ರತಿ ಬಿಂದುವೂ ಯಾವುದೇ ಒಂದು ಜೋಡಿಯ ಎರಡು ಉತ್ಪನ್ನಕಾರಕಗಳಿಂದ ಒಂದೇ ಮಟ್ಟದ ಉತ್ಪನ್ನವನ್ನು ಉತ್ಪಾದಿಸಬಹುದೆಂಬುದನ್ನು ತೋರಿಸುತ್ತದೆ.
ಸಮೋತ್ಪಾದನ ರೇಖೆಯ ಮುಖ್ಯ ಲಕ್ಷಣಗಳು ಎರಡು. ಮೊದಲನೆಯದಾಗಿ, ಈ ರೇಖೆ ಮೇಲಿನಿಂದ ಕೆಳಕ್ಕೆ ಇಳಿಮುಖವಾಗಿ, ಬಲಕ್ಕೆ ಜಾರುತ್ತದೆ. ಇದರಿಂದ ತಿಳಿದುಬರುವು ದೇನೆಂದರೆ, x2 ವನ್ನು ಕಡಿಮೆಗೊಳಿಸಿದಂತೆ ಉತ್ಪನ್ನಮಟ್ಟವನ್ನು ಒಂದೇ ಪ್ರಮಾಣದಲ್ಲಿ ಉಳಿಸಿಕೊಳ್ಳಬೇಕಾದಲ್ಲಿ x1ನ್ನು ಅಧಿಕಗೊಳಿಸಬೇಕಾಗುತ್ತದೆ ಎಂಬುದು. ಎರಡನೆಯದಾಗಿ, ಈ ರೇಖೆ ಔ ಕೋನಕ್ಕೆ ಸರಿಯಾಗಿ ಪೀನ ಮಧ್ಯವಾಗಿರುತ್ತದೆ (ಕಾನ್ವರ್ಸ್). ಇದರಿಂದ ಮತ್ತೊಂದಂಶ ಗೋಚರವಾಗುತ್ತದೆ. ಒಂದೇ ಮಟ್ಟದ ಉತ್ಪನ್ನ ಪಡೆಯಬೇಕಾದರೆ x2 ವನ್ನು ಕಡಿಮೆ ಮಾಡಿದಂತೆಲ್ಲ x1ನ್ನು ಹೆಚ್ಚು ಹೆಚ್ಚಾಗಿ ಪ್ರತಿನಿಧಿಸಬೇಕಾಗುತ್ತದೆ. ಇದು ಇಳಿಮುಖ ಅಂಚಿನ ಪ್ರತಿನಿಧಾನ ಸೂತ್ರ.

ಉತ್ಪತ್ತಿಯ 100 ಘಟಕಗಳನ್ನು ಪಡೆಯಲು ಅಗತ್ಯವಾದ ಉತ್ಪಾದನಾಂಗಗಳ ವಿವಿಧ ಪರಿಮಾಣಗಳ ಸಂಯೋಜನೆಯನ್ನು ಕುರಿತು ಮೇಲೆ ಹೇಳಿರುವಂತೆಯೇ ಉತ್ಪತ್ತಿಯ 200, 300, 400 ಘಟಕಗಳನ್ನು ಉತ್ಪಾದಿಸುವುದಕ್ಕೆ x1 ಮತ್ತು x2 ಉತ್ಪಾದನಾಂಗಗಳ ಪರಿಮಾಣಗಳ ನಾನಾ ಸಂಯೋಜನೆಗಳನ್ನು ಕುರಿತ ಸಮೋತ್ಪಾದನ ರೇಖೆಗಳನ್ನೂ ನಕ್ಷೆ 3 ರಲ್ಲಿ ಎಳೆಯಲಾಗಿದೆ. ಪ್ರತಿಯೊಂದು ರೇಖೆಯೂ ಒಂದೊಂದು ಉತ್ಪಾದನ ಮಟ್ಟವನ್ನು ಸೂಚಿಸುತ್ತದೆ. ಆದರೆ ಒಂದೊಂದು ರೇಖೆಯ ಪ್ರತಿಯೊಂದು ಬಿಂದುವೂ ಉತ್ಪಾದನಾಂಗಗಳ ಬೇರೆ ಬೇರೆ ಜೋಡಿಗಳಿಂದ ಲಭಿಸುವ ಒಂದೇ ಉತ್ಪತ್ತಿಯನ್ನು ತೋರಿಸುತ್ತದೆ. ಈ ರೇಖೆಗಳ ಸಮೂಹವನ್ನು ಸಮೋತ್ಪನ್ನ ರೇಖೆಗಳ ನಕ್ಷೆ ಅಥವಾ ಉತ್ಪಾದನ ಮಟ್ಟ ರೇಖೆಗಳ ನಕ್ಷೆಯೆನ್ನಬಹುದು.

ಈ ನಕ್ಷೆಯ ಮೂಲಕ ಪರಿಮಾಣಾನುಗುಣ ಪ್ರತಿಫಲವನ್ನು ತೋರಿಸಬಹುದು. ಔ ಬಿಂದುವಿನಿಂದ ಎಳೆದಿರುವ ಔಖ ಸರಳರೇಖೆ ಈ ನಾನಾ ಮಟ್ಟಗಳ ರೇಖೆಗಳನ್ನು ಂ, ಃ, ಅ ಮತ್ತು ಆ ಬಿಂದುಗಳಲ್ಲಿ ಛೇಧಿಸಿಕೊಂಡು ಹೋಗುತ್ತದೆ. ಂ ಬಿಂದುವಿನಲ್ಲಿ ಉತ್ಪತ್ತಿಯ 100 ಘಟಕಗಳನ್ನು ತಯಾರಿಸಲು x1 ಮತ್ತು x2 ಉತ್ಪಾದನಾಂಗಗಳ 4 ಮತ್ತು 2 ಘಟಕಗಳು ಆವಶ್ಯಕವೆಂಬುದನ್ನು ಸೂಚಿಸುತ್ತದೆ. ಉತ್ಪಾದನಾಂಗವನ್ನು 50%ರಷ್ಟು ಅಧಿಕಗೊಳಿಸಿದರೆ ಆಗ ಉತ್ಪತ್ತಿಯ ಮಟ್ಟ ಃ ಬಿಂದುವಿನವರೆಗೆ ಏರುತ್ತದೆ. ಇಲ್ಲಿ ಕ್ರಮವಾಗಿ 6 ಮತ್ತು 3 ಉತ್ಪಾದನಾಂಗಗಳಿಂದ 200 ಘಟಕಗಳಷ್ಟು ಉತ್ಪತ್ತಿ ಪಡೆಯಬಹುದೆಂಬುದು ವ್ಯಕ್ತ. ಎಂದರೆ ಉತ್ಪತ್ತಿಯ ಹೆಚ್ಚಳ 100% ಆದ್ದರಿಂದ ಂ ಬಿಂದುವಿನಿಂದ ಃ ವರೆಗೆ ಏರುಮುಖ ಪ್ರತಿಫಲ ಪ್ರವೃತ್ತಿ ಇದ್ದಹಾಗಾಯಿತು. ಹೀಗೆಯೇ ಃ ಬಿಂದುವಿನಿಂದ ಉತ್ಪಾದನಾಂಗಗಳನ್ನು 33.3% ಹೆಚ್ಚಿಸಿದರೆ (x1 =8, x2 =4 ) ಆಗ ಉತ್ಪತ್ತಿ ಮಟ್ಟ 300 ಘಟಕಗಳಿಗೆ ಏರುತ್ತದೆ. ಅ ಉತ್ಪಾದನಾಂಗವನ್ನು ಹೆಚ್ಚಿಸಿದ ಗತಿಯಲ್ಲೆ (1/3) ಉತ್ಪತ್ತಿಯೂ ಅಧಿಕಗೊಂಡ ಕಾರಣ (1/3) ಃ ಬಿಂದುವಿನಿಂದ ಅ ವರೆಗೆ ಅಚಲ ಪ್ರತಿಫಲ ಪ್ರವೃತ್ತಿ ಇದೆಯೆಂದ ಹಾಗಾಯಿತು. ಕೊನೆಯದಾಗಿ, ಉತ್ಪಾದನಾಂಗಗಳನ್ನು ಅ ಬಿಂದುವಿನಿಂದ 50% ರಷ್ಟು ಹೆಚ್ಚಿಸಿದರೆ (x = 12, x2 =6 ) ಆಗ ಉತ್ಪತ್ತಿಯ ಮೊತ್ತ 400 ಘಟಕ (25% ರಷ್ಟು ಅಧಿಕ). ಇದನ್ನು ಆ ಬಿಂದು ಸೂಚಿಸುತ್ತದೆ. ಈ ಘಟ್ಟದಲ್ಲಿ ಇಳಿಮುಖ ಪ್ರತಿಫಲ ಪ್ರವೃತ್ತಿ ಇದೆಯೆನ್ನಬಹುದು.
ಉತ್ಪಾದನ ಮಟ್ಟ ರೇಖೆಗಳು ಇನ್ನೂ ಒಂದು ದೃಷ್ಟಿಯಿಂದ ಉಪಯುಕ್ತವಾಗಿವೆ. ಒಂದೊಂದು ಮಟ್ಟದ ಉತ್ಪತ್ತಿಗೂ ಅವಶ್ಯವಾದ ಉತ್ಪಾದನಾಂಗಗಳನ್ನು ಯಾವ ಯಾವ ಪ್ರಮಾಣದಲ್ಲಿ ಸಂಯೋಜಿಸಬಹುದೆಂಬುದನ್ನು ಆಯಾ ರೇಖೆಗಳು ತೋರಿಸುತ್ತವೆ. 

ಒಂದು ಗೊತ್ತಾದ ಮಟ್ಟದಲ್ಲಿ ಉತ್ಪತ್ತಿ ಪಡೆಯಲು ಯಾವ ಬಗೆಯ ಸಂಯೋಜನೆ ಯಿಂದ ಉದ್ಯಮಿಗೆ ಉತ್ಪಾದನೆಯ ವೆಚ್ಚ ಅತ್ಯಂತ ಕಡಿಮೆಯೆಂಬುದನ್ನೂ ಅರಿಯಬಹುದು. ಹೆಚ್ಚು ಬೆಲೆಯ ಉತ್ಪಾದನಾಂಗಕ್ಕೆ ಬದಲಾಗಿ ಕಡಿಮೆ ಬೆಲೆಯನ್ನೂ ಉತ್ಪತ್ತಿಯ ಮಟ್ಟ ತಗ್ಗದಂತೆ ಯಾವ ಮಿತಿಯವರೆಗೆ ಬಳಸಬಹುದು ಎಂಬುದನ್ನು ಈ ರೇಖೆಗಳ ವಿಧಾನದಿಂದ ತಿಳಿಯುವುದು ಸಾಧ್ಯ.	(ಎ.ಬಿ.ಎ.)
ಉತ್ಪಾದನ ಮೀಮಾಂಸೆ: ಉತ್ಪಾದನೆಯ ವೆಚ್ಚಕ್ಕೂ ಉತ್ಪತ್ತಿಯ ಮೊತ್ತಕ್ಕೂ ಇರುವ ಸಂಬಂಧ. ಉತ್ಪಾದನ ಸಾಧನಗಳ ಬೇಡಿಕೆಯ ಮೂಲ. ಉತ್ಪಾದನಾಂಗಗಳ ಬೆಲೆಗಳ ನಿಷ್ಕರ್ಷೆ-ಮುಂತಾದವನ್ನು ಕುರಿತ ವಿಶ್ಲೇಷಣೆ, ಮೀಮಾಂಸೆ (ಥಿಯೊರಿ ಆಫ್ ಪ್ರೊಡಕ್ಷನ್).

ಶ್ರಮ, ಭೂಮಿ ಹಾಗೂ ಬಂಡವಾಳಗಳ ನಿರ್ದಿಷ್ಟ ಪರಿಮಾಣಗಳನ್ನು ಒಂದು ಪದಾರ್ಥದ ಉತ್ಪಾದನೆಯಲ್ಲಿ ತೊಡಗಿಸಿದರೆ ಅವುಗಳಿಂದ ದೊರಕುವ ಉತ್ಪತ್ತಿಯೆಷ್ಟು? ಈ ಪ್ರಶ್ನೆಗೆ ಉತ್ತರ ಎಲ್ಲ ಕಾಲ ದೇಶಗಳಲ್ಲೂ ಒಂದೇ ತೆರನಾಗಿರುವುದಿಲ್ಲ.

ತಾಂತ್ರಿಕ ಬೆಳವಣಿಗೆಯ ಮಟ್ಟವನ್ನೇ ಇದು ಅವಲಂಬಿಸಿದೆ. ಆದರೆ ಯಾವುದೇ ಒಂದು ನಿರ್ದಿಷ್ಟ ಕಾಲದಲ್ಲಿ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಉತ್ಪಾದನಾಂಗಗಳ ನಿರ್ದಿಷ್ಟ ಪರಿಮಾಣಗಳಿಗೆ ದೊರಕುವ ಪರಮಾವಧಿ ಉತ್ಪತ್ತಿ ನಿರ್ದಿಷ್ಟವಾಗಿರುತ್ತದೆ. ಉತ್ಪಾದಕನಿಗೆ ಈ ಸೂತ್ರ ಬಹಳ ಮುಖ್ಯ. ವಿವಿಧ ಉತ್ಪಾದನಾಂಗಗಳ ವಿವಿಧ ಪರಿಮಾಣಗಳ ಬಗೆಬಗೆಯ ಸಂಯೋಜನೆಗಳಿಗೆ ದೊರಕುವ ಉತ್ಪತ್ತಿಯೆಷ್ಟೆಂಬುದನ್ನು ಸೂಚಿಸುವ ಈ ನಿಯಮಕ್ಕೆ ಉತ್ಪಾದಕ ಅನುಚರಿಯೆಂಬುದು ಅರ್ಥಶಾಸ್ತ್ರ ನೀಡಿರುವ ಹೆಸರು.

ಆದರೆ ಈ ಸೂತ್ರ ಮೇಲುನೋಟಕ್ಕೆ ತೋರುವಷ್ಟು ಸರಳವಲ್ಲ. ಉತ್ಪಾದನೆಗೆ ಬಳಸಲಾಗುವ ನಾನಾ ಸಾಧನಗಳ ಬೆಲೆಗಳನ್ನೂ ಇವುಗಳಿಗೆ ಸಂಬಂಧಿಸಿದಂತೆ ಆ ಸಾಧನಗಳ ಉತ್ಪಾದಕತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕನಿಷ್ಠ ವೆಚ್ಚಕ್ಕೆ ಪರಮಾವಧಿ ಉತ್ಪತ್ತಿ ಬರುವಂಥ ಸಂಯೋಜನೆಯನ್ನು ಸಾಧಿಸುವುದು ದೀರ್ಘಕಾಲದ ನಿಷ್ಕೃಷ್ಟ ವಿವೇಚನೆಯಿಂದ ಮಾತ್ರ ಸಾಧ್ಯ. ಇದಕ್ಕೆ ಅಗತ್ಯವಾದ ನಾನಾ ಅಂಕಿ-ಅಂಶಗಳನ್ನು ಹೊಂದಿರಬೇಕಾದ್ದು ಅವಶ್ಯ. ಈ ನಾನಾ ಉತ್ಪಾದನ ಸಾಧನಗಳಲ್ಲಿ ಒಂದಕ್ಕೆ ಪ್ರತಿಯಾಗಿ ಇನ್ನೊಂದನ್ನು ಎಷ್ಟರಮಟ್ಟಿಗೆ ಬಳಸಬಹುದೆಂಬ ಪರಿಶೀಲನೆ ಕೈಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಉತ್ಪಾದನಾಂಗದ ಮಾರುಕಟ್ಟೆಯ ಬೆಲೆಯನ್ನೂ ಆ ಅಂಗವನ್ನು ಬಳಸುವುದರಿಂದ ದೊರಕುವ ಅಧಿಕ ಉತ್ಪತ್ತಿಯನ್ನೂ ಗಮನದಲ್ಲಿಟ್ಟು ಸಾಗಬೇಕಾಗುತ್ತದೆ.
ಉದಾಹರಣೆಗೆ ವ್ಯವಸಾಯವನ್ನು ತೆಗೆದುಕೊಳ್ಳಬಹುದು. ಒಂದು ಎಕರೆ ನೆಲದ ಬಾಡಿಗೆ 100 ರೂ. ಇದ್ದು, ಶ್ರಮದ ಒಂದು ಘಟಕದ ಬೆಲೆಯೂ (ಕೂಲಿ) 100ರೂ. ಇದ್ದರೆ ಆಗ ಇವೆರಡರ ಬೆಲೆ ಸಮವಾಗಿರುತ್ತದೆ. ಶ್ರಮದ ಪ್ರತಿಯೊಂದು ಘಟಕಕ್ಕೂ ನೆಲದ ಒಂದೊಂದು ಘಟಕದಿಂದ ದೊರಕುವ ಪ್ರತಿಫಲಕ್ಕಿಂತ ಹೆಚ್ಚು ಪ್ರತಿಫಲ ಎಲ್ಲಿಯ ವರೆಗೆ ದೊರಕುತ್ತಿರುತ್ತದೋ ಅಲ್ಲಿಯವರೆಗೆ ನೆಲದ ಬದಲು ಶ್ರಮವನ್ನು ಪ್ರತಿನಿಧಾನಿಸಬಹುದು. ಅತ್ಯಂತ ಕೊನೆಯ ಘಟ್ಟದಲ್ಲಿ (ಅಂಚಿನ ಘಟ್ಟದಲ್ಲಿ), ವೆಚ್ಚ ಮಾಡಿದ ಪ್ರತಿ ರೂಪಾಯಿಗೂ ಭೂಮಿ-ಶ್ರಮಗಳೆರಡರಿಂದಲೂ ಸಮನಾದ ಉತ್ಪತ್ತಿ ಬರುವಲ್ಲಿ, ಸಮಾನ ಬೆಲೆಯ ಭೂಮಿ ಶ್ರಮಗಳಲ್ಲಿ ಯಾವುದನ್ನು ನಿಯೋಜಿಸಿದರೂ ಸಮನಾದ ಉತ್ಪತ್ತಿಗಳು ಯಾವ ಘಟ್ಟದಲ್ಲಿ ದೊರಕುವುವೋ ಅಲ್ಲಿ ಈ ಪ್ರತಿನಿಧಾನವನ್ನು ನಿಲ್ಲಿಸಬೇಕಾಗುತ್ತದೆ. ವೆಚ್ಚ ಮಾಡಿದ ಹಣಕ್ಕೆ ಪರಮಾವಧಿ ಉತ್ಪತ್ತಿ ದೊರಕುವುದು ಈ ಘಟ್ಟದಲ್ಲಿ; ಇದು ಕನಿಷ್ಠ ವೆಚ್ಚದ ಘಟ್ಟ.

ಭೂಮಿಯ ಒಂದು ಘಟಕದ ಬೆಲೆಯೂ ಶ್ರಮದ ಒಂದು ಘಟಕದ ಬೆಲೆಯೂ ಸಮನಾಗಿರುವುದೆಂದು ಊಹಿಸಿಕೊಂಡರೆ ಮೇಲಿನ ಪ್ರತಿನಿಧಾನ ನಿಯಮವನ್ನು ಅನ್ವಯಿಸ ಬಹುದಾಗಿದೆ. ಆದರೆ ವಾಸ್ತವ ಜಗತ್ತಿನಲ್ಲಿ ಹೀಗಿರುವುದು ವಿರಳ. ಭೂಮಿಯ ಒಂದು ಘಟಕದ ಬೆಲೆ ಶ್ರಮದ ಒಂದು ಘಟಕದ್ದರ ಹತ್ತರಷ್ಟಿದೆಯೆಂದು ಊಹಿಸಿಕೊಂಡ ಪಕ್ಷದಲ್ಲಿ ಮೇಲೆ ವಿವರಿಸಿದ ಪ್ರತಿನಿಧಾನ ಯಾವ ಹಂತದಲ್ಲಿ ನಿಲ್ಲಬೇಕು-ಎಂಬುದು ಪ್ರಶ್ನೆ. ಭೂಮಿಯ ಒಂದು ಅಂಚಿನ ಘಟಕದಿಂದ ದೊರಕುವ ಉತ್ಪತ್ತಿ, ಶ್ರಮದ ಅಂಚಿನ ಘಟಕದ ಉತ್ಪತ್ತಿಯ ಹತ್ತರಷ್ಟಿರುವಲ್ಲಿ ಶ್ರಮದ ಪ್ರತಿನಿಧಾನವನ್ನು ನಿಲ್ಲಿಸಬೇಕಾಗುತ್ತದೆ. ಅದೇ ಪರಮಾವಧಿ ಸರಾಸರಿ ಉತ್ಪನ್ನದ ಅಥವಾ ಕನಿಷ್ಠ ಸರಾಸರಿ ವೆಚ್ಚದ ಹಂತ.

ಈ ಎರಡು ಉದಾಹರಣೆಗಳ ದೃಷ್ಟಿಯಿಂದ ಎಲ್ಲ ಪರಿಸ್ಥಿತಿಗಳಿಗೂ ಅನ್ವಯವಾಗುವ ಒಂದು ಸೂತ್ರವನ್ನು ರೂಪಿಸುವುದು ಸಾಧ್ಯ. ಒಂದು ಪದಾರ್ಥದ ಉತ್ಪಾದನೆಗೆ x1,x2,x3,……,xಟಿ ಸಾಧನಗಳು ಗ್ರಾಸಗಳಾಗಿದ್ದರೆ (ಇನ್ಪುಟ್ಸ್‌) ಈ ಒಂದೊಂದು ಸಾಧನದ ಅಂಚಿನ ಘಟಕದ ಹೂಡಿಕೆಯಿಂದಲೂ ಸಾಪೇಕ್ಷವಾಗಿ ಒಂದೇ ಮೊತ್ತದ ಉತ್ಪನ್ನ ದೊರಕುವ ಹಂತವೇ ಕನಿಷ್ಠ ವೆಚ್ಚದ ಹಂತ. ಇದು ಆ ಸನ್ನಿವೇಶದಲ್ಲಿನ ಸಮತೋಲ ಸ್ಥಿತಿ :

ಉತ್ಪಾದನೆಯ ಸಾಧನಗಳಲ್ಲಿ ಯಾವುದರ ಬೆಲೆಯಾದರೂ ಇಳಿದರೆ ಅದನ್ನು ಇತರ ಸಾಧನಗಳ ಸ್ಥಾನದಲ್ಲಿ ಇನ್ನಷ್ಟು ದೂರ ಪ್ರತಿನಿಧಾನಿಸುವುದು ಲಾಭದಾಯಕವಾಗುತ್ತದೆ. ಉತ್ಪಾದನೆಯ ಸಮತೋಲ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಆದರೆ ಬೆಲೆ ಏರಿದರೆ ಸಾಪೇಕ್ಷವಾಗಿ ಇತರ ಸಾಧನಗಳ ಪ್ರತಿನಿಧಾನ ಲಾಭದಾಯಕವಾಗಿ ಮತ್ತೆ ಹೊಸ ಸಮತೋಲಕ್ಕೆ ಹೊಂದಾಣಿಕೆಯಾಗುತ್ತದೆ. ಇದು ಉತ್ಪಾದನೆಯಲ್ಲಿ ಸಾಧನಗಳ ಸಂಯೋಜನೆಯ ನಿಯಮ. ಇಲ್ಲಿ ಇನ್ನೊಂದು ವಿಷಯವನ್ನು ಉಲ್ಲೇಖಿಸುವುದು ಅವಶ್ಯ. ಮೇಲಿನ ಚರ್ಚೆಯಲ್ಲಿ ಉತ್ಪನ್ನದ ಭೌತಿಕ ಮೊತ್ತವನ್ನು ಕುರಿತು ಚರ್ಚಿಸಲಾಗಿದೆ. ಆದರೆ ವಾಸ್ತವ ಜಗತ್ತಿನಲ್ಲಿ ಉತ್ಪಾದಕನಿಗೆ ಅಂತಿಮವಾಗಿ ಆಸಕ್ತಿಯಿರುವುದು ಉತ್ಪನ್ನದ ಬೆಲೆಯಲ್ಲೇ ಹೊರತು ಉತ್ಪನ್ನದಲ್ಲಲ್ಲ. ಆದ್ದರಿಂದ ಅಂಚಿನ ಉತ್ಪನ್ನಘಟಕದ ಬೆಲೆಯ ದೃಷ್ಟಿಯಿಂದಲೇ ಆತ ಈ ಎಲ್ಲ ವಿಚಾರ ನಡೆಸುತ್ತಾನೆ. ಒಬ್ಬ ಕಾರ್ಮಿಕನನ್ನು ನೇಮಿಸಿಕೊಂಡರೆ ಆತನ ಶ್ರಮದಿಂದ ಲಭಿಸುವ ಉತ್ಪನ್ನದಿಂದ ದೊರಕುವ ಹುಟ್ಟುವಳಿಯೇ ಅಂತಿಮವಾಗಿ ನಿರ್ಣಾಯಕವಾದದ್ದು.

ಮೇಲೆ ವಿವರಿಸಿದ ಸಮತೋಲ ಸ್ಥಿತಿಯಲ್ಲಿ ಭೌತಿಕ ಉತ್ಪನ್ನದ ಬದಲು ಅದರ ಹುಟ್ಟುವಳಿಯನ್ನು ಪರಿಗಣಿಸಿದರೂ ಈ ನಿಯಮ ಅಷ್ಟೇ ಸತ್ಯ. ಅಂತಿಮವಾಗಿ ಸಮತೋಲ ಘಟ್ಟದಲ್ಲಿ ಪ್ರತಿಯೊಂದು ಉತ್ಪಾದನ ಸಾಧನದ ಬೆಲೆಯೂ ಅದರಿಂದ ಲಭಿಸುವ ಅಂಚಿನ ಹುಟ್ಟುವಳಿ ಉತ್ಪನ್ನಕ್ಕೆ ಸಮನಾಗಿರುತ್ತದೆ. x1 ನ ಅಂಚಿನ ಹುಟ್ಟುವಳಿ ಉತ್ಪನ್ನ = x1ನ ಬೆಲೆ : x2ನ ಅಂಚಿನ ಹುಟ್ಟುವಳಿ ಉತ್ಪನ್ನ = x2 ನ ಬೆಲೆ : x3 ನ ಅಂಚಿನ ಹುಟ್ಟುವಳಿ ಉತ್ಪನ್ನ = x3 ನ ಬೆಲೆ........ xಟಿ ನ ಅಂಚಿನ ಹುಟ್ಟುವಳಿ ಉತ್ಪನ್ನ = xಟಿ ನ ಬೆಲೆ.

ಒಂದು ಪದಾರ್ಥ ತಯಾರಿಸಲು ಅಗತ್ಯವಾದ ಶ್ರಮ ಹಾಗೂ ಬಂಡವಾಳಗಳ ಯಾವ ಯಾವ ಸಂಯೋಜನೆಯಿಂದ ಎಷ್ಟೆಷ್ಟು ಉತ್ಪತ್ತಿ ಪಡೆಯಬಹುದೆಂಬುದರ ಬಗ್ಗೆ ಒಂದು ಉತ್ಪಾದನ ಸಂಸ್ಥೆಗೆ ಸಂಬಂಧಿಸಿದ ಅಂಕಿಗಳನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ. (ಉದಾಹರಣೆ : ಬಂಡವಾಳ 5 ಘಟಕಗಳನ್ನು ಶ್ರಮದ 2 ಘಟಕಗಳೊಂದಿಗೆ ಸಂಯೋಜಿಸಿದರೆ ಲಭಿಸುವ ಉತ್ಪನ್ನ 448 ಘಟಕ).
ಈ ಕೋಷ್ಟಕದಲ್ಲಿ ಗಮನಿಸಬಹುದಾದ ಅಂಶವೆಂದರೆ, ಒಂದು ನಿರ್ದಿಷ್ಟ ಸಂಖ್ಯೆಯ ವಸ್ತುವನ್ನು ಅನೇಕ ಸಂಯೋಜನೆಗಳ ಮೂಲಕ ತಯಾರಿಸಬಹುದೆಂಬುದು. ಇದರ ಆಧಾರದ ಮೇಲೆ ಕನಿಷ್ಠ ವೆಚ್ಚದಲ್ಲಿ ಪರಮಾವಧಿ ಹುಟ್ಟುವಳಿ ಉತ್ಪನ್ನ ತರುವ ಸಂಯೋಜನೆ ಯಾವುದೆಂಬುದನ್ನು ನಿರ್ಧರಿಸುವುದು ಸಾಧ್ಯ. ಮೇಲಿನ ಕೋಷ್ಟಕದ ಪ್ರಕಾರ 346 ಘಟಕಗಳ ಉತ್ಪತ್ತಿಯನ್ನು 4 ಬಗೆಯ ಸಂಯೋಜನೆಗಳಿಂದ ಪಡೆಯಬಹುದು : ಂ ಶ್ರಮ 1 + ಬಂಡವಾಳ 6; ಃ ಶ್ರಮ 2 + ಬಂಡವಾಳ 3 : ಅ ಶ್ರಮ 3 + ಬಂಡವಾಳ 2 ಮತ್ತು ಆ ಶ್ರಮ 6 + ಬಂಡವಾಳ 1. (ಈ ನಾಲ್ಕು ಬಗೆಯ ಸಂಯೋಜನೆಗಳೂ ಸಾಧ್ಯವೆಂಬುದು ಅಧ್ಯಾಹಾರ). ಇವುಗಳಲ್ಲಿ ಕಡಿಮೆ ವೆಚ್ಚದ, ಆದರೆ ಹೆಚ್ಚು ಹುಟ್ಟುವಳಿ ತರುವ ಸಂಯೋಜನೆ ಯೊಂದನ್ನು ಆಯ್ದುಕೊಳ್ಳಬೇಕು. ಈ ಆಯ್ಕೆಗೆ ಈ ಅಂಗಗಳ ಬೆಲೆಯೇ ಆಧಾರ. ಬಂಡವಾಳದ 1 ಘಟಕಕ್ಕೆ 3 ರೂ. ಮತ್ತು ಶ್ರಮದ 1 ಘಟಕಕ್ಕೆ 2 ರೂ. ಬೆಲೆಯಿದ್ದರೆ ಆಗ 1 ನೆಯ ಸಂಯೋಜನೆಯ ವೆಚ್ಚ (ರೂ.2+ರೂ.18) ರೂ. 20. ಹೀಗೆಯೇ ಉಳಿದ ಸಂಯೋಜನೆಗಳಲ್ಲಿ ಕ್ರಮವಾಗಿ ರೂ. 13 ರೂ. 12 ಮತ್ತು ರೂ 15 ಉತ್ಪಾದನ ವೆಚ್ಚ ತಗಲುತ್ತವೆ. ಇವುಗಳಲ್ಲಿ ಮೂರನೆಯ (ಅ) ಸಂಯೋಜನೆಯೇ (ಶ್ರಮ 3 + ಬಂಡವಾಳ 2) ಅತ್ಯಂತ ಕಡಿಮೆ ವೆಚ್ಚದ್ದು (ರೂ. 12). ಇದನ್ನು ನಕ್ಷೆ 1ರಲ್ಲಿ ತೋರಿಸಿದೆ.

(SS) ಎನ್ನುವುದು ಸಮೋತ್ಪನ್ನ ರೇಖೆ. ಈ ರೇಖೆಯ ಮೇಲಿನ ಯಾವ ಸಂಯೋಜನೆ ಯನ್ನು ತೆಗೆದುಕೊಂಡು ಉತ್ಪಾದನೆ ನಡೆಸಿದರೂ ಉತ್ಪನ್ನ ಒಂದೇ ಆಗಿರುತ್ತದೆ. ಶ್ರಮ ಹಾಗೂ ಬಂಡವಾಳಗಳ ಬೆಲೆ ತಿಳಿದರೆ. 1, 2, 3, 4ನೆಯ ಸಂಯೋಜನೆಗಳಿಗೆ (ಅಥವಾ SS) ರೇಖೆಯ ಯಾವುದೇ ಸಂಯೋಜನೆಗೆ) ತಗಲಬಹುದಾದ ಒಟ್ಟು ವೆಚ್ಚವನ್ನು ಲೆಕ್ಕ ಹಾಕಬಹುದು. ಅತ್ಯಂತ ಕಡಿಮೆ ವೆಚ್ಚದ ಸಂಯೋಜನೆಯನ್ನು ಆಯ್ದುಕೊಳ್ಳಲಿಕ್ಕಷ್ಟೆ ಇದು ಅತ್ಯಗತ್ಯ. ಶ್ರಮದ ಘಟಕದ ಬೆಲೆ ರೂ. 2 ಮತ್ತು ಬಂಡವಾಳದ ಬೆಲೆ ರೂ. 3 ಎಂದು ಊಹಿಸಿಕೊಂಡಾಗ ಸಾಧ್ಯವಿರುವ ಎಲ್ಲ ಸಂಯೋಜನೆಗಳ ಸಮಾನ ವೆಚ್ಚ ರೇಖೆಗಳನ್ನು ನಕ್ಷೆ 2ರಲ್ಲಿ ಕಾಣಿಸಿದೆ.

ನಕ್ಷೆ 3ರಲ್ಲಿ 1 ಮತ್ತು 2ನೆಯ ನಕ್ಷೆಗಳನ್ನು ಹೊಂದಿಸಲಾಗಿದೆ. ಸಮೋತ್ಪನ್ನ ರೇಖೆಯನ್ನು ಸಮಾನ ವೆಚ್ಚರೇಖೆ ಯಾವೆಡೆಯಲ್ಲಿ ಸ್ಪರ್ಶಿಸುತ್ತದೋ ಅದೇ ಆ ಉತ್ಪಾದನ ಮಟ್ಟದ ಕನಿಷ್ಠ ವೆಚ್ಚದ ಬಿಂದು.
ಇದೇ ಆ ಪರಿಸ್ಥಿತಿಯಲ್ಲಿ ಆ ಉತ್ಪತ್ತಿ ಮಟ್ಟಕ್ಕೆ ಅನುಗುಣವಾದ ಸಮತೋಲ ಬಿಂದು ಅಷ್ಟೇ ಅಲ್ಲ, ವೆಚ್ಚ ಹಾಗೂ ಉತ್ಪಾದನ ರೇಖೆಗಳ ಓಟಗಳು (ಸ್ಲೋಪ್) ಅ ಯಲ್ಲಿ ಸಮ. ಇದು ಆ ಉತ್ಪಾದನ ಮಟ್ಟಕ್ಕೆ ಸಂಬಂಧಿಸಿದಂತೆ ಅತ್ಯಂತ ಕನಿಷ್ಠ ವೆಚ್ಚದ ಸಾಧನ ಸಂಯೋಜನೆ (ಶ್ರಮ 3 + ಬಂಡವಾಳ 2). ಸಮೋತ್ಪಾದನ ರೇಖೆ ಔ ಬಿಂದುವಿನ ಕಡೆಗೆ ಉಬ್ಬಿರುತ್ತದೆಯೆಂಬುದೂ ಗಮನಿಸಬೇಕಾದ ಅಂಶ. ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ಪಾದನ-ಮಟ್ಟ-ರೇಖೆಗಳು.	(ಸಿ.ಕೆ.ಆರ್.) 

ಉತ್ಪಾದನ ವೆಚ್ಚ
ಸರಕುಗಳು ಕಾರ್ಖಾನೆಯಲ್ಲಿ ತಯಾರಾಗಿ ಮಾರಾಟಕ್ಕೆ ಸಿದ್ಧವಾಗುವ ಘಟ್ಟದ ವರೆಗೂ ತಗಲುವ ವೆಚ್ಚ (ಪ್ರೊಡಕ್ಷನ್ ಕಾಸ್ಟ್‌). ತಯಾರಿಕೆಯ ಘಟ್ಟದಲ್ಲಿ, ಆಡಳಿತ ಘಟ್ಟದಲ್ಲಿ, ಸರಕು ಮಾರಾಟ ಮತ್ತು ವಿತರಣೆಯ ಘಟ್ಟಗಳಲ್ಲಿ, ತಗಲುವ ಒಟ್ಟು ವೆಚ್ಚವನ್ನು ನಿಯಂತ್ರಿಸುವ ಹಾಗೂ ಕಡಿಮೆ ಮಾಡುವ ದೃಷ್ಟಿಯಿಂದ ಒಟ್ಟು ವೆಚ್ಚವನ್ನು ಅನೇಕ ಭಾಗಗಳಾಗಿ ವಿಂಗಡಿಸಿರುತ್ತಾರೆ. ಪ್ರತ್ಯಕ್ಷ ಸಾಮಗ್ರಿ (ಡೈರೆಕ್ಟ್‌ ಮೆಟೀರಿಯಲ್), ಪ್ರತ್ಯಕ್ಷ ಶ್ರಮ (ಕೂಲಿ) ಮತ್ತು ಪ್ರತ್ಯಕ್ಷ ಖರ್ಚುಗಳು ಮೂಲ ವೆಚ್ಚವೆಂದೂ (ಪ್ರೈಮ್ ಕಾಸ್ಟ್‌) ಪರೋಕ್ಷ ಸಾಮಗ್ರಿ, ಪರೋಕ್ಷ ಶ್ರಮ ಮತ್ತು ಪರೋಕ್ಷ ಖರ್ಚುಗಳು ಮೇಲುವೆಚ್ಚವೆಂದೂ (ಕಾಸ್ಟ್‌ ಓವರ್ ಹೆಡ್) ವಿಂಗಡಿಸಲಾಗಿದೆ. ಸರಕು ತಯಾರಿಕೆಯ ಘಟ್ಟದಲ್ಲಿ ಸಂಭವಿಸಿದ ಮೇಲುವೆಚ್ಚವನ್ನು ಉತ್ಪಾದನ ಮೇಲುವೆಚ್ಚವೆಂದೂ (ವಕ್ರ್ಸ್‌ ಆನ್-ಕಾಸ್ಟ್‌) ಆಡಳಿತ ಸಂಬಂಧವಾಗಿ ಮಾಡಿದ ಮೇಲುವೆಚ್ಚವನ್ನು ಆಡಳಿತ ಮೇಲುವೆಚ್ಚ ವೆಂದೂ ಮಾರಾಟದ ಘಟ್ಟದಲ್ಲಿ ಮಾಡಿದ್ದನ್ನು ವಿಕ್ರಯ ಮೇಲುವೆಚ್ಚವೆಂದೂ ಸರಕು ವಿತರಣೆಯ ಘಟ್ಟದಲ್ಲಾದದ್ದನ್ನು ವಿತರಣ ಮೇಲುವೆಚ್ಚವೆಂದೂ ವಿಂಗಡಿಸಲಾಗಿದೆ. ಉತ್ಪಾದನ ಮೇಲುವೆಚ್ಚದಲ್ಲಿ ಸರಕಿನ ತಯಾರಿಕೆಗೆ ಬೇಕಾಗುವ ಪರೋಕ್ಷ ಸಾಮಗ್ರಿ, ಪರೋಕ್ಷ ಶ್ರಮ ಮತ್ತು ಪರೋಕ್ಷ ಖರ್ಚುಗಳು ಅಡಕವಾಗಿರುತ್ತವೆ.
ಉತ್ಪಾದನ ವೆಚ್ಚದಲ್ಲಿ ಮೂಲ ವೆಚ್ಚಗಳೂ ಉತ್ಪಾದನ ಮೇಲುವೆಚ್ಚಗಳೂ ಉತ್ಪಾದನೆಯ ಘಟ್ಟದವರೆಗೂ ತಗಲಿದ ಆಡಳಿತ ಮೇಲುವೆಚ್ಚಗಳೂ ಅಡಕವಾಗಿರುತ್ತವೆ. ಪ್ರತ್ಯಕ್ಷ ಸಾಮಗ್ರಿ+ಪ್ರತ್ಯಕ್ಷ ಶ್ರಮ+ಪ್ರತ್ಯಕ್ಷ ಖರ್ಚು=ಮೂಲ ವೆಚ್ಚ. ಮೂಲ ವೆಚ್ಚ+ಉತ್ಪಾದನ ಮೇಲುವೆಚ್ಚ +ಉತ್ಪಾದನೆಯ ಘಟ್ಟದವರೆಗಿನ ಆಡಳಿತ ಮೇಲುವೆಚ್ಚ=ಉತ್ಪಾದನ ವೆಚ್ಚ. (ಎ.ಕೆ.ಎಸ್.ಎಚ್.)

ಉತ್ಪಾದನ ಸೂಚ್ಯಂಕ
ಒಂದು ದೇಶದ ಇಲ್ಲವೆ ಉತ್ಪಾದನಾಂಗದ ಉತ್ಪಾದನ ಮಟ್ಟದ ಬದಲಾವಣೆಯನ್ನು ಕಾಲ ಅಥವಾ ಪ್ರದೇಶಾನುಗುಣವಾಗಿ ಅಳೆಯಲು ಬಳಸುವ ಸಲಕರಣೆ (ಪ್ರೊಡಕ್ಷನ್ ಇಂಡೆಕ್ಸ್‌). ಉತ್ಪಾದನೆಯ ಏರಿಳಿತಗಳನ್ನಳೆಯಲು ಉಪಯೋಗಿಸುವ ಈ ಸಲಕರಣೆಯ ತಯಾರಿಕೆ ಸುಲಭವಲ್ಲದಿದ್ದರೂ ಇದರ ಹಿಂದಿರುವ ತಾತ್ತ್ವಿಕ ಸರಣಿ ಸರಳವಾದದ್ದು. ಒಂದು ಕಾರ್ಖಾನೆಯಲ್ಲಿ ಮೊದಲನೆಯ ವರ್ಷದಲ್ಲಿ ಒಂದು ಪದಾರ್ಥದ ಉತ್ಪತ್ತಿ 150 ಘಟಕಗಳಷ್ಟಿದ್ದು ಮರುವರ್ಷ 225 ಘಟಕಗಳಿಗೆ ಏರಿದರೆ ಆಗ ಮೊದಲನೆಯ ವರ್ಷದ್ದಕ್ಕಿಂತ ಎರಡನೆಯ ವರ್ಷದ ಉತ್ಪತ್ತಿ ಶೇಕಡಾ 50ರಷ್ಟು ಹೆಚ್ಚಿದ ಹಾಗಾಯಿತು. ಇಲ್ಲಿ ಮೊದಲನೆಯ ವರ್ಷದ ಉತ್ಪತ್ತಿ 100 ಎಂದು ಭಾವಿಸಿದರೆ ಎರಡನೆಯದರದು 150 (50% ಹೆಚ್ಚು) ಎಂದಾಗುತ್ತದೆ. ಇದೇ ರೀತಿಯಾಗಿ ಎರಡು ಕಾರ್ಖಾನೆಗಳ ಅಥವಾ ಪ್ರದೇಶಗಳ ಉತ್ಪಾದನೆಯನ್ನು ತೌಲನಿಕವಾಗಿ ಪರಿಶೀಲಿಸುವುದು ಸಾಧ್ಯ. ಇಂಥ ಪರಿಶೀಲನೆ ಗಳಿಗೆ ಒದಗಿ ಬರುವ ಶೇಕಡಾ ವಿಧಾನವೇ ಉತ್ಪಾದನ ಸೂಚ್ಯಂಕದ ವಿಧಾನ. ಪ್ರದೇಶಾನುಗುಣ ಸೂಚ್ಯಂಕಕ್ಕಿಂತ ಕಾಲಾನುಗುಣ ಸೂಚ್ಯಂಕವೇ ಹೆಚ್ಚಾಗಿ ಬಳಕೆಯಲ್ಲಿದೆ.

ಉತ್ಪಾದನ ಸೂಚ್ಯಂಕವನ್ನು ರಚಿಸಬೇಕಾದರೆ ಮೊಟ್ಟ ಮೊದಲಿಗೆ ಆಧಾರ ವರ್ಷವೊಂ ದನ್ನು ನಿರ್ಧರಿಸಬೇಕು. ಆ ವರ್ಷದ ಉತ್ಪಾದನೆಯನ್ನು ಆಧಾರವಾಗಿಟ್ಟುಕೊಂಡು (100) ಇತರ ವರ್ಷಗಳ (ಪರಾಮರ್ಶನ ವರ್ಷ) ಉತ್ಪಾದನೆಯನ್ನು ಇದರ ಶೇಕಡಾವಾರಾಗಿ ವ್ಯಕ್ತಪಡಿಸಬೇಕು. ಯಾವುದನ್ನು ಆಧಾರ ವರ್ಷವಾಗಿ ಆರಿಸಿಕೊಳ್ಳಬೇಕೆಂಬುದನ್ನು ನಿರ್ಧರಿಸು ವಾಗ ಎರಡು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕು. ಮೊದಲನೆಯದಾಗಿ, ಪರಾಮರ್ಶನ ವರ್ಷಕ್ಕಿಂತ ಆಧಾರವರ್ಷ ಅತಿ ಹಿಂದಿನದಾಗಿರಬಾರದು. ಅರ್ಥವ್ಯವಸ್ಥೆಯಲ್ಲಿ ದೀರ್ಘಕಾಲದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿದ್ದರೆ ಹೋಲಿಕೆ ಅವೈಜ್ಞಾನಿಕವಾಗುತ್ತದೆ.

ಎರಡನೆಯದಾಗಿ, ಆಧಾರವಾಗಿ ಆಯ್ಕೆಗೊಳ್ಳುವ ವರ್ಷ ಯಥಾಸ್ಥಿತಿಯದಾಗಿರಬೇಕು. ಆರ್ಥಿಕ ಚಟುವಟಿಕೆಯನ್ನು ಕುಂಠಿತಗೊಳಿಸುವ ಅಥವಾ ಉದ್ರೇಕಗೊಳಿಸುವ ಯಾವ ಘಟನೆಗಳೂ ಆ ವರ್ಷ ಇದ್ದಿರಬಾರದು. ಇಂಥ ಯಥಾಸ್ಥಿತಿ ವರ್ಷ ದೊರಕದಿದ್ದರೆ ಒಂದಕ್ಕಿಂತ ಹೆಚ್ಚು ವರ್ಷಗಳ ಸರಾಸರಿಯ ವಿಧಾನವನ್ನು ಅನುಸರಿಸಬಹುದು.

ಸೂಚ್ಯಂಕದಲ್ಲಿ ತೌಲನಿಕ ಪರಿಶೀಲನೆಗೆ ಒಳಪಡಿಸಬೇಕಾದ ಉತ್ಪಾದನೆಗಳು ಯಾವುವೆಂಬುದನ್ನು ತೀರ್ಮಾನಿಸುವುದೂ ಒಂದು ಮುಖ್ಯ ಹಂತ. ಯಾವುದೇ ದೇಶದಲ್ಲಿ ತಯಾರಾಗುವ ಪದಾರ್ಥಗಳು ಸಾವಿರಾರು. ಈ ಎಲ್ಲ ಪದಾರ್ಥಗಳ ಉತ್ಪಾದನೆಯಲ್ಲಾಗುವ ಬದಲಾವಣೆಯನ್ನೂ ಸೂಚ್ಯಂಕದಲ್ಲಿ ನಮೂದಿಸುವುದು ಸಾಧ್ಯವಿಲ್ಲವಾದ್ದರಿಂದ ಕೆಲವನ್ನು ಮಾತ್ರ ಆರಿಸಿಕೊಳ್ಳಬೇಕಾಗುತ್ತದೆ. ಈ ಆಯ್ಕೆಯಲ್ಲಿ ಗಮನದಲ್ಲಿಡಬೇಕಾದ ವಿಚಾರಗಳು ಮೂರು: (1) ಆದಷ್ಟು ಪ್ರಾತಿನಿಧಿಕವಾದ ಪದಾರ್ಥಗಳನ್ನು ಆರಿಸಿಕೊಳ್ಳಬೇಕು. (2) ಆದಷ್ಟು ಹೆಚ್ಚುಸಂಖ್ಯೆಯಲ್ಲಿ ಪದಾರ್ಥಗಳನ್ನು ಆರಿಸಿಕೊಳ್ಳಬೇಕು ಮತ್ತು (3) ಈ ಪದಾರ್ಥಗಳು ಆಧಾರ ವರ್ಷದಲ್ಲೂ ಪರಾಮರ್ಶನೆಗೆ ಒಳಗಾದ ವರ್ಷಗಳಲ್ಲೂ ಉತ್ಪಾದಿತವಾಗುತ್ತಿದ್ದಿರಬೇಕು.

ಉತ್ಪಾದನ ಸೂಚ್ಯಂಕ ಒಂದು ದೇಶದ ಒಟ್ಟು ಉತ್ಪಾದನೆಯಲ್ಲಿ ಒಂದು ಅವಧಿಯಲ್ಲಾಗಿ ರುವ ಬದಲಾವಣೆಯನ್ನು ತೋರಿಸಬೇಕಾಗಿರುವುದರಿಂದ ಇಲ್ಲಿ ಆರಿಸಲಾದ ಎಲ್ಲ ಪದಾರ್ಥಗಳ ಉತ್ಪಾದನೆಯ ಮೊತ್ತವನ್ನು ಕಂಡುಹಿಡಿಯುವುದು ಅವಶ್ಯ. ಆದರೆ ಈ ಕಾರ್ಯ ಕಷ್ಟಕರ. ಏಕೆಂದರೆ ಪದಾರ್ಥಗಳನ್ನು ಅಳೆಯುವ ವಿಧಾನಗಳು ಬೇರೆ ಬೇರೆ. ಉದಾಹರಣೆಗೆ ಬಟ್ಟೆ, ಧಾನ್ಯ ಹಾಗೂ ನಾನಾ ಸಲಕರಣೆಗಳನ್ನು ಒಂದೇ ರೀತಿಯಲ್ಲಿ ಮಾಪಿಸಲಾಗುವುದಿಲ್ಲ. ಒಂದರದು ಅಳತೆಯಾದರೆ ಇನ್ನೊಂದರದು ತೂಕ; ಮತ್ತೊಂದನ್ನು ಎಣಿಕೆಯಲ್ಲೇ ವ್ಯಕ್ತಪಡಿಸುವುದು ಸಾಧ್ಯ. ಆದ್ದರಿಂದ ಉತ್ಪಾದನೆಯ ಮೊತ್ತವನ್ನು ಕಂಡುಹಿಡಿಯುವಾಗ ಈ ನಾನಾ ಪರಿಮಾಣಗಳ ಮೌಲ್ಯವನ್ನೆಲ್ಲ ಹಣಕ್ಕೆ ಪರಿವರ್ತಿಸಬೇಕಾಗುತ್ತದೆ. ವಸ್ತುಗಳ ಮೌಲ್ಯನಿರ್ಧಾರ ಮಾಡುವಾಗ ಸಾಮಾನ್ಯವಾಗಿ ಸಗಟು ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಅದಲ್ಲದೆ ಬೆಲೆಗಳ ಏರಿಳಿತದಿಂದಾಗಿ ಪರಾಮರ್ಶನ ವರ್ಷದಲ್ಲಿ ಮೌಲ್ಯ ವಿರೂಪಗೊಳ್ಳದಿರುವಂತೆ ಎಚ್ಚರಿಕೆ ವಹಿಸಬೇಕು. ಆಧಾರವರ್ಷದ ಬೆಲೆಗಳಲ್ಲೇ ಎಲ್ಲ ಪದಾರ್ಥಗಳ ಮೌಲ್ಯ ನಿರ್ಧಾರ ಮಾಡುವುದು ಅಗತ್ಯ. ಆಧಾರವರ್ಷದ ಸಗಟು ಬೆಲೆಯ ಆಧಾರದ ಮೇಲೆ ಪ್ರತಿ ಪದಾರ್ಥದ ಒಟ್ಟು ಮೌಲ್ಯವನ್ನು ಆಧಾರವರ್ಷಕ್ಕೂ ಪರಾಮರ್ಶನ ವರ್ಷಕ್ಕೂ ಕಂಡುಹಿಡಿಯಬೇಕು. ಆಧಾರವರ್ಷದಲ್ಲಿ ತಯಾರಾದ ಪ್ರತಿಪದಾರ್ಥದ ಮೌಲ್ಯವನ್ನೂ 100 ಎಂದು ಭಾವಿಸಿ, ಪರಾಮರ್ಶನ ವರ್ಷದಲ್ಲಿ ತಯಾರಾದ ಅದೇ ಪದಾರ್ಥದ ಮೌಲ್ಯವನ್ನು ಆಧಾರವರ್ಷದ ಮೌಲ್ಯದ ಶೇಕಡಾ ರೂಪಕ್ಕೆ ಈ ಕೆಳಗಿನ ಸೂತ್ರದ ಮೂಲಕ ಪರಿವರ್ತಿಸಬೇಕು:

ಪರಾಮರ್ಶನ ವರ್ಷದ ಉತ್ಪನ್ನ x ಆಧಾರ ವರ್ಷದ ಸಗಟು ಬೆಲೆ
ಆಧಾರ ವರ್ಷದ ಉತ್ಪನ್ನ x ಆಧಾರ ವರ್ಷದ ಸಗಟು ಬೆಲೆ
ಇದನ್ನೇ ಸಂಕೇತಗಳ ಮೂಲಕ ಹೀಗೆ ತೋರಿಸಬಹುದು:

ಇಲ್ಲಿ q ಎಂಬುದು ಉತ್ಪನ್ನದ ಮೊತ್ತ;; ಠಿ ಎಂಬುದು ಬೆಲೆ. ಉಪಲಿಪಿಗಳಾದ (ಸಬ್ ಸ್ಕ್ರಿಪ್ಟ್‌್ಸ) 0 ಮತ್ತು 1 ಗಳು ಕ್ರಮವಾಗಿ ಆಧಾರ ಹಾಗೂ ಪರಾಮರ್ಶನ ವರ್ಷಗಳನ್ನು ಸೂಚಿಸುತ್ತವೆ. ಪರಾಮರ್ಶನ ವರ್ಷದಲ್ಲಿ ಉತ್ಪಾದಿಸಲಾದ ನಾನಾ ಪದಾರ್ಥಗಳ ಪರಿಮಾಣಗಳ ಮೌಲ್ಯಗಳ (ಆಧಾರವರ್ಷದ ಬೆಲೆಗಳಲ್ಲಿ) ಮೊತ್ತವನ್ನು  ಆಧಾರವರ್ಷದ ಉತ್ಪಾದನೆಯಾದ ಪರಿಮಾಣಗಳ ಮೌಲ್ಯಗಳ ಮೊತ್ತದಿಂದ  ಭಾಗಿಸಿ ಬಂದ ಸಂಖ್ಯೆಯನ್ನು 100ರಿಂದ ಗುಣಿಸಿದರೆ ಸಿಗುವುದೇ ಪರಾಮರ್ಶನ ವರ್ಷದ ಉತ್ಪಾದನ ಸೂಚ್ಯಂಕ .
ಆಧಾರವರ್ಷದಲ್ಲಿ ಪ್ರತಿವಸ್ತುವಿನ ಮೌಲ್ಯವನ್ನೂ 100 ಎಂದು ಪರಿಗಣಿಸುವ ಕಾರಣ ಆಧಾರವರ್ಷದ ಪದಾರ್ಥ ಸೂಚ್ಯಂಕ 100. ಉತ್ಪಾದನೆಯಲ್ಲಾದ ಬದಲಾವಣೆಗೆ ಅನುಸಾರ ವಾಗಿ ಪರಾಮರ್ಶನ ವರ್ಷದ ಸೂಚ್ಯಂಕ 100ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಹುದು. ಆಧಾರವರ್ಷದ ಪದಾರ್ಥಸೂಚ್ಯಂಕಗಳು ಪರಾಮರ್ಶನ ವರ್ಷದ ಪದಾರ್ಥಸೂಚ್ಯಂಕಗಳ ಸರಾಸರಿಗಳನ್ನು (ಪದಾರ್ಥ ಸೂಚ್ಯಂಕಗಳ ಮೊತ್ತವನ್ನು ಪದಾರ್ಥಗಳ ಸಂಖ್ಯೆಯಿಂದ ಭಾಗಿಸಿ) ಕಂಡುಹಿಡಿಯಬೇಕು. ಈ ಎರಡು ಸರಾಸರಿಗಳ ವ್ಯತ್ಯಾಸವೇ ಆಧಾರ ಮತ್ತು ಪರಾಮರ್ಶನ ವರ್ಷಗಳ ನಡುವೆ ಉತ್ಪನ್ನದಲ್ಲಾಗಿರುವ ಬದಲಾವಣೆಯನ್ನು ಶೇಕಡಾ ರೂಪದಲ್ಲಿ ಸೂಚಿಸುತ್ತದೆ. ಒಂದು ದೇಶದಲ್ಲಿ ಗೋದಿ, ಬಟ್ಟೆ ಮತ್ತು ಕಾಫಿ ಮಾತ್ರ ಉತ್ಪಾದನೆಯಾಗುತ್ತಿವೆಯೆಂದು ಭಾವಿಸಿ, ಈ ಪದಾರ್ಥಗಳ ಉತ್ಪತ್ತಿಗಳ ಮೊತ್ತಗಳನ್ನೂ ಆಧಾರವರ್ಷದ ಬೆಲೆಗಳನ್ನೂ ಮುಂದೆ ಕೋಷ್ಟಕದಲ್ಲಿ ಕೊಟ್ಟಿದೆ.

ಆ ಕೋಷ್ಟಕದಲ್ಲಿನ ಆಧಾರ ಮತ್ತು ಪರಾಮರ್ಶನವರ್ಷಗಳ ಸೂಚ್ಯಂಕಗಳ ಮೊತ್ತಗಳನ್ನು ಪದಾರ್ಥಗಳ ಸಂಖ್ಯೆಯಾದ ಮೂರರಿಂದ ಭಾಗಿಸಿದಾಗ ಆಧಾರವರ್ಷದ ಉತ್ಪಾದನ ಸೂಚ್ಯಂಕವೂ (100) ಪರಾಮರ್ಶನವರ್ಷದ ಉತ್ಪಾದನ ಸೂಚ್ಯಂಕವೂ (216.6) ದೊರಕುತ್ತವೆ. ಎಂದರೆ 2001ರಲ್ಲಿ ಉತ್ಪಾದನೆಯ ಮೌಲ್ಯ ಶೇಕಡಾ 116.6ರಷ್ಟು ಹೆಚ್ಚಿದೆ ಎಂಬುದು ವ್ಯಕ್ತವಾದಂತಾಯಿತು. ಇದೇ ಮಾದರಿಯಲ್ಲಿ ಇತರ ವರ್ಷಗಳಿಗೂ ಉತ್ಪಾದನ ಸೂಚ್ಯಂಕ ತಯಾರಿಸುವುದು ಸಾಧ್ಯ.

ಮೇಲೆ ಸರಳ ಸರಾಸರಿ ಪರಿಮಾಣಾನುಪಾತಗಳನ್ನು (ಸಿಂಪಲ್ ಆವರೇಜ್ ಕ್ವಾಂಟಿಟಿ ರಿಲೆಟಿವ್ಸ್‌) ಕೊಡಲಾಗಿದೆ. ಆದರೆ ವಾಸ್ತವವಾಗಿ ಈ ನಾನಾ ಪದಾರ್ಥಗಳ ಪರಸ್ಪರ ಪ್ರಾಮುಖ್ಯವನ್ನು (ತೂಕ) ಪರಿಗಣಿಸಿ ಉತ್ಪಾದನ ಸೂಚ್ಯಂಕ ತಯಾರಿಸುವುದು ಹೆಚ್ಚು ಸೂಕ್ತ. ಉದಾಹರಣೆಗೆ, 2001ರಲ್ಲಿ ಬಟ್ಟೆ ಉತ್ಪಾದನೆ 50% ರಷ್ಟು ಕಡಿಮೆಯಾಗಿ, ಕಾಫಿಯ ಉತ್ಪಾದನೆ 50%ರಷ್ಟು ಅಧಿಕಗೊಂಡಿದ್ದು ಆಧಾರವರ್ಷದಲ್ಲಿ ಬಟ್ಟೆ ಮತ್ತು ಕಾಫಿಗಳ ಉತ್ಪತ್ತಿ ಮೌಲ್ಯ ರೂ. 25,00,000ರಷ್ಟಿದ್ದು 2001ರಲ್ಲಿ ರೂ. 17,50,000 ಆಗಿದ್ದರೆ ವಾಸ್ತವವಾಗಿ ಉತ್ಪತ್ತಿ ಮೌಲ್ಯ 30%ರಷ್ಟು ಕಡಿಮೆಗೊಳ್ಳುತ್ತದೆ. ಬಟ್ಟೆಯ ಉತ್ಪತ್ತಿಯ ಮೊತ್ತ ಹೆಚ್ಚಾಗಿದ್ದು ಕಾಫಿಯದು ತೀರ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಆದರೆ ಸೂಚ್ಯಂಕ ಈ ವ್ಯತ್ಯಾಸವನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಈ ವಸ್ತುಗಳ ಉತ್ಪನ್ನ ಪ್ರಮಾಣಗಳ ಪರಸ್ಪರ ವ್ಯತ್ಯಾಸಗಳನ್ನು ಸೂಚ್ಯಂಕದಲ್ಲಿ ಪ್ರತಿಬಿಂಬಿಸುವ ದೃಷ್ಟಿಯಿಂದ ಈ ಪದಾರ್ಥಗಳ ತೂಕಗಳನ್ನು ಆಧಾರವರ್ಷ ದಲ್ಲಿನ ಪರಸ್ಪರ ಮೌಲ್ಯ ಪ್ರಮಾಣಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಮೇಲಿನ ಉದಾಹರಣೆಯ ಪ್ರಕಾರ ಆಧಾರವರ್ಷದಲ್ಲಿ ಬಟ್ಟೆಯ ಮೌಲ್ಯ ಪ್ರಮಾಣ ರೂ. 20,00,000; ಕಾಫಿಯದು ರೂ 5,00,000. ಎಂದರೆ ಬಟ್ಟೆ ಕಾಫಿಗಿಂತ ನಾಲ್ಕರಷ್ಟು ಮುಖ್ಯ. ಈ ಆಧಾರದ ಮೇಲೆ ಕಾಫಿಯ ತೂಕ 1 ಆದರೆ ಬಟ್ಟೆಯದು 4. ಈ ತೂಕಗಳನ್ನು ಗಮನದಲ್ಲಿಟ್ಟು ಕೊಂಡು ಸೂಚ್ಯಂಕವನ್ನು ತಯಾರಿಸಿದರೆ ಉತ್ಪತ್ತಿ ಮೌಲ್ಯಗಳಲ್ಲಾಗುವ ವ್ಯತ್ಯಾಸಗಳನ್ನು ಸರಿಯಾಗಿ ಪ್ರತಿಬಿಂಬಿಸಬಹುದು. ಪ್ರತಿ ಪದಾರ್ಥದ ಸೂಚ್ಯಂಕವನ್ನೂ ಅದರ ತೂಕದಿಂದ ಗುಣಿಸಿ ಅನಂತರ ಬರುವ ವಸ್ತುಸೂಚ್ಯಂಕಗಳ ಬಟ್ಟು ಮೊತ್ತವನ್ನು ಒಟ್ಟು ತೂಕಗಳಿಂದ ಭಾಗಿಸಿದರೆ ಸಿಗುವುದೇ ಭಾರಿತ ಉತ್ಪಾದನ ಸೂಚ್ಯಂಕ. ಮುಂದೆ ಕೊಟ್ಟಿರುವ ಕೋಷ್ಟಕದಲ್ಲಿ ಬಟ್ಟೆ ಕಾಫಿಗಳೆರಡನ್ನು ಮಾತ್ರ ತೆಗೆದುಕೊಂಡು ಮೇಲೆ ಹೇಳಿದ ಉದಾಹರಣೆಗಳಿಂದ ಭಾರಿತ ಉತ್ಪಾದನ ಸೂಚ್ಯಂಕವನ್ನು ಗುಣಿಸಿದೆ.

ಆ ಕೋಷ್ಟಕದಲ್ಲಿ ಬಟ್ಟೆಯ ಒಟ್ಟು ಉತ್ಪನ್ನಮೌಲ್ಯ 50%ರಷ್ಟು ಕಡಿಮೆಯಾಗಿದೆಯೆಂದೂ ಕಾಫಿಯ ಒಟ್ಟು ಉತ್ಪನ್ನ ಮೌಲ್ಯ 50%ರಷ್ಟು ಅಧಿಕಗೊಂಡಿದೆಯೆಂದೂ ಭಾವಿಸಿಕೊಂಡು, ಭಾರಿತ ಉತ್ಪಾದನ ಸೂಚ್ಯಂಕ ತಯಾರಿಸಲಾಗಿದೆ. ಆಧಾರವರ್ಷದ ಭಾರಿತ ಪದಾರ್ಥ ಸೂಚ್ಯಂಕದ ಮೊತ್ತವನ್ನೂ (S) ಪರಾಮರ್ಶನ ವರ್ಷದ ಭಾರಿತ ಪದಾರ್ಥಸೂಚ್ಯಂಕದ ಮೊತ್ತವನ್ನೂ (S) ತೂಕಗಳ ಮೊತ್ತದಿಂದ (W) ಭಾಗಿಸಿದಾಗ ಲಬ್ಧವಾಗುವ ಆಧಾರ ವರ್ಷದ ಸರಾಸರಿ ಭಾರಿತ ಪದಾರ್ಥ ಸೂಚ್ಯಂಕ 100; ಪರಾಮರ್ಶನ ವರ್ಷದ ಸರಾಸರಿ ಭಾರಿತ ಪದಾರ್ಥ ಸೂಚ್ಯಂಕ 70. ಎಂದರೆ 2001ರಲ್ಲಿ ಬಟ್ಟೆ ಮತ್ತು ಕಾಫಿಯ ಉತ್ಪನ್ನ ಮೌಲ್ಯಗಳು ಮೇಲೆ ಹೇಳಿದಂತೆ ಬದಲಾವಣೆಹೊಂದಿದ ಕಾರಣ ಒಟ್ಟು ಉತ್ಪಾದನ ಮೌಲ್ಯ 30ರಷ್ಟು ಕಡಿಮೆ.

ಭಾರತದಲ್ಲಿ ಬಳಕೆಯಲ್ಲಿರುವ ಉತ್ಪಾದನ ಸೂಚ್ಯಂಕಗಳನ್ನು ಎರಡು ಶಿರೋನಾಮಗಳಲ್ಲಿ ಕೊಡಬಹುದು. (1) ವ್ಯಾವಸಾಯಿಕ ಉತ್ಪಾದನ ಸೂಚ್ಯಂಕ ಮತ್ತು (2) ಕೈಗಾರಿಕಾ ಉತ್ಪಾದನ ಸೂಚ್ಯಂಕ.
ವ್ಯಾವಸಾಯಿಕ ಉತ್ಪಾದನ ಸೂಚ್ಯಂಕವನ್ನು ಭಾರತದ ರಿಸರ್ವ್ ಬ್ಯಾಂಕ್ ಅಲ್ಲದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೂ ದೆಹಲಿಯ ಈಸ್ಟರ್ನ್ ಎಕಾನೊಮಿಸ್ಟ್‌ ವಾರಪತ್ರಿಕೆಯೂ ತಯಾರಿಸುತ್ತವೆ. ಭಾರತದ ಆಹಾರ ಮತ್ತು ಕೃಷಿ ಸಚಿವಾಲಯದವರು ಈ ಸೂಚ್ಯಂಕವನ್ನು 1949ರಲ್ಲಿ ತಯಾರಿಸುತ್ತಿದ್ದರು. ಅಲ್ಲಿಂದೀಚೆಗೆ ಇದು ನಿಂತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೂ ದೆಹಲಿಯ ಈಸ್ಟರ್ನ್ ಎಕಾನೊಮಿಸ್ಟ್‌ ವಾರಪತ್ರಿಕೆಯೂ ತಯಾರಿಸುತ್ತವೆ. ಭಾರತದ ಆಹಾರ ಮತ್ತು ಕೃಷಿ ಸಚಿವಾಲಯದವರು ಈ ಸೂಚ್ಯಂಕವನ್ನು 1949ರಲ್ಲಿ ತಯಾರಿಸುತ್ತಿದ್ದರು. ಅಲ್ಲಿಂದೀಚೆಗೆ ಇದು ನಿಂತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಭಾರತವನ್ನೊಳಗೊಂಡು ಪ್ರಪಂಚದ ಅನೇಕ ದೇಶಗಳ ವ್ಯಾವಸಾಯಿಕ ಉತ್ಪಾದನ ಸೂಚ್ಯಂಕಗಳನ್ನು ಪ್ರಕಟಿಸುತ್ತಿದೆ. ಈಸ್ಟರ್ನ್ ಎಕಾನೊಮಿಸ್ಟ್‌ 14 ಪದಾರ್ಥಗಳನ್ನೊಳಗೊಂಡ ಸೂಚ್ಯಂಕವನ್ನು 1939-40ನೆಯ ವರ್ಷದಿಂದ ಕೊಡುತ್ತಿದೆ. ಭಾರತದ ರಿಸರ್ವ್ ಬ್ಯಾಂಕಿನ ಸೂಚ್ಯಂಕ 17 ಪದಾರ್ಥಗಳನ್ನೊಳಗೊಂಡದ್ದು. ಇದು 1939-40ರಿಂದ ಈಚಿನ ವರ್ಷಗಳಿಗೆ ಸಿಗುತ್ತದೆ.1948-49ರ ವರೆಗೆ 1939-37 ಮತ್ತು 1938-39ರ ಸರಾಸರಿಯೇ ಆಧಾರ ವರ್ಷವಾಗಿದ್ದು, 1949-50ರಿಂದ ಇದು 1948-49 ಆಗಿದೆ. ಇದು ಭಾರಿತ ಉತ್ಪಾದನ ಸೂಚ್ಯಂಕ. ಇಲ್ಲಿ ಉತ್ಪತ್ತಿ ಮೌಲ್ಯಗಳನ್ನು ತೂಕಗಳನ್ನಾಗಿ ಪರಿಗಣಿಸಲಾಗಿದೆ. ಸೂಚ್ಯಂಕದಲ್ಲಿ ಉಪಯೋಗಿಸಿರುವ ಪದಾರ್ಥಗಳೂ ಅವುಗಳ ತೂಕಗಳೂ ಈ ರೀತಿ ಇವೆ (ತೂಕಗಳನ್ನು ಆವರಣಗಳಲ್ಲಿ ಕೊಡಲಾಗಿದೆ): ಅಕ್ಕಿ (38), ಜೋಳ ಮತ್ತು ನವಣೆ (12), ಮೆಕ್ಕೆಜೋಳ (2), ರಾಗಿ (2), ಗೋದಿ (14), ಬಾರ್ಲಿ (4), ಕಾಳು (7), ಎಳ್ಳು (1), ನೆಲಗಡಲೆ (7), ಸಾಸಿವೆ (2), ಅಗಸೆ ಬೀಜ (1), ಹರಳಿನ ಬೀಜ (0.3), ಹತ್ತಿ (3) ಸಣಬು (2), ಚಹಾ (4), ಕಾಫಿ (0.4), ರಬ್ಬರು (0.1).

ಕೈಗಾರಿಕಾ ಉತ್ಪಾದನ ಸೂಚ್ಯಂಕವನ್ನು ಈಸ್ಟರ್ನ್ ಎಕಾನೊಮಿಸ್ಟ್‌ ಆಗಸ್ಟ್‌ 1939ನ್ನು ಆಧಾರ ವರ್ಷವಾಗಿಟ್ಟುಕೊಂಡು 11 ಪದಾರ್ಥಗಳಿಗೆ 1948ರಿಂದ ಮಾಸಿಕವಾಗಿ ಪ್ರಕಟಿಸುತ್ತಿದೆ. ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಕೈಗಾರಿಕಾ ಉತ್ಪಾದನ ಸೂಚ್ಯಂಕವನ್ನು ತಯಾರಿಸಿ ಪ್ರಚಾರ ಮಾಡುತ್ತಿದೆ. ಇಲ್ಲಿ ತೂಕಗಳನ್ನು 1946ರ ಕೈಗಾರಿಕಾ ಗಣತಿಯ ಪದಾರ್ಥ ಮೌಲ್ಯಗಳ ಆಧಾರದ ಮೇಲೆ ರೂಪಿಸಲಾಗಿದೆ. ಸೂಚ್ಯಂಕಕ್ಕೆ ಆರಿಸಲಾದ ಪದಾರ್ಥಗಳೂ ಅವುಗಳ ತೂಕಗಳೂ ಈ ರೀತಿಯಿವೆ: ಕಲ್ಲಿದ್ದಲು (11.95), ಸಕ್ಕರೆ (3.54), ಬಣ್ಣ ಮತ್ತು ಮೆರುಗೆಣ್ಣೆ (0.61), ಸಿಮೆಂಟು (0.67), ಗಾಜು (0.55), ರಿಫ್ರಾಕ್ಟರಿಗಳು (0.48), ಪದರಂಟು

ಹಲಗೆ ಅಥವಾ ಪ್ಲೈವುಡ್ (0.15), ಕಾಗದ (1.14), ಬೆಂಕಿಕಡ್ಡಿ (1.21), ಹತ್ತಿ (43.49), ಉಣ್ಣೆ (1.38), ಸೆಣಬು (16.53), ರಾಸಾಯನಿಕ ಪದಾರ್ಥಗಳು (3.10); ನಾನ್-ಫೆರಸ್ ಲೋಹಗಳು (12.14), ಉಕ್ಕು (7.16), ಸೈಕಲ್ಲು (0.11), ಹೊಲಿಗೆ ಯಂತ್ರ (0.02), ವಿದ್ಯುತ್ ದೀಪ (0.04), ವಿದ್ಯುತ್ ಬೀಸಣಿಗೆ (0.35), ಎಂಜಿನಿಯರಿಂಗ್ ಮತ್ತು ವಿದ್ಯುತ್ ಉಪಕರಣಗಳು (5.06).	(ಎ.ಬಿ.ಎ.)

ಉತ್ಪಾದನಾಂಗಗಳು
ಉತ್ಪಾದನೆಗೆ ಅಗತ್ಯವಾದ ಸಾಧನಗಳು (ಫ್ಯಾಕ್ಟರ್ಸ್‌ ಆಫ್ ಪ್ರೊಡಕ್ಷನ್). ಮೂಲ ಉತ್ಪಾದನ ಸಾಧನಗಳ ಒಂದು ಗುಂಪು ಅಥವಾ ವರ್ಗವೇ ಉತ್ಪಾದನಾಂಗವೆಂಬುದು ಫ್ರೇಸರನ ವ್ಯಾಖ್ಯೆ. ಈ ಒಂದೊಂದು ಗುಂಪು ಅಥವಾ ವರ್ಗ ಗಳಲ್ಲಿನ ಬಿಡಿ ಸಾಧನಗಳಿಗೆ ಅಂಶಗಳೆಂದು ಹೆಸರು. ಅಭಿಜಾತ ಸಂಪ್ರದಾಯಾನುಸಾರವಾಗಿ ಉತ್ಪಾದನೆಯ ನಾನಾ ಸಾಧನೆಗಳನ್ನು ವಿಂಗಡಿಸುವ ಬದಲು ಅವಕ್ಕೆ ಯಾವ ಹಣೆಚೀಟಿಗಳನ್ನೂ ಅಂಟಿಸದೆ ಕೇವಲ ಉತ್ಪಾದಕ ಸೇವೆಗಳೆಂದು ಕರೆಯಬೇಕೆಂದು ಆಧುನಿಕ ಅರ್ಥಶಾಸ್ತ್ರಜ್ಞರ ಅಭಿಲಾಷೆ. ಉತ್ಪಾದನಾಂಗಗಳನ್ನು ಗ್ರಾಸ ಅಥವಾ ಆದಾನವೆಂದೂ (ಇನ್ಪುಟ್) ಉತ್ಪಾದಿಸಿದ ಪದಾರ್ಥವನ್ನು ಉತ್ಪತ್ತಿ (ಔಟ್ಪುಟ್) ಎಂದೂ ಕರೆಯುವ ಪರಿಪಾಟವುಂಟು. ಉತ್ಪಾದನೆಗೆ ಸಹಾಯವಾಗುವಂಥದು ಏನೇ ಇರಲಿ, ಅದು ಉತ್ಪಾದನೆಯ ಅಂಗ ಎಂಬುದು ಬೆನ್ಹ್ಯಾಮನ ಮಾತು. ಉತ್ಪಾದನೆಯ ಅಂಗಗಳನ್ನು ಸಾಮಾನ್ಯವಾಗಿ ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಅವೆಂದರೆ 1. ಭೂಮಿ, 2. ಶ್ರಮ, 3. ಬಂಡವಾಳ,  4. ಸಂಘಟನೆ.
ಭೂಮಿ
ಭೂಮಿಯೆಂಬ ಪದಕ್ಕೆ ಅರ್ಥಶಾಸ್ತ್ರದಲ್ಲಿ ವಿಶಿಷ್ಟವಾದ ಅರ್ಥವುಂಟು. ಇದು ಕೇವಲ ನೆಲವಲ್ಲ, ಮಣ್ಣಲ್ಲ. ನೆಲ ಜಲ ವಾಯು ಬೆಳಕು ಬೆಂಕಿಗಳ ರೂಪದಲ್ಲಿ ಪ್ರಕೃತಿ ಮಾನವನಿಗೆ ನೀಡುವ ವಸ್ತು ಶಕ್ತಿಗಳಿಗೆಲ್ಲ ಭೂಮಿ ಸಂಕೇತವೆಂಬುದು ಮಾರ್ಷಲನ ಮಾತು. ಮಾನವ ಏನು ಮಾಡಬೇಕಾದರೂ ನೆಲದ ಮೇಲ್ಮೈಯೇ ಅವನಿಗೆ ಮೂಲಾಧಾರ. ಆತನ ಕೃತಿಗಳಿಗೆಲ್ಲ ಅದು ಅನುವು ಮಾಡಿಕೊಡುತ್ತದೆ. ಮನುಷ್ಯನ ನಾಗರಿಕತೆಯ ನಾನಾ ಹಂತಗಳಲ್ಲಿ ಪ್ರಕೃತಿಯೇ ಆತನ ಪ್ರಧಾನ ಮಿತ್ರ  ಕೆಣಕಿ, ಸೆಣೆಸಿ, ಸೋಲಿಸಿ, ಒಲಿದು ಆತನ ಆರ್ಥಿಕ ಬೆಳವಣಿಗೆಗೆ ಎಡೆ ಮಾಡಿಕೊಟ್ಟಿರುವ ಶಕ್ತಿ. ಮನುಷ್ಯ ಬೇಟೆಯ ಜೀವನ ನಡೆಸುತ್ತಿದ್ದಾಗ ಪ್ರಾಣಿ ಸಂಪತ್ತನ್ನೂ ಪಶು ಪಾಲಕನಾಗಿದ್ದಾಗ ಹುಲ್ಲುಗಾವಲನ್ನೂ ಬೇಸಾಯಕ್ಕೆ ಫಲವತ್ತಾದ ನೆಲವನ್ನೂ ಇನ್ನೂ ಹೆಚ್ಚು ಮುಂದುವರಿದಾಗ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನೂ ಸರ್ವಕಾಲದಲ್ಲೂ ನೆಲೆಯನ್ನೂ ಒದಗಿಸಿಕೊಟ್ಟಿರುವುದು ಭೂಮಿಯೇ. ಮಾನವ ಬಳಸುವ ಎಲ್ಲ ಪದಾರ್ಥಗಳ ಮೂಲವೂ ಇದೇ.
ಈ ಭೂಮಿ ಎನ್ನುವುದು ಮಾನವನಿಗೆ ಪ್ರಕೃತಿ ನೀಡಿರುವ ಕಾಣಿಕೆ. ಒಮ್ಮೆ ಅನುಪಯುಕ್ತ ವಾಗಿದ್ದ ಪ್ರದೇಶಗಳನ್ನು ಮಾನವನಿಂದು ಪರಿವರ್ತಿಸಿಕೊಂಡಿದ್ದಾನೆ, ನಿಜ. ಆದರೂ ಪ್ರಕೃತಿಯಿಂದ ಮಾನವನಿಗೆ ಸಂದಿರುವ ಕೊಡುಗೆಯೊಂದಿಗೆ ಹೋಲಿಸಿದಲ್ಲಿ ಮಾನವ ಅದಕ್ಕೆ ಪ್ರತಿಯಾಗಿ ಮಾಡಿರುವುದು ಅತ್ಯಲ್ಪವೆಂಬುದು ನಿರ್ವಿವಾದ.

ಭೂಮಿಗೆ ಕೆಲವು ವಿಶಿಷ್ಟ ಲಕ್ಷಣಗಳುಂಟು : ಭೂಮಿಯ ಪರಿಮಾಣ ಮಿತವಾದುದ್ದು. ಇದರ ಸರಬರಾಜನ್ನು ಮನುಷ್ಯ ತನಗಿಷ್ಟ ಬಂದಂತೆ ಹಿಗ್ಗಿಸುವುದಾಗಲಿ ಕುಗ್ಗಿಸುವುದಾಗಲಿ ಸಾಧ್ಯವಿಲ್ಲ. ಭೂಮಿಗೆ ಸರಬರಾಜು ಬೆಲೆಯಿಲ್ಲವೆಂದು ಹೇಳಲಾಗಿದೆ. ಹೆಚ್ಚು ಬೆಲೆಗೆ ತಕ್ಕಂತೆ ಅದರ ಸರಬರಾಜನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಬೆಲೆ ಇಳಿದಾಗ ಅದರ ಪ್ರಮಾಣ ತಗ್ಗುವುದಿಲ್ಲ. ನೆಲದ ಪರಿಮಾಣ ಸ್ಥಿರವಾದ್ದರಿಂದ ಜನಸಂಖ್ಯೆ ಹೆಚ್ಚಿದಂತೆ ಅದಕ್ಕೆ ಅಭಾವ ಗೇಣಿ ಉದಿಸುತ್ತದೆ. ಭೂಮಿ ಸ್ಥಿರವಾದದ್ದು. ಬಾಂಬು ದಾಳಿಯಿಂದ ನೆಲದ ಉತ್ಪಾದಕತೆ ತಾತ್ಕಾಲಿಕವಾಗಿ ನಾಶವಾದರೂ ಅದನ್ನು ಪುನಃ ನೆಲೆಗೊಳಿಸುವುದು ಸಾಧ್ಯ. ರಿಕಾರ್ಡೋ ಮಾತಿನಲ್ಲಿ ಭೂಮಿಯ ಗುಣಧರ್ಮಗಳು ಮೂಲಭೂತ, ಅವಿನಾಶಿ. ಭೂಮಿ ಅಚಲ. ಭೌಗೋಳಿಕವಾಗಿ ಅದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಅಸಾಧ್ಯ. ಸ್ಥಳದಿಂದ ಸ್ಥಳಕ್ಕೆ ಭೂಮಿಯ ಗೇಣಿ ಬದಲಾಗುವುದಕ್ಕೆ ಅದರ ಈ ಗುಣವೇ ಕಾರಣ. ಭೂಮಿಯ ಫಲವತ್ತು ತಾಕಿನಿಂದ ತಾಕಿಗೆ ವ್ಯತ್ಯಾಸವಾಗುತ್ತದೆ. ಒಂದೇ ತೆರನಾದ ಎರಡು ತುಣುಕು ಭೂಮಿ ಇರುವುದು ಅಸಾಧ್ಯ. ಅಂಚಿನ ಬೇಸಾಯದ ಭಾವನೆ ಬೆಳೆದಿರುವುದು ಈ ಕಾರಣದಿಂದ. (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಗೇಣಿ,-ಗೇಣಿ-ಸಿದ್ಧಾಂತ)
ಶ್ರಮ
ಸಾಮಾನ್ಯರಲ್ಲಿ ರೂಢಿಯಲ್ಲಿರುವುದಕ್ಕಿಂತ ಅರ್ಥಶಾಸ್ತ್ರದಲ್ಲಿ ಶ್ರಮದ ಅರ್ಥ ಹೆಚ್ಚು ವಿಶಿಷ್ಟ. ಆರೋಗ್ಯಪಾಲನೆಗಾಗಿ ಮಾಡುವ ವ್ಯಾಯಾಮ, ತಾಯಿಯಿಂದ ಶಿಶುಪೋಷಣೆ, ತಂದೆ ಮಗನಿಗೆ ಹೇಳಿಕೊಡುವ ಪಾಠ, ಮನೆಯ ಮುಂದಿನ ತೋಟದಲ್ಲಿ ನಾವು ಮಾಡುವ ಕೆಲಸ-ಇವೆಲ್ಲ ಸಾಮಾನ್ಯ ಅರ್ಥದಲ್ಲಿ ಶ್ರಮವೇ. ಆದರೆ ಅರ್ಥಶಾಸ್ತ್ರದ ದೃಷ್ಟಿಯಲ್ಲಿ ಇವೆಲ್ಲ ಶ್ರಮವಲ್ಲ. ಏಕೆಂದರೆ ಇವೆಲ್ಲವೂ ಸ್ವಸಂತೋಷಕ್ಕಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ್ದು.

ದುಡಿಮೆಯಿಂದ ದೊರಕುವ ಸಂತೋಷಕ್ಕಿಂತಲೂ ಬೇರೆಯಾದ ಫಲವನ್ನೇ ಕ್ವಚಿತ್ತಾಗಿಯೋ ಪ್ರಧಾನವಾಗಿಯೋ ನಿರೀಕ್ಷಿಸಿ ವಿನಿಯೋಗಿಸಿದ ದೈಹಿಕ ಮಾನಸಿಕ ಪ್ರಯಾಸ ವೆಲ್ಲ ದುಡಿಮೆ-ಎಂಬುದು ಮಾರ್ಷಲನ ವ್ಯಾಖ್ಯೆ. ಈ ಅರ್ಥದಲ್ಲಿ ಶ್ರಮಿಕ ಕೂಲಿಕಾರನಿರಲಿ, ಕೃಷಿಕನಿರಲಿ, ಶಿಕ್ಷಕನಿರಲಿ, ಗುಮಾಸ್ತನಿರಲಿ, ಪೊಲೀಸನಾಗಿರಲಿ, ವೈದ್ಯನಿರಲಿ, ತಂತ್ರಜ್ಞನಾಗಿರಲಿ ಇವರೆಲ್ಲರೂ ಪ್ರತಿಫಲಾಪೇಕ್ಷೆಯಿಂದ ತಮ್ಮ ಕಾರ್ಯ ಮಾಡಿದರೆ ಆ ಕಾರ್ಯ ಶ್ರಮವೆನಿಸಿ ಕೊಳ್ಳುತ್ತದೆ.

ಶ್ರಮಕ್ಕೂ ಇತರ ಉತ್ಪಾದನಾಂಗಗಳಿಗೂ ವ್ಯತ್ಯಾಸಗಳುಂಟು. ಇತರ ಉತ್ಪಾದನಾಂಗಗಳು ಉತ್ಪಾದನೆಯ ಗುರಿಯ ಸಾಧನಗಳು ಮಾತ್ರ. ಆದರೆ ಶ್ರಮ ಹೀಗಲ್ಲ. ಇದು ಗುರಿಯ ಸಾಧನವೂ ಹೌದು, ಇದೇ ಗುರಿಯೂ ಹೌದು. ಕಾರ್ಮಿಕರು ದುಡಿಯುವುದು ಅಂತಿಮವಾಗಿ ತಮ್ಮ ಬಯಕೆಗಳ ತೃಪ್ತಿಗಾಗಿಯೇ. ಆದ್ದರಿಂದ ಒಂದು ಕಡೆ ಇವರು ಉತ್ಪಾದಕರಾದರೆ ಇನ್ನೊಂದು ಕಡೆ ಇವರೇ ಅನುಭೋಗಿಗಳು.
ಶ್ರಮವನ್ನೂ ಶ್ರಮಿಕನನ್ನೂ ಬೇರ್ಪಡಿಸಲಾಗದ್ದು ಇದರ ಇನ್ನೊಂದು ಮುಖ್ಯ ಲಕ್ಷಣ. ಅವನ ಪದಾರ್ಥವನ್ನು ಅವನೇ ಖುದ್ದಾಗಿ ಬಂದು ಒಪ್ಪಿಸಬೇಕಾದ್ದು ಅನಿವಾರ್ಯ. ಆತ ಮಾಡುವುದು ತನ್ನ ಶ್ರಮವನ್ನೇ ಹೊರತು ತನ್ನನ್ನಲ್ಲ.

ಶ್ರಮ ಅವಿನಾಶಿಯಲ್ಲ. ಅದು ನಶ್ವರ. ಕೆಲಸ ಮಾಡದೆ ಕಳೆದ ಒಂದೊಂದು ದಿನವೂ ಶಾಶ್ವತವಾಗಿ ನಷ್ಟವಾದಂತೆಯೇ. ಸಂಚಿತವಾದ ಶ್ರಮಕ್ಕೆ ಇರುವುದು ಒಂದೇ ಮಾರ್ಗ ಅದರ ವಿನಿಯೋಗ. ಒಳ್ಳೆಯ ಬೆಲೆ ಬಂದಾಗ ಮಾರೋಣವೆಂದು ಶ್ರಮವನ್ನು ದಾಸ್ತಾನು ಮಾಡಿಡುವುದು ಕಾರ್ಮಿಕನಿಗೆ ಸಾಧ್ಯವಿಲ್ಲ. ಆದ್ದರಿಂದ ದೊರಕುವ ಕೂಲಿ ಪಡೆದು ಕೆಲಸ ಮಾಡಬೇಕಾದ್ದು ಹಲವು ವೇಳೆ ಆತನಿಗೆ ಅನಿವಾರ್ಯ. ಆದ್ದರಿಂದ ದುಡಿಮೆಗಾರನಿಗೆ ಚೌಕಾಶಿಯ ಶಕ್ತಿಯಿಲ್ಲವೆಂಬುದು ಸ್ವಯಂವೇದ್ಯ. ಉದ್ಯಮದೊಡೆಯರು ಈ ದೌರ್ಬಲ್ಯದ ದುರುಪಯೋಗ ಪಡೆಯದಿರಲೆಂದೇ ಅನೇಕ ಸರ್ಕಾರಗಳು ಕಾರ್ಮಿಕರ ಹಿತ ರಕ್ಷಿಸುವ ಕಾಯಿದೆಗಳನ್ನು ಜಾರಿಗೆ ತಂದಿವೆ. ಕಾರ್ಮಿಕ ಸಂಘಗಳು ಹುಟ್ಟಿ ಬೆಳೆದಿರುವುದೂ ಈ ಉದ್ದೇಶದಿಂದಲೇ.

ಕಾರ್ಮಿಕರ ಶ್ರಮದ ಬೆಲೆಯಲ್ಲಿ ಆಗುವ ಏರಿಳಿತಗಳಿಂದ ಅದರ ಸರಬರಾಜಿನಲ್ಲಿ ಅನೇಕ ವೇಳೆ ವ್ಯತ್ಯಾಸಗಳಾಗುತ್ತವೆ. ಬೆಲೆ ಕಡಿಮೆಯಾದಾಗ ಸರಬರಾಜು ಕಡಿಮೆಯಾಗುವುದು ಇತರ ಪದಾರ್ಥಗಳ ಧರ್ಮ. ಆದರೆ ಕೂಲಿ ಕಡಿಮೆಯಾದಾಗ ಕಾರ್ಮಿಕನ ಸಂಸಾರದಲ್ಲಿ ಕಡಿಮೆಯಾದ ವರಮಾನವನ್ನು ತುಂಬಲು ಅವನ ಕುಟುಂಬದಲ್ಲಿ ಇತರರೂ ಕೆಲಸಕ್ಕೆ ಬರಬಹುದು. ಇದರಿಂದ ಸರಬರಾಜು ಕಡಿಮೆಯಾಗುವ ಬದಲು ಹೆಚ್ಚೇ ಆಗುತ್ತದೆ. ಆದರೆ ಕೂಲಿ ಒಂದು ಮಟ್ಟವನ್ನು ಮೀರಿ ಹೆಚ್ಚಾದಾಗ ಕಾರ್ಮಿಕರ ವರಮಾನ ಹೆಚ್ಚಿ, ಅತಿಯಾಗಿ ದುಡಿಯುವ ಆವಶ್ಯಕತೆ ತಗ್ಗಿ, ಅವರ ಸರಬರಾಜೂ ತಗ್ಗಬಹುದು.

ಬೇಡಿಕೆಗೆ ತಕ್ಕಂತೆ ಕಾರ್ಮಿಕರ ಸಂಖ್ಯೆಯನ್ನು ಶೀಘ್ರವಾಗಿ ಏರಿಸಲಾಗಲಿ ತಗ್ಗಿಸಲಾಗಲಿ ಸಾಧ್ಯವಿಲ್ಲ. ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಪದಾರ್ಥಗಳಿಗೆ ಗಿರಾಕಿ ತಗ್ಗಿ ಬೆಲೆಯೂ ಇಳಿದಾಗ ಉತ್ಪಾದನೆಯನ್ನೂ ತಗ್ಗಿಸುವುದು ಅನಿವಾರ್ಯವಾಗಬಹುದು. ಆಗ ಕಾರ್ಮಿಕರಿಗೆ ಬೇಡಿಕೆ ತಗ್ಗಿ ಕೂಲಿಯೂ ಇಳಿಯುತ್ತದೆ. ಅದಕ್ಕೆ ತಕ್ಕಂತೆ ಕಾರ್ಮಿಕರ ಸರಬರಾಜನ್ನೂ ತಗ್ಗಿಸುವುದು ಸಾಧ್ಯವಾಗುವುದಿಲ್ಲ.
ಪ್ರತಿಯೊಬ್ಬ ಶ್ರಮಿಕನ ಕಾರ್ಯಸಾಮರ್ಥ್ಯವೂ ಬೇರೆಬೇರೆಯಾಗಿರುತ್ತದೆ. ಯಂತ್ರೋಪ ಕರಣಗಳಂತೆ ಕಾರ್ಮಿಕ ಎಲ್ಲ ವೇಳೆಯಲ್ಲೂ ಒಂದೇ ತೆರನಾಗಿ ಅಷ್ಟೇ ನೈಪುಣ್ಯದಿಂದ ಕಾರ್ಯಮಾಡಲು ಸಾಧ್ಯವಿಲ್ಲ.
ಬಂಡವಾಳ
ಉತ್ಪಾದನೆಯ ಮೂರನೆಯ ಅಂಗವಾದ ಬಂಡವಾಳ ಮೂಲಭೂತವಾಗಿ ಇದ್ದದ್ದಲ್ಲ. ಪ್ರಕೃತಿಯ (ಭೂಮಿ) ಶ್ರಮದ ಪ್ರಯೋಗದ ಫಲವಾಗಿ ಲಭಿಸಿದ ಉತ್ಪನ್ನವನ್ನು ಅನುಭೋಗಿಸದೆ ಅಷ್ಟನ್ನೂ, ಅಥವಾ ಅದರ ಒಂದು ಭಾಗವನ್ನು, ಉತ್ಪಾದನೆಯ ಕಾರ್ಯದಲ್ಲಿ ವಿನಿಯೋಗಿಸಿದ್ದೇ ಬಂಡವಾಳ.

ಸಾಮಾನ್ಯವಾಗಿ ಬಂಡವಾಳವೆಂದರೆ ಉದ್ಯಮದಲ್ಲಿ ಹೂಡಿದ ಹಣವೆಂಬ ಭಾವನೆಯಿ ದ್ದರೂ ಅರ್ಥಶಾಸ್ತ್ರ ದೃಷ್ಟಿಯಲ್ಲಿ ಹಣವೇ ಬಂಡವಾಳವಲ್ಲ. ಇದರಿಂದ ಕೊಂಡ ಯಂತ್ರ, ಸ್ಥಾವರ, ಉಪಕರಣ, ಕಚ್ಚಾ ಸಾಮಗ್ರಿ ಮುಂತಾದ ಎಲ್ಲವೂ ಬಂಡವಾಳ. ಬಂಡವಾಳವೆಂದರೆ ಉತ್ಪಾದನೆಗಾಗಿ ಉತ್ಪಾದಿಸಿದ ಸಾಧನ ಎಂಬುದು ಬಂಬಾವರ್ಕನ ವ್ಯಾಖ್ಯೆ. ಭೂಮಿ ನಿಸರ್ಗನಿಮಿತ್ತ; ಬಂಡವಾಳ ಮಾನವೋತ್ಪಾದಿತ ಉತ್ಪಾದೀ ಸಾಧನ.
ಸಂಘಟನೆ
ಉತ್ಪಾದನೆಯ ಅಂಗಗಳಾದ ಭೂಮಿ, ಶ್ರಮ ಹಾಗೂ ಬಂಡವಾಳಗಳ ಜೊತೆಗೆ ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಸೇರಿಕೊಂಡ ಇನ್ನೊಂದು ಅಂಗವೇ ಸಂಘಟನೆ. ಸಂಘಟನೆಯೂ ಉತ್ಪಾದನೆಯ ಅಂಗವಾಗುವಷ್ಟು ಪ್ರಮುಖ್ಯವುಳ್ಳದ್ದೆಂದು ಮಾರ್ಷಲ್ ವಾದಿಸಿದ್ದಾನೆ. ಭೂಮಿ, ಶ್ರಮ ಹಾಗೂ ಬಂಡವಾಳಗಳು ತಮ್ಮಕ್ಕಷ್ಟೇ ತಾವೇ ಏನನ್ನೂ ಉತ್ಪಾದಿಸಲಾರವು. ಅವುಗಳನ್ನು ಸಂಘಟಿಸಿ ಉತ್ಪಾದನೆಗೆ ಸಹಾಯಕವಾಗುವ ರೀತಿಯಲ್ಲಿ ಚಾಲನೆಗೊಳಿಸುವುದೇ ಉದ್ಯಮಿಯ ಮುಖ್ಯ ಕರ್ತವ್ಯ. ಆತನ ಸಾಹಸ ನಿರ್ದೇಶನಗಳಿಲ್ಲದೆ ಉತ್ಪಾದನೆ ಚಲಿಸದು. ಉದ್ಯಮವನ್ನು ಯೋಜಿಸುವುದೇ ಅಲ್ಲದೆ ಅದನ್ನು ಆರಂಭಿಸಿ ನಡೆಸಿಕೊಂಡು ಹೋಗುವುದೂ; ಏನು, ಎಲ್ಲಿ ಹಾಗೂ ಎಷ್ಟು ಉತ್ಪಾದಿಸಬೇಕೆಂಬ ಮಹತ್ವದ ಆರ್ಥಿಕ ನಿರ್ಣಯ ತೆಗೆದುಕೊಳ್ಳುವುದೂ; ಇದಕ್ಕಾಗಿ ಉಳಿದ ಮೂರು ಉತ್ಪಾದನೆಯ ಸಾಧನೆಗಳನ್ನು ಒಂದೆಡೆ ಸೇರಿಸಿ ಅವುಗಳಿಗೆ ಯೋಗ್ಯ ಕಾರ್ಯಗಳನ್ನು ನಿಯೋಜಿಸಿ ಅವು ಮಾಡಿದ ಕೆಲಸಕ್ಕೆ ತಕ್ಕಂತೆ ಯೋಗ್ಯ ಸಂಭಾವನೆ ಕೊಡುವುದೂ; ಇವೆಲ್ಲದರ ಜೊತೆಗೆ ವ್ಯವಹಾರದಲ್ಲಿ ತಲೆದೂರಬಹುದಾದ ನಷ್ಟಸಂಭವಗಳನ್ನು ಧೈರ್ಯವಾಗಿ ಎದುರಿಸುವುದೂ ಉದ್ಯಮಿಯ ಚಾಲಕನ ವಿಶಿಷ್ಟ ಕಾರ್ಯಭಾರ. ಧೈರ್ಯಶಾಲಿ ವ್ಯವಹಾರ ಚತುರನೇ ಸಾಹಸಿ ಉದ್ಯಮಿ, ಚಾಲಕ. ಕಾಲಕಾಲಕ್ಕೆ ಲಭ್ಯವಾಗುವ ಸಂಶೋಧನೆ ಗಳನ್ನು ಉತ್ಪಾದನೆಯಲ್ಲಿ ಅಳವಡಿಸಿಕೊಂಡು ಉತ್ಪಾದನೆಯ ವೆಚ್ಚ ತಗ್ಗಿಸಿ ತನ್ನ ಲಾಭ ಹೆಚ್ಚಿಸಿ, ಉಳಿದ ಉತ್ಪಾದನಾಂಗಗಳೊಡನೆ ಸಹಕರಿಸಿ ಸಮರ್ಥ ಉತ್ಪಾದನೆಯನ್ನು ಕೈಕೊಳ್ಳುವವನೇ ನಿಜವಾದ ಉದ್ಯಮಿ.

ಉತ್ಪಾದನೆಯ ಕ್ಷೇತ್ರದಲ್ಲಿ ಉದ್ಯಮಿಯ ವಿಶಿಷ್ಟ ಸ್ಥಾನವನ್ನು ಕುರಿತು ಮಾರ್ಷಲ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಇಂದು ಬಹುತೇಕ ಅರ್ಥಶಾಸ್ತ್ರಜ್ಞರು ಒಪ್ಪಿದ್ದಾರಾದರೂ ಕೆಲವರು ಆ ರೀತಿ ಭಾವಿಸುವುದಿಲ್ಲ. ಸಂಘಟನೆಯೂ ಒಂದು ವಿಶಿಷ್ಟ ರೀತಿಯ ಶ್ರಮವೇ ಎಂಬುದು ಇವರ ಮತ. ಇವರಲ್ಲಿ ಕೆಲವರ ದೃಷ್ಟಿಯಲ್ಲಿ ಉತ್ಪಾದನೆಯ ಅಂಗಗಳು ಕೇವಲ ಎರಡು ಬಗೆ : ಒಂದು ಮಾನವೀಯ (ಶ್ರಮ, ಸಂಘಟನೆ); ಇನ್ನೊಂದು ಮಾನವೇತರ (ಭೂಮಿ, ಬಂಡವಾಳ). ಆದರೆ ಈ ಕುರಿತ ಸ್ಪಷ್ಟ ವಿಚಾರದೃಷ್ಟಿಯಿಂದ ಇವನ್ನು ನಿಷ್ಕೃಷ್ಟವಾಗಿ ವಿಭಜಿಸುವುದು ಅವಶ್ಯ. ಭೂಮಿಗೂ ಬಂಡವಾಳಕ್ಕೂ ವ್ಯತ್ಯಾಸವಿರುವಂತೆಯೇ ಶ್ರಮಕ್ಕೂ ಸಂಘಟನೆಗೂ ವ್ಯತ್ಯಾಸವಿದ್ದೇ ಇದೆಯೆಂಬುದು ನಿರ್ವಿವಾದ. ಆದರೆ ಈ ಅಂಗಗಳ ಕೂಡುಗೆರೆಗಳ ಬಳಿ ಒಂದನ್ನಿನ್ನೊಂದರಿಂದ ಪ್ರತ್ಯೇಕಿಸಿ ತೋರಿಸುವುದೂ ಕಷ್ಟವೆಂಬುದು ನಿಜವೇ. ಕಾರ್ಮಿಕನನ್ನೂ ಉದ್ಯಮಿಯನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಅನುಚಿತವೆಂದು ವಾದಿಸುವವರು ಇವರಿಬ್ಬರ ಕ್ರಿಯೆಗಳಿಗೂ ಇರುವ ಮೂಲಲಕ್ಷಣಗಳ ಕಡೆಗೆ ಬೆರಳು ತೋರಿಸುತ್ತಾರೆ. ಈ ಎಲ್ಲ ಬಗೆಯ ಮಾನವೀಯ ಶ್ರಮದ ಹಿಂದೆಯೂ ಸಂಘಟನೆ ಇದ್ದೇ ಇದೆಯೆಂಬುದು ಅವರ ವಾದ. ಉದ್ಯಮಿಯ ಕಾರ್ಯದಲ್ಲಿ ಇದರ ಭಾಗ ಹೆಚ್ಚಿರಬಹುದು, ಅಷ್ಟೇ. ಶ್ರಮ, ಸಂಘಟನೆಗಳೆರಡೂ ಪ್ರತ್ಯೇಕಾಂಗಗಳೆಂದು ವಾದಿಸುವವರು ಈ ಅಂಶವನ್ನೇ ಪ್ರಧಾನವಾಗಿ ಪರಿಗಣಿಸುತ್ತಾರೆ. ಕಾರ್ಮಿಕನ ವಿಚಾರದಲ್ಲಿ ಶ್ರಮದ ಭಾಗ ಹೆಚ್ಚು; ಸಂಘಟನೆಯ ಭಾಗ ಇಲ್ಲವೆನ್ನುವಷ್ಟು ಅಲ್ಪ. ಉದ್ಯಮಿಯ ಕಾರ್ಯದಲ್ಲಿ ಸಂಘಟನೆಯ ಅಂಶವೇ ಅಧಿಕ. ಅದೇ ಎಲ್ಲವೂ ಎಂದರೂ ಸಂದೀತು. ಕಾರ್ಮಿಕ ತನ್ನ ದುಡಿಮೆಯನ್ನಷ್ಟೇ ಸಂಘಟಿಸುತ್ತಾನೆ. ಉದ್ಯಮಿ ಇತರರ ಕೆಲಸವನ್ನು ಸಂಘಟಿಸುತ್ತಾನೆ. ಉದ್ಯಮದ ಬಗ್ಗೆ ಎಲ್ಲ ಹೊಣೆಗಾರಿಕೆಯೂ ಆತನದು; ತೀರ್ಮಾನ ಕೈಕೊಳ್ಳುವವನೂ ಅದನ್ನು ಕಾರ್ಯರೂಪಕ್ಕೆ ತರುವವನೂ ಆತನೇ. ಉದ್ಯಮಿಯ ದೃಷ್ಟಿಯಲ್ಲಿ ಉಳಿದ ಮೂರು ಅಂಗಗಳೂ ಅವನ ವಶದಲ್ಲಿರುವ ಉತ್ಪಾದನ ಸಾಧನಗಳು. ಆತ ಸ್ವಲ್ಪಮಟ್ಟಿಗೆ ಅವುಗಳಲ್ಲಿ ಒಂದನ್ನು ಇನ್ನೊಂದರ ಬದಲು ಬಳಸಬಲ್ಲ. ಆದರೆ ಈ ಮೂರು ಅಂಗಗಳಲ್ಲಿ ಯಾವುದನ್ನೂ ಉದ್ಯಮಿಯ ಬದಲು ಬಳಸಲಾಗುವುದಿಲ್ಲ.
ಭೂಮಿ, ಶ್ರಮ ಹಾಗೂ ಬಂಡವಾಳಗಳನ್ನು ನಿರ್ದಿಷ್ಟ ಹಾಗೂ ಅನಿರ್ದಿಷ್ಟ ಅಂಗಗಳೆಂದೂ ವಿಂಗಡಿಸಬಹುದು. ಇವುಗಳ ಪರಸ್ಪರ ಸಾಮ್ಯದ ಪ್ರಾಮುಖ್ಯವನ್ನು ಈ ವಿಧಾನ ಒತ್ತಿ ಹೇಳುತ್ತದೆ. ಅಲ್ಲದೆ ಸಂಘಟನೆ ಇದರಿಂದ ಭಿನ್ನವಾದದ್ದು. ಒಂದೇ ಬಗೆಯಲ್ಲಿ ನಿಯೋಜಿಸಬಹುದಾದ ಅಂಗಗಳು ನಿರ್ದಿಷ್ಟ ಅಂಗಗಳು; ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಬದಲಾಯಿಸಬಹುದಾದವು ಅನಿರ್ದಿಷ್ಟವೆನಿಸಿಕೊಳ್ಳುತ್ತವೆ. ಒಂದು ಬಗೆಯ ಬಂಡವಾಳದ ಬದಲು ಒಂದು ಬಗೆಯ ಶ್ರಮವನ್ನು ಬಳಸುವುದು ಸಾಧ್ಯ. ಆದರೆ ಒಂದು ಬಗೆಯ ಶ್ರಮದ ಬದಲು ಇನ್ನೊಂದು ಬಗೆಯ ಶ್ರಮವನ್ನಾಗಲಿ, ಒಂದು ಬಗೆಯ ಬಂಡವಾಳದ ಬದಲು ಇನ್ನೊಂದು ಬಗೆಯ ಬಂಡವಾಳವನ್ನಾಗಲಿ ಬಳಸುವುದು ಸಾಧ್ಯವಾಗಲಾರದು. ಇಂಥ ಪ್ರತಿ ನಿಧಾನದ ಬಗ್ಗೆ ತೀರ್ಮಾನ ಕೈಕೊಳ್ಳುವುದು ಉದ್ಯಮಿಯ ಕೆಲಸ.
ಉತ್ಪಾದನಾಂಗಗಳಾದ ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆಗಳ ಸೂಕ್ತ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಭೂಮಿ, ಬಂಡವಾಳ, ಸಂಘಟನೆ.(ಕೆ.ಆರ್.ಎಂ.)

ಉತ್ಪಾದನಾನುಗುಣ ಕೂಲಿ
ಕಾರ್ಮಿಕನ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಆತನಿಗೆ ಕೂಲಿ ನಿರ್ಧರಿಸುವ ವಿಧಾನ; ಕೂಲಿಗುತ್ತಿಗೆ (ಪೀಸ್ವರ್ಕ್, ಪೀಸ್ ರೇಟ್ ವೇಜ್, ಪೇಮೆಂಟ್ ಬೈ ರಿಸಲ್ಟ್‌್ಸ). ಹೆಚ್ಚು ಉತ್ಪಾದಿಸಿದಷ್ಟೂ ಹೆಚ್ಚು ಕೂಲಿ ದೊರಕುವುದೆಂಬ ಕಾರಣದಿಂದ ಕಾರ್ಮಿಕ ಹೆಚ್ಚು ಆಸ್ಥೆಯಿಂದ ದುಡಿಯಲು ಇದು ಸಾಮಾನ್ಯವಾಗಿ ಉತ್ತೇಜಕ.

ಈ ವ್ಯವಸ್ಥೆಯಲ್ಲಿ ಹೆಚ್ಚು ಲಾಭ ಗಳಿಸುವುದೂ ಬಿಡುವುದೂ ಕಾರ್ಮಿಕನಿಗೇ ಸೇರಿದ್ದು. ಕೊಟ್ಟ ಕೆಲಸ ಬೇಗ ಮುಗಿಸಿದರೆ ಅಷ್ಟಕ್ಕೆ ಆತನಿಗೆ ಸಂಪೂರ್ಣ ಕೂಲಿ ಲಭಿಸುವುದಲ್ಲದೆ, ಮಿಗಿಸಿದ ಕಾಲದಲ್ಲಿ ಆತ ಇನ್ನಷ್ಟು ದುಡಿದು ಇನ್ನಷ್ಟು ಕೂಲಿಗಳಿಸಬಹುದು. ಕೆಲಸ ಮುಗಿಸಲು ಹೆಚ್ಚು ಕಾಲ ತೆಗೆದುಕೊಂಡರೆ ಆಗ ಆತನಿಗೇ ನಷ್ಟ. ಕಾಲಾನುಗುಣ ಕೂಲಿಯಷ್ಟು ಅವನಿಗೆ ದೊರಕದೆ ಹೋಗಬಹುದು ಆದ್ದರಿಂದ ಉತ್ಪಾದಕನಿಗೆ ನಷ್ಟವಿಲ್ಲ. ಕಾರ್ಮಿಕ ಶೀಘ್ರವಾಗಿ ದುಡಿದರಂತೂ ಉದ್ಯಮ ಚಾಲಕನಿಗೆ ಹೆಚ್ಚು ಲಾಭ. ಇದು ಈ ವಿಧಾನದ ಹಿಂದಿರುವ ಸರಳ ತರ್ಕ.

ಕೂಲಿಗುತ್ತಿಗೆ ಹಲವು ತೆರ. ಉತ್ಪನ್ನಕ್ಕೂ ಕೂಲಿಗೂ ನೇರ ಸಂಬಂಧ ಕಲ್ಪಿಸುವುದು ಒಂದು ವಿಧಾನ. ಇಲ್ಲಿ ಕಾರ್ಮಿಕ ತಯಾರಿಸಿದ ಪದಾರ್ಥದ ಪ್ರತಿ ಘಟಕಕ್ಕೂ ಒಂದೇ ಕೂಲಿಯ ದರ ಇದ್ದು ಆತನ ಉತ್ಪಾದನೆ ಹೆಚ್ಚಿದಂತೆ ಕೂಲಿಯೂ ಸಮಾನಾಂತರವಾಗಿ ಏರುತ್ತದೆ. ಇಲ್ಲಿ ಉತ್ಪನ್ನದ ಪ್ರತಿ ಘಟಕದ ಕೂಲಿವೆಚ್ಚ ಒಂದೇ.

ಆದರೆ ಉತ್ಪಾದನೆ ಹೆಚ್ಚಿದಂತೆ ಸ್ಥಿರ ಬಂಡವಾಳದ ಸರಾಸರಿ ವೆಚ್ಚ ಕಡಿಮೆ ಆಗುವುದರಿಂದ ಘಟಕದ (ಸರಾಸರಿ) ವೆಚ್ಚ ಕಡಿಮೆಯಾಗುತ್ತ ಹೋಗುತ್ತದೆ. ಒಟ್ಟು ಉತ್ಪಾದನ ವೆಚ್ಚ ಕಡಿಮೆಯಾಗಲು ಕಾರ್ಮಿಕನೇ ಕಾರಣನಾದ್ದರಿಂದ ಇದರ ಫಲ ಕಾರ್ಮಿಕನಿಗೇ ಸೇರತಕ್ಕದೆಂಬ ವಾದದ ಆಧಾರದ ಮೇಲೆ ಕಾರ್ಮಿಕನ ಉತ್ಪಾದನೆ ಹೆಚ್ಚಿದಂತೆ ಪ್ರತಿ ಘಟಕಕ್ಕೂ ಕೂಲಿ ದರ ಹೆಚ್ಚಿಸುವುದು ಇನ್ನೊಂದು ವಿಧಾನ.
ಇನ್ನು ಕೆಲವರು ಈ ದೃಷ್ಟಿಯನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಹೆಚ್ಚು ಬಂಡವಾಳ, ಒಳ್ಳೆಯ ಸಾಮಗ್ರಿ ಮತ್ತು ಉದ್ಯಮಿಯ ದಕ್ಷ ನಿರ್ವಹಣೆ-ಇವುಗಳೂ ಅಧಿಕೋತ್ಪಾದನೆಗೆ ಕಾರಣವೆಂಬುದು ಇವರ ವಾದ. ಉತ್ಪಾದನೆಯ ಸರಾಸರಿ ವೆಚ್ಚ ಕಡಿಮೆಯಾಗುವುದರಿಂದ ಬರುವ ಫಲವನ್ನು ಕಾರ್ಮಿಕ ಹಾಗೂ ಉದ್ಯಮಿಗಳ ನಡುವೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹಂಚಬೇಕೆಂಬುದು ಇಂಥವರ ಅಭಿಪ್ರಾಯ. ಇಲ್ಲಿ ಉತ್ಪಾದನೆಯ ಏರಿಕೆಗಿಂತ ಕೂಲಿಯ ಏರಿಕೆಯ ದರ ಕಡಿಮೆ.

ಕಾರ್ಮಿಕರು ಹೆಚ್ಚು ಉತ್ಪತ್ತಿ ಮಾಡುವ ಹಾಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಹೆಚ್ಚು ಹೆಚ್ಚು ಉತ್ಪತ್ತಿ ಮಾಡಿದಂತೆ ಹೆಚ್ಚು ಹೆಚ್ಚು ದರದಲ್ಲಿ ಕೂಲಿ ನೀಡುವ ವ್ಯವಸ್ಥೆಯೂ ಉಂಟು. ಎಲ್ಲಿ ಉತ್ಪಾದನೆ ಕಾರ್ಮಿಕನ ದುಡಿಮೆಯನ್ನೇ ಹೆಚ್ಚಾಗಿ ಅವಲಂಬಿಸಿದೆಯೋ ಅಂಥಲ್ಲಿ ಈ ವಿಧಾನ ಹೆಚ್ಚು ಉಪಯುಕ್ತ.

ಇವುಗಳಲ್ಲಿ ಯಾವ ವ್ಯವಸ್ಥೆಯೇ ಜಾರಿಯಲ್ಲಿರಲಿ, ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ಕಾರ್ಮಿಕ ಸಾಕಷ್ಟು ಉತ್ಪಾದಿಸಲಾಗದಿದ್ದ ಪಕ್ಷದಲ್ಲಿ ಅವನಿಗೆ ಅಗತ್ಯ ಮಟ್ಟದ ಕೂಲಿ (ವೇತನ) ಕೊಡಲಾಗುತ್ತದೆ. ಇದು ಒಬ್ಬ ಸಾಮಾನ್ಯ ಕೆಲಸಗಾರ ತಯಾರಿಸಬಹುದಾದ ಉತ್ಪನ್ನಕ್ಕೆ ಕೊಡಬಹುದಾದ ವೇತನದಷ್ಟಾದರೂ ಇರಬೇಕೆಂಬುದಾಗಿ ಭಾವಿಸಲಾಗಿದೆ. ಎರಡನೆಯದಾಗಿ, ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವಲ್ಲಿ ಮಾತ್ರ ಈ ವ್ಯವಸ್ಥೆಗಳನ್ನು ಆಚರಣೆಗೆ ತರಬಹುದು. ಇಂಥ ಅನುಕೂಲವಿಲ್ಲದಿದ್ದಲ್ಲಿ ಕೊನೆಯ ಪಕ್ಷ ಒಂದು ತಂಡದ ಉತ್ಪನ್ನವನ್ನಳೆಯಲು ಸಾಧ್ಯವಾದರೂ ಆ ತಂಡದ ಉತ್ಪಾದನಾನುಗುಣ ಕೂಲಿಯನ್ನು ಎಲ್ಲರಿಗೂ ಆಚರಣೆಗೆ ತರಬಹುದು. ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯನ್ನು ಸಾಮಾನ್ಯವಾಗಿ ಉತ್ಪಾದನೆಗೆ ಸಂಬಂಧಿಸಿದ ಕಾರ್ಮಿಕರ ಪ್ರತ್ಯಕ್ಷ ಶ್ರಮಕ್ಕೆ ಅನ್ವಯಿಸುವಂತೆ ಆಚರಣೆಗೆ ತರಬಹುದೇ ಹೊರತು ಪರೋಕ್ಷ ಶ್ರಮಿಕರಾದ ಕಾವಲುಗಾರ, ಗುಮಾಸ್ತ, ಮತ್ತಿತರ ಆಡಳಿತ ವರ್ಗದವರಿಗೆ ಅನ್ವಯಿಸಲು ಸಾಧ್ಯವಿಲ್ಲ.

ಈ ವ್ಯವಸ್ಥೆಯಲ್ಲಿ ಕೆಲವು ಅನುಕೂಲಗಳಿವೆ. ಮೊದಲನೆಯದಾಗಿ, ಉತ್ಪಾದನೆ ಹೆಚ್ಚಿದಂತೆ ಕೂಲಿ ಹೆಚ್ಚುವ ಸಂಭವವಿರುವುದರಿಂದ ಈ ವ್ಯವಸ್ಥೆಯಲ್ಲಿ ಕಾರ್ಮಿಕರು ಹೆಚ್ಚು ಉತ್ಪತ್ತಿ ಮಾಡುವಂತೆ ಉತ್ತೇಜನವಿರುತ್ತದೆ. ಕಾರ್ಮಿಕರ ಉತ್ಪಾದಕತೆ ಹೆಚ್ಚುವುದ ರಿಂದಲೂ ಹೆಚ್ಚು ಉಸ್ತುವಾರಿಯ ಆವಶ್ಯಕತೆಯಿಲ್ಲದ್ದರಿಂದಲೂ ಉತ್ಪಾದನ ವೆಚ್ಚ ಕಡಿಮೆಯಾಗಿ ಸರಕುಗಳ ಬೆಲೆಗಳು ಕಡಿಮೆಯಾಗುವ ಸಂಭವವುಂಟು. ಅಲ್ಲದೆ, ಕಾರ್ಮಿಕರು ಕಾಲ ಕಳೆಯದೆ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಹೆಚ್ಚುಗಳಿಸುವಂತೆ ಈ ವ್ಯವಸ್ಥೆ ಸಹಾಯಕ. ಇದರಲ್ಲಿ ಕೆಲವು ನ್ಯೂನತೆಗಳೂ ಉಂಟು. ಕಾರ್ಮಿಕ ಹೆಚ್ಚು ಗಳಿಸುವ ಆಸೆಯಿಂದ ಕೆಲಸದ ವೇಗವನ್ನು ತೀವ್ರಗೊಳಿಸಿ ತನ್ನ ಆರೋಗ್ಯಕ್ಕೆ ಭಂಗ ತಂದುಕೊಳ್ಳುವುದಲ್ಲದೆ ಯಂತ್ರೋಪಕರಣಗಳನ್ನೂ ಕೆಡಿಸಬಹುದು. ಕಾರ್ಮಿಕರಲ್ಲಿ ಪೈಪೋಟಿ ಹೆಚ್ಚಿ, ಸರಕುಗಳ ಗುಣಮಟ್ಟದ ಇಳಿತಕ್ಕೆ ಎಡೆಯಾದರೂ ಆಶ್ಚರ್ಯವಿಲ್ಲ. ಅಲ್ಲದೆ ಇಂಥ ವ್ಯವಸ್ಥೆಯಲ್ಲಿ ಕಾರ್ಮಿಕರ ಉದ್ಯೋಗಾವಕಾಶಗಳು ಹೆಚ್ಚದಿರಬಹುದೆಂದು ಕಾರ್ಮಿಕ ಸಂಘಗಳು ಈ ವ್ಯವಸ್ಥೆಯನ್ನು ಬಲವಾಗಿ ಖಂಡಿಸುವುದೂ ಉಂಟು.
ಆದರೂ ಈ ವ್ಯವಸ್ಥೆ (1940)ರಿಂದ ಈಚೆಗೆ ಹೆಚ್ಚು ಪ್ರಚಾರಕ್ಕೆ ಬರುತ್ತಿದೆ. ಶ್ರಮ ವಿಭಾಗದ ಫಲವಾಗಿ ಪ್ರತಿಯೊಂದು ಕೆಲಸವನ್ನೂ ಹಲವಾರು ಕ್ರಿಯೆಗಳಾಗಿ ವಿಂಗಡಿಸಿ ಒಂದೊಂದು ಕ್ರಿಯೆಯನ್ನೂ ಒಬ್ಬೊಬ್ಬ ಕಾರ್ಮಿಕನಿಗೆ ವಹಿಸುವುದರಿಂದ ಕೆಲಸ ಹೆಚ್ಚು ಸರಳವಾಗಿ ಆತನ ಉತ್ಪನ್ನವನ್ನು ಸುಲಭವಾಗಿ ಅಳೆಯಲು ಸಾಧ್ಯವಾಗಿದೆ. ಕಾಲ ಮತ್ತು ವೇಗಗಳ ಅಧ್ಯಯನಕ್ಕೆ ಈಚೆಗೆ ಹೆಚ್ಚು ಪುರಸ್ಕಾರ ದೊರೆತಿರುವುದರಿಂದ ಒಬ್ಬ ಸಾಮಾನ್ಯ ಕಾರ್ಮಿಕ ತಯಾರಿಸಬಹುದಾದ ಉತ್ಪನ್ನದ ಮೊತ್ತ ಎಷ್ಟೆಂಬುದನ್ನು ನಿಷ್ಕರ್ಷಿಸುವುದು ಸಾಧ್ಯ; ಇದರಿಂದ ಕಾರ್ಮಿಕನಿಗೆ ಕೊಡಬೇಕಾಗಬಹುದಾದ ಕನಿಷ್ಠ ವೇತನವನ್ನು ಗೊತ್ತುಪಡಿಸು ವುದೂ ಸಾಧ್ಯವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎರಡನೆಯ ಮಹಾಯುದ್ಧಾನಂತರ ನಿರುದ್ಯೋಗ ಕಡಿಮೆಯಾಗುತ್ತ ಬಂದ ಕಾರಣ ಕಾರ್ಮಿಕ ಸಂಘಗಳಿಂದ ಈ ವ್ಯವಸ್ಥೆಗೆ ವಿರೋಧ ಕಡಿಮೆಯಾಗಿದೆ.
ಉತ್ಪಾದನಾನುಗುಣ ಕೂಲಿ ಈಚೆಗೆ ಹೆಚ್ಚು ಪ್ರಚಾರಕ್ಕೆ ಬಂದಿದ್ದರೂ ಇದು ಕೆಲವೇ ಉದ್ಯಮಗಳಿಗೆ ಅನ್ವಯವಾಗಿದೆ. ಏಕೆಂದರೆ ಮೊದಲೇ ಹೇಳಿದಂತೆ ಈ ವ್ಯವಸ್ಥೆಯನ್ನು ಕೇವಲ ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿರುವ ಉದ್ಯಮಗಳಲ್ಲಿ ಮಾತ್ರ ಆಚರಣೆಗೆ ತರಲು ಸಾಧ್ಯ. ಕಾರ್ಖಾನೆ, ಗಣಿ, ಮತ್ತು ಪ್ಲಾಂಟೇಷನ್ ಉದ್ಯಮಗಳಲ್ಲಿ ಮಾತ್ರ ಈ ಬಗೆಯ ಸರಳ ವಿಧಾನಗಳನ್ನನ್ವಯಿಸಬಹುದು. ವ್ಯಕ್ತಿಗತ ಉತ್ಪನ್ನವನ್ನಳೆಯಲು ಸಾಧ್ಯವಿಲ್ಲದಿರುವ ಉದ್ಯಮಗಳಾದ ವಾಣಿಜ್ಯ ಮತ್ತು ಹಂಚಿಕೆ ಉದ್ಯಮಗಳಲ್ಲಿ ಈ ವ್ಯವಸ್ಥೆ ಆಚರಣೆಯಲ್ಲಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ಉತ್ಪಾದನಾನುಗುಣ ಕೂಲಿ ಪಡೆಯುವವರ ಸಂಖ್ಯೆ ಹೆಚ್ಚಿದೆ. ಉದಾಹರಣೆಗೆ, ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 30%, ಇಂಗ್ಲೆಂಡಿನಲ್ಲಿ 40%, ಯುರೋಪಿ ನಲ್ಲಿ 50%-60% ಮತ್ತು ಸೋವಿಯತ್ ಒಕ್ಕೂಟದಲ್ಲಿ 75% ಕಾರ್ಮಿಕರು ಉತ್ಪಾದನಾನುಗುಣ ವಾಗಿ ಕೂಲಿ ಪಡೆಯುತ್ತಿದ್ದಾರೆ. ಭಾರತದಲ್ಲಿ ಈ ವ್ಯವಸ್ಥೆ ಬಟ್ಟೆ ಕೈಗಾರಿಕೆಗಳಲ್ಲಿ ಮೊದಮೊದಲು ಆಚರಣೆಗೆ ಬಂತು. ಅನಂತರ ವ್ಯಕ್ತಿಗತ ಉತ್ಪನ್ನವನ್ನಳೆಯಲನುಕೂಲವಾದ ಇತರ ಉದ್ಯಮಗಳಾದ ಗಣಿ ಮತ್ತು ಪ್ಲಾಂಟೇಷನ್ ಉದ್ಯಮಗಳಲ್ಲೂ ಪ್ರಚಾರಕ್ಕೆ ಬರುತ್ತಿದೆ. ಭಾರತ ಸರ್ಕಾರದ ಲೇಬರ್ ಬ್ಯೂರೊ 1958-59ರಲ್ಲಿ ನಡೆಸಿದ ಒಂದು ಪರಿಶೀಲನೆಯ ಪ್ರಕಾರ, ಈ ಬಗೆಯ ಕೂಲಿ ಪಡೆಯುವ ಕಾರ್ಮಿಕರ ಸಂಖ್ಯೆ ಕಾರ್ಖಾನೆ ಕೈಗಾರಿಕೆಗಳಲ್ಲಿ 31.8%, ಗಣಿ ಕೈಗಾರಿಕೆಗಳಲ್ಲಿ 57.8% ಮತ್ತು ಪ್ಲಾಂಟೇಷನ್ 75.4% ಎಂದು ತಿಳಿದುಬಂದಿದೆ. ಉತ್ಪನ್ನವನ್ನಳೆಯುವುದು ಸಾಧ್ಯವಿಲ್ಲದ ಉದ್ಯಮಗಳಲ್ಲಿ ಇಂಥವರ ಸಂಖ್ಯೆ ಬಲು ಕಡಿಮೆ. ಉದಾಹರಣೆಗೆ, ಎಂಜಿನಿಯರಿಂಗ್ ಉದ್ಯಮಗಳಲ್ಲಿ ಇವರ ಸಂಖ್ಯೆ ಕೇವಲ 1.1%.

ಯುರೋಪ್, ಸೋವಿಯತ್ ಒಕ್ಕೂಟ ಮತ್ತು ಚೀನಗಳೊಡನೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನಾನುಗುಣ ಕೂಲಿವ್ಯವಸ್ಥೆಗೆ ಹೆಚ್ಚು ಪುರಸ್ಕಾರ ಸಿಕ್ಕಿರುವಂತೆ ಕಂಡುಬರುವು ದಿಲ್ಲ. ಆದರೂ ಈಚೆಗೆ ಈ ವ್ಯವಸ್ಥೆ ಹೆಚ್ಚಾಗಿ ಜಾರಿಗೆ ಬರಬೇಕೆಂಬ ಭಾವನೆ ಬೆಳೆಯುತ್ತಿದೆ. ಉತ್ಪನ್ನಗಳನ್ನು ಹೆಚ್ಚಿಸುವುದೇ ಭಾರತದ ಯೋಜನೆಗಳ ಸದ್ಯದ ಗುರಿಯಾದ್ದರಿಂದ ಉತ್ಪನ್ನವನ್ನು ಹೆಚ್ಚಿಸುವಂತೆ ಉತ್ತೇಜನ ಕೊಡುವಂಥ ಈ ವ್ಯವಸ್ಥೆ ಒಳ್ಳೆಯದೆಂದು ಭಾರತ ಸರ್ಕಾರ ಒಪ್ಪಿಕೊಂಡು ಇದಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟಿದೆ. ಅಲ್ಲದೆ ಪ್ರತಿ ಕೈಗಾರಿಕೆಗೂ ನೇಮಕವಾಗುವ ವೇತನ ಮಂಡಲಿಗೆ ಸಮರ್ಪಕವಾದ ಉತ್ಪಾದನಾನುಗುಣ ಕೂಲಿ ವ್ಯವಸ್ಥೆಯೊಂದನ್ನು ರಚಿಸಿಕೊಡುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ವೇತನ ಮಂಡಲಿಗಳು ಈ ವಿಷಯದಲ್ಲಿ ಅನೇಕ ಸಲಹೆಗಳನ್ನು ಆಗ್ಗಿಂದಾಗ್ಗೆ ನೀಡುತ್ತಿವೆ.

ಈ ವ್ಯವಸ್ಥೆಯನ್ನು ಯಾವುದೇ ಉದ್ಯಮದಲ್ಲಿ ಆಚರಣೆಗೆ ತರುವ ಮೊದಲು ಹಲವು ಅಂಶಗಳನ್ನು ಗಮನದಲ್ಲಿಡುವುದು ಅತ್ಯಾವಶ್ಯಕ. ಮೊದಲನೆಯದಾಗಿ, ಕಾಲ ಮತ್ತು ವೇಗದ ಅಧ್ಯಯನದ ಸಹಾಯದಿಂದ ಪ್ರತಿ ಕೆಲಸದ ವಿಷಯದಲ್ಲೂ ಸಾಮಾನ್ಯ ಕೆಲಸಗಾರ ತಯಾರಿಸಬಹುದಾದ ಉತ್ಪನ್ನವೆಷ್ಟೆಂಬುದನ್ನು ಖಚಿತಪಡಿಸಿಕೊಂಡು ಪ್ರತಿ ಕೆಲಸಕ್ಕೂ ಮೂಲಭೂತ ಕೂಲಿಯನ್ನು ನಿಗದಿಪಡಿಸಬೇಕು. ಇದರ ಜೊತೆಗೆ ಕಾರ್ಮಿಕರು ಅನವಶ್ಯ ವೇಗದಿಂದ ಕೆಲಸ ಮಾಡಿ ಯಂತ್ರೋಪಕರಣ ಮತ್ತು ಸರಕುಗಳನ್ನು ಕೆಡಿಸದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆಯನ್ನು ಆಚರಣೆಗೆ ತಂದ ಮೇಲೆ, ವೇತನ ದರವನ್ನು ಸೂಕ್ತವಾಗಿ ಬದಲಾಯಿಸದೆ ಉತ್ಪಾದನ ವಿಧಾನಗಳನ್ನು ಬದಲಾಯಿಸ ಕೂಡದು. ಕೊನೆಯದಾಗಿ, ಇದನ್ನು ಆಚರಣೆಗೆ ತರುವ ಮೊದಲು ಕಾರ್ಮಿಕ ಸಂಘಗಳ ಸಲಹೆ ಪಡೆಯುವುದು ಒಳ್ಳೆಯದು; ಇಲ್ಲದಿದ್ದರೆ ಕೈಗಾರಿಕಾ ಸಂಬಂಧಗಳು ಕೆಡುವ ಸಂಭವವುಂಟು. ಈ ಮುಂಜಾಗ್ರತೆ ತೆಗೆದುಕೊಳ್ಳುವುದರಿಂದ ಉತ್ಪಾದನಾನುಗುಣ ಕೂಲಿ ವ್ಯವಸ್ಥೆ ಯಶಸ್ವಿಯಾಗುವುದೆಂದು ಭಾವಿಸಲಾಗಿದೆ.	(ಎ.ಬಿ.ಎ.)

ಉತ್ಪಾದನೆಯ ವೆಚ್ಚ
ಒಂದು ಪದಾರ್ಥದ (ಕಮಾಡಿಟಿ) ನಿರ್ದಿಷ್ಟ ಪ್ರಮಾಣದ ಉತ್ಪತ್ತಿಯಲ್ಲಿ ನಿರತವಾದ ಎಲ್ಲ ಉತ್ಪಾದನಾಂಗಗಳಿಗೆ ಸಲ್ಲುವ ಹಣದ ಮೊತ್ತ (ಕಾಸ್ಟ್‌ ಆಫ್ ಪ್ರೊಡಕ್ಷನ್). ಉತ್ಪಾದನೆಯ ವೆಚ್ಚಕ್ಕೂ ಪದಾರ್ಥದ ಉತ್ಪತ್ತಿಯ ಮೊತ್ತಕ್ಕೂ ನೇರ ಸಂಬಂಧವುಂಟು. ರೇಡಿಯೋ ಉತ್ಪಾದನೆಗಾಗಿ ಇಂತಿಷ್ಟು ಹಣ ವೆಚ್ಚವಾಗುತ್ತಿದೆಯೆಂದಷ್ಟೇ ಹೇಳಿದರೆ ಆ ಮಾತಿನಲ್ಲಿ ಏನೂ ಅರ್ಥವಿಲ್ಲ. ಈ ವೆಚ್ಚದ ಅವಧಿಯನ್ನೂ ಈ ಅವಧಿಯಲ್ಲಿನ ಉತ್ಪತ್ತಿಯನ್ನೂ ಹೇಳಿದಾಗಲೇ ಅದು ಸುಸಂಬದ್ದ.

ವೆಚ್ಚ ಎಂಬ ಪದಕ್ಕೆ ನಾನಾ ಅರ್ಥಗಳುಂಟು. (ಅಸಲು ಎಂಬ ಪದವನ್ನು ಸಂದರ್ಭೋಚಿತವಾಗಿ ಪರ್ಯಾಯಪದವಾಗಿ ಬಳಸಬಹುದು.) ನಿರ್ದಿಷ್ಟ ಉತ್ಪತ್ತಿಯ ದೃಷ್ಟಿಯಲ್ಲಿ ಇದು ಒಟ್ಟು ವೆಚ್ಚ. ಉದಾ : ಕಳೆದ ತಿಂಗಳಲ್ಲಿ ತಯಾರಿಸಲಾದ ಒಂದು ನೂರು ರೇಡಿಯೋಗಳ ವೆಚ್ಚ ರೂ. 50,000. ತಯಾರಿಸಲಾದ ಪದಾರ್ಥದ ಒಂದೊಂದು ಘಟಕದ ವೆಚ್ಚವನ್ನೂ ಕುರಿತು ಹೇಳಿದಾಗ ಇದು ಸರಾಸರಿ ವೆಚ್ಚ. ಉದಾ : ಒಂದು ರೇಡಿಯೋವಿನ ಬೆಲೆ ರೂ. 500.

100 ರೇಡಿಯೋ ತಯಾರಿಸುವ ಒಂದು ಉದ್ಯಮ ಸಂಸ್ಥೆ 101ನ್ನು ತಯಾರಿಸಿದಾಗ ಒಟ್ಟು ಉತ್ಪಾದನೆಯ ವೆಚ್ಚ ಅಧಿಕವಾದರೂ 101ನೆಯ ರೇಡಿಯೋವಿನ ಉತ್ಪಾದನೆಯ ವೆಚ್ಚ ಸರಾಸರಿ ವೆಚ್ಚಕ್ಕಿಂತ ಕಡಿಮೆಯೇ ಇರಬಹುದು; ಅಥವಾ (ಉತ್ಪಾದನೆಯಲ್ಲಿ ಇಳಿಮುಖ ಪ್ರತಿಫಲ ಪ್ರವೃತ್ತಿ ಕಂಡುಬಂದಾಗ) ಹೆಚ್ಚಾಗಿಯೂ ಇರಬಹುದು; ಇಲ್ಲವೇ ಸಮನಾಗಿರಬಹುದು. ಇದು ಆ ಪದಾರ್ಥದ ಅಂಚಿನ ಘಟಕ ವೆಚ್ಚ. ಉತ್ಪಾದನೆಯ ಹೆಚ್ಚಳವಾದರೂ ಅಂಚಿನ ವೆಚ್ಚ ಅಚಲವಾಗಿ ಮುಂದುವರಿಯಲೂಬಹುದು.

ಪದಾರ್ಥ ತಯಾರಿಕೆಗಾಗಿ ಉತ್ಪಾದಕ ಹಣದ ರೂಪದಲ್ಲಿ ಮಾಡಿದ ಖರ್ಚುಗಳೆಲ್ಲ ಉತ್ಪಾದನೆಯ ವೆಚ್ಚದಲ್ಲಿ ಸೇರಿರುವುದರಿಂದ ಇದನ್ನು ಉತ್ಪಾದನೆಯ ಹಣವೆಚ್ಚವೆನ್ನಬಹುದು (ಮನಿಕಾಸ್ಟ್‌). ಉತ್ಪಾದಕನ ದೃಷ್ಟಿಯಲ್ಲಿ ಇದೇ ಮುಖ್ಯ. ಉತ್ಪನ್ನದ ಮಾರಾಟದಿಂದ ಆತನಿಗೆ ದೀರ್ಘಕಾಲದಲ್ಲಿ ಉತ್ಪಾದನೆಯ ವೆಚ್ಚವೇ ಅಲ್ಲದೆ ಸೂಕ್ತವಾದ ಲಾಭವೂ ದೊರಕಬೇಕು. ಪದಾರ್ಥದ ಬೆಲೆಯಲ್ಲಿ ಇವೆರಡೂ ಯುಕ್ತಪ್ರಮಾಣದಲ್ಲಿ ಅಡಕವಾಗಿರುವಂತೆ ಆತ ಎಚ್ಚರಿಕೆ ನಿರ್ವಹಿಸಬೇಕು.

ಕೂಲಂಕಷವಾಗಿ ನೋಡುವುದಾದರೆ ಈ ಹಣವೆಚ್ಚದಿಂದ ನಿಜಸ್ಥಿತಿಯ ಅರಿವಾಗುವು ದಿಲ್ಲ. ಪದಾರ್ಥೋತ್ಪಾದನೆಗಾಗಿ ಒಂದು ಸಂಸ್ಥೆ ಮಾಡುವ ಹಣದ ವೆಚ್ಚ ಆ ಸಂಸ್ಥೆಯ ದೃಷ್ಟಿಯಿಂದ ಮುಖ್ಯ, ನಿಜ. ಆದರೆ ಹಣವೆಂಬುದು ಮೌಲ್ಯಗಳ ಸಾಪೇಕ್ಷ ಅಳತೆಯ ಸಾಧನವಾದರೂ ಇದು ಸಂಪೂರ್ಣ ಸಮರ್ಪಕವೇನೂ ಅಲ್ಲ. ಹಣದ ಮುಸುಕನ್ನು ಕಿತ್ತು ಒಳಹೊಕ್ಕು ನೋಡಿದಾಗಲೇ ಉತ್ಪಾದನೆಯ ನಿಜವಾದ ಅಥವಾ ಯಥಾರ್ಥವಾದ ವೆಚ್ಚವೇನೆಂಬುದು ವ್ಯಕ್ತವಾಗುತ್ತದೆ.

ಯಥಾರ್ಥ ವೆಚ್ಚದ (ರೀಯಲ್ ಕಾಸ್ಟ್‌) ಬಗ್ಗೆ ಅರ್ಥಶಾಸ್ತ್ರಜ್ಞರು ನಾನಾ ಬಗೆಯ ವ್ಯಾಖ್ಯೆ ನೀಡಿದ್ದಾರೆ. ಪದಾರ್ಥೋತ್ಪಾದನೆಗಾಗಿ ಕಾರ್ಮಿಕರು ಉಪಯೋಗಿಸಿದ ಶ್ರಮ ಹಾಗೂ ತ್ಯಾಗಗಳೇ ಅದರ ಯಥಾರ್ಥವೆಚ್ಚವೆಂಬುದು ಆಡಂಸ್ಮಿತ್ತನ ಅಭಿಪ್ರಾಯ. ಮಾರ್ಷಲ್ ಇನ್ನೊಂದು ಹೆಜ್ಜೆ ಮುಂದೆ ಹೋಗುತ್ತಾನೆ. ವಿವಿಧ ಗುಣಧರ್ಮಗಳ ಎಲ್ಲ ಬಗೆಯ ಶ್ರಮಯತ್ನಗಳೂ ಆತನ ದೃಷ್ಟಿಯಲ್ಲಿ ಇದರಲ್ಲಿ ಅಡಕವಾಗಿವೆ. ಉತ್ಪಾದಿಸಿದ ಪದಾರ್ಥ ಅಂತಿಮವಾಗಿ ಸೇವೆಗೆ ದೊರಕುವವರೆಗೂ ತೋರಿಸಿದ ತಾಳ್ಮೆಯನ್ನೂ ಯಥಾರ್ಥ ವೆಚ್ಚದಲ್ಲಿ ಸೇರಿಸಬೇಕೆಂಬುದಾಗಿ ಮಾರ್ಷಲ್ ಹೇಳಿದ್ದಾನೆ. ಸ್ಥಿತಿಗತಿಗಳು ಸಂತತವಾಗಿ ವ್ಯತ್ಯಾಸ್ತವಾಗುತ್ತಿರುವ ಪ್ರಪಂಚದಲ್ಲಿ ಪದಾರ್ಥೋತ್ಪಾದನೆಯ ಹಣವೆಚ್ಚವೂ ಯಥಾರ್ಥವೆಚ್ಚವೂ ಒಂದೇ ಆಗಿರುವುದು ಸಾಧ್ಯವಿಲ್ಲ.

ಆಸ್ಟ್ರಿಯನ್ ಪಂಥದ ಅರ್ಥಶಾಸ್ತ್ರಜ್ಞರು ಯಥಾರ್ಥ ವೆಚ್ಚದ ವ್ಯಾಖ್ಯೆಗೊಂದು ಹೊಸ ಆಯಾಮವನ್ನೇ ಸೃಷ್ಟಿಸಿದ್ದಾರೆನ್ನಬಹುದು. ಸಮಾಜದಲ್ಲಿ ದೊರಕುವ ಸಾಧನಗಳು ಅಪರಿಮಿತವಲ್ಲ. ಆದ್ದರಿಂದ ಇಚ್ಚಿಸಿದ ಎಲ್ಲ ಪದಾರ್ಥಗಳನ್ನೂ ಪಡೆಯುವುದೂ ಸಾಧ್ಯವಿಲ್ಲ. ಆದ್ದರಿಂದ ಒಂದು ಪದಾರ್ಥ ಪಡೆಯುವುದಕ್ಕಾಗಿ ಇನ್ನೊಂದನ್ನು ತ್ಯಾಗಮಾಡಬೇಕಾಗಿ ಬರುತ್ತದೆ. ಅದನ್ನು ಬಿಟ್ಟು ಇದನ್ನೇ ಆಯ್ಕೆ ಮಾಡಿಕೊಂಡ ವ್ಯಕ್ತಿ ವಾಸ್ತವವಾಗಿ ಅದನ್ನು ತ್ಯಾಗಮಾಡಿದಂತೆ. ಈ ತ್ಯಾಗವೇ ಈ ಪದಾರ್ಥದ ಯಥಾರ್ಥವೆಚ್ಚ. ಇದಕ್ಕೆ ಅವರು ಅನುವು ವೆಚ್ಚವೆಂದು (ಆಪರ್ಚುನಿಟಿ ಕಾಸ್ಟ್‌) ಎಂದು ವಿಶಿಷ್ಟ ನಾಮಕರಣವನ್ನೇ ಮಾಡಿದ್ದಾರೆ. ಅನುವುವೆಚ್ಚದ ವಿಚಾರವಾಗಿ ಅಮೆರಿಕದ ಅರ್ಥಶಾಸ್ತ್ರಜ್ಞ ಡೆವೆನ್ಪೋರ್ಟ್ ವಿಶದವಾಗಿ ವ್ಯಾಖ್ಯಾನ ಮಾಡಿದ್ದಾನೆ. (ಅನುಭೋಗಿಗಳ) ಬಯಕೆಗಳ ಪೂರೈಕೆಗಾಗಿ ಪರಸ್ಪರವಾಗಿ ಸ್ಪರ್ಧಿಸುವ ಪದಾರ್ಥಗಳ ಬೇಡಿಕೆ ಅಂತಿಮವಾಗಿ ಅವುಗಳ ಅಂಚಿನ ಉಪಯುಕ್ತತೆಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ದೀರ್ಘಕಾಲದಲ್ಲಿ ಪದಾರ್ಥಗಳ ಉತ್ಪಾದನೆಯ ಕಾರ್ಯ ನಡೆಯುವುದು ಈ ಬೇಡಿಕೆಯ ಅನುಗುಣವಾಗಿಯೇ. ಒಂದು ಪದಾರ್ಥವನ್ನು ಅನುಭೋಗಿಗಳು ಎಲ್ಲಿಯವರೆಗೆ ಒಂದು ಬೆಲೆಕೊಟ್ಟು ಕೊಳ್ಳಲು ಸಿದ್ದವಾಗಿರುತ್ತಾರೋ ಅಲ್ಲಿಯವರೆಗೆ ಮಾತ್ರ ಆ ಬೆಲೆಯ ಮಟ್ಟಕ್ಕೆ ಅನುಗುಣವಾದ ಉತ್ಪಾದನೆಯ ವೆಚ್ಚಮಾಡಲು ಎಂದರೆ ಉತ್ಪಾದನೆಯ ನಾನಾ ಅಂಗಗಳನ್ನು ಆಯಾ ಬೆಲೆಗಳಲ್ಲಿ ಕೊಳ್ಳಲು ಉತ್ಪಾದಕರು ಸಿದ್ಧವಾಗಿರುತ್ತಾರೆ. ಹೀಗೆ ಒಂದು ಪದಾರ್ಥ ಅನುಭೋಗಿಯ ಹಂತದಲ್ಲಿ ನಿರ್ಣಯವಾಗುವ ಅನುವುವೆಚ್ಚ ಅರ್ಥ ಮೀಮಾಂಸೆಯಲ್ಲಿ ಬಹಳ ಪ್ರಮುಖವಾದದ್ದು. ಉತ್ಪಾದನೆಯಲ್ಲಿ ನಿರತವಾದ ನಾನಾ ಅಂಗಗಳ ನಡುವೆ ಅಂತಿಮವಾಗಿ ವರಮಾನದ ವಿತರಣೆಯಾಗುವುದೂ ಇದರ ಆಧಾರದ ಮೇಲೆಯೇ. (ಇದನ್ನು ಸ್ಥಾನಾಂತರ ವೆಚ್ಚವೆಂದೂ ಕರೆಯಲಾಗಿದೆ.)

ಹೀಗೆ ತಾತ್ತ್ವಿಕವಾಗಿ ಉತ್ಪಾದನೆಯ ಅನುವು ವೆಚ್ಚದ ವಿವೇಚನೆ ಬಲು ಬೋಧಪ್ರದವಾ ಗಿಯೂ ಉಪಯುಕ್ತವಾಗಿಯೂ ಇರುವುದಾದರೂ ಈ ಭಾವನೆಯನ್ನು ಒಂದು ಉದ್ಯಮ ಸಂಸ್ಥೆಯ ಉತ್ಪಾದನೆಯ ವಾಸ್ತವಿಕ ಕ್ಷೇತ್ರದಲ್ಲಿ ಪ್ರಯೋಗಿಸಲು ಯತ್ನಿಸಿದಾಗ ಅನಿವಾರ್ಯ ವಾದ ನಾನಾ ಬಗೆಯ ತೊಡಕುಗಳುದ್ಭವಿಸುವುದು ಸಹಜ. ಆದ್ದರಿಂದ ಈ ಕ್ಷೇತ್ರದಲ್ಲಿ ವ್ಯವಹರಿಸುವಾಗ ಉತ್ಪಾದನೆಯ ಹಣವೆಚ್ಚವನ್ನು ಕುರಿತು ಪರಿಶೀಲನೆ ನಡೆಸುವುದೇ ರೂಢಿ. ಇದೇ ಉದ್ಯಮಿಯ ವೆಚ್ಚ.

ಉದ್ಯಮಿಯ ದೃಷ್ಟಿಯಲ್ಲಿ ಒಂದು ಪದಾರ್ಥದ ಉತ್ಪಾದನೆಯ ವೆಚ್ಚದಲ್ಲಿ ಈ ಅಂಶಗಳಿವೆ: 1. ಕಾರ್ಮಿಕರ ಕೂಲಿ, 2. ಬಂಡವಾಳದ ಮೇಲೆ ಬಡ್ಡಿ, 3. ನೆಲ ಅಥವಾ ಇತರ ಬಗೆಯ ಸ್ವತ್ತನ್ನು ಬಳಸಿದ್ದಕ್ಕೆ ಪ್ರತಿಫಲವಾಗಿ ಅದರ ಮಾಲೀಕರಿಗೆ ಕೊಟ್ಟ ಬಾಡಿಗೆ ಹಾಗೂ ಸಂಭಾವನೆ, 4. ಅಸಿದ್ಧ ಸಾಮಗ್ರಿಯ ವೆಚ್ಚ, 5. ಯಂತ್ರವೇ ಮುಂತಾದವುಗಳ ದುರಸ್ತಿ ಹಾಗೂ ಪ್ರತಿಸ್ಥಾಪನೆಯ ಖರ್ಚು, 6. ಸರಕು ವಿಕ್ರಯ ಮತ್ತು ಜಾಹೀರಾತು ಖರ್ಚು, 7. ಪದಾರ್ಥೋತ್ಪಾದನೆಯಲ್ಲಿ ತೊಡಗಲು ತಯಾರಕನಿಗೆ ಉತ್ತೇಜನ ನೀಡುವಷ್ಟು ಲಾಭ.

ಉದ್ಯಮಿಯ ವೆಚ್ಚವನ್ನು ಇನ್ನೂ ಬೇರೆ ಬಗೆಯಾಗಿ ವಿಶ್ಲೇಷಿಸುವುದು ಸಾಧ್ಯ. ಕಾಲಾವಧಿಯ ದೃಷ್ಟಿಯಿಂದ ಈ ವೆಚ್ಚಗಳನ್ನು ವಿಂಗಡಿಸುವುದು ಒಂದು ವಿಧಾನ. ಉತ್ಪಾದಕನ ಕೆಲವು ವೆಚ್ಚಗಳು ಇತರ ವೆಚ್ಚಗಳಿಗಿಂತ ಹೆಚ್ಚು ಸ್ಥಿರ. ಇವನ್ನು ಬದಲಾಯಿಸಬೇಕಾದರೆ ಹೆಚ್ಚು ಕಾಲ ಹಿಡಿಸುತ್ತದೆ. ಯಂತ್ರಸ್ಥಾವರ. ಮೇಲ್ಮಟ್ಟದ ಆಡಳಿತ ಸಿಬ್ಬಂದಿ ವೆಚ್ಚ ಮುಂತಾದವು ದೀರ್ಘಾವಧಿಯ ವೆಚ್ಚಗಳು. ಆದರೆ ಈ ಚೌಕಟ್ಟನ್ನು ಬದಲಾಯಿಸದೆ ಇದರ ವ್ಯಾಪ್ತಿಯಲ್ಲೇ ತತ್ಕಾಲದಲ್ಲಿ ಒಂದು ಮಿತಿಯವರೆಗೆ ಉತ್ಪತ್ತಿಯನ್ನು ಹೆಚ್ಚಿಸಬಹುದು. ಹೀಗೆ ಅಲ್ಪಾವಧಿಯಲ್ಲಿ ಏರಿಸಿ ತಗ್ಗಿಸಬಹುದಾದ ವೆಚ್ಚಗಳು (ಅಸಿದ್ಧ ಸಾಮಗ್ರಿ, ಕೂಲಿ ಇತ್ಯಾದಿ) ಅಲ್ಪಾವಧಿ ವೆಚ್ಚಗಳು.

ಇದೇ ವಿಚಾರವನ್ನೇ ಇನ್ನಷ್ಟು ಮುಂದುವರಿಸಿ ಉತ್ಪಾದಕನ ವೆಚ್ಚಗಳನ್ನು ಸ್ಥಿರ (ಫಿಕ್ಸೆಡ್) ಹಾಗೂ ವ್ಯತ್ಯಯಕಾರಿ (ವೇರಿಯಬಲ್) ಎಂದು ವಿಂಗಡಿಸುವುದು ಸಾಧ್ಯ. ಉತ್ಪತ್ತಿಯ ಗಾತ್ರಕ್ಕೆ ಅನುಗುಣವಾಗಿ ಹೆಚ್ಚುಕಡಿಮೆಯಾಗುವ ವೆಚ್ಚಗಳು ವ್ಯತ್ಯಯಕಾರಿ (ಉದಾ: ಅಸಿದ್ಧ ಸಾಮಗ್ರಿ, ಕೂಲಿ); ಬದಲಾಗದವು ಸ್ಥಿರವೆಚ್ಚ (ಉದಾ: ಯಂತ್ರಸ್ಥಾವರ, ಕಟ್ಟಡದ ಬಾಡಿಗೆ). ವ್ಯತ್ಯಯಕಾರಿ ವೆಚ್ಚ ಪದಾರ್ಥದ ಉತ್ಪತ್ತಿಗೆ ಮೂಲಭೂತವಾದದ್ದು. ಅದು ಮೂಲ ವೆಚ್ಚ. ಉತ್ಪಾದನೆಯ ಕೆಲಸ ನಡೆದರೆ ಮಾತ್ರ ಈ ಖರ್ಚು. ಸ್ಥಿರವೆಚ್ಚವನ್ನು ಮೇಲುವೆಚ್ಚವೆನ್ನಬಹುದು. ಉತ್ಪಾದನೆಯ ಕಾರ್ಯ ನಡೆಯದಿದ್ದರೂ ಖರ್ಚು ಅನಿವಾರ್ಯ. ಆದರೆ ಒಂದು ವಿಚಾರವನ್ನು ನೆನಪಿನಲ್ಲಿಟ್ಟಿರಬೇಕಾದ್ದು ಅಗತ್ಯ. ಸ್ಥಿರ ಹಾಗೂ ವ್ಯತ್ಯಯಕಾರಿ ವೆಚ್ಚವೆಂಬ ವಿಂಗಡನೆ ಸ್ವಲ್ಪ ದೂರ ಮಾತ್ರ ಸಾಧ್ಯ. ದೀರ್ಘಕಾಲದಲ್ಲಿ ಎಲ್ಲವೂ ವ್ಯತ್ಯಾಸ ಹೊಂದುತ್ತದೆಯೆಂಬುದೇ ಅಬಾಧಿತವಾದ ಸತ್ಯ.

ಉತ್ಪಾದನೆಯ ಪ್ರಕ್ರಿಯೆಯ ದೃಷ್ಟಿಯಿಂದಲೂ ಉದ್ಯಮದೊಡೆಯನ ಉತ್ಪಾದನೆಯ ವೆಚ್ಚವನ್ನು ವಿಂಗಡಿಸಬಹುದಾಗಿದೆ : 1 ಪದಾರ್ಥೋತ್ಪಾದನೆಗೆ ನೇರವಾಗಿ ಸಂಬಂಧಿಸಿದ ವೆಚ್ಚ-ಉತ್ಪಾದನ ವೆಚ್ಚ (ನೋಡಿ-ಉತ್ಪಾದನ-ವೆಚ್ಚ), 2 ಮಾರಾಟ ವೆಚ್ಚ, 3 ಇತರ ವೆಚ್ಚ. 			(ಕೆ.ಆರ್.ಎಂ.)

ಉತ್ಪಾದೀ ವ್ಯಯ
ಭವಿಷ್ಯದಲ್ಲಿ ಆರ್ಥಿಕ ಕಲ್ಯಾಣ ಸಾಧಿಸುವ ಸಾರ್ವಜನಿಕ (ಸರ್ಕಾರಿ) ಖರ್ಚು (ಪ್ರೊಟಕ್ಟಿವ್ ಎಕ್ಸ್‌ಪೆಂಡಿಚರ್). ಸಾರ್ವಜನಿಕ ಹಣವನ್ನು ಯಾವ ಯಾವ ಕಾರ್ಯಗಳಿಗೆ ಖರ್ಚುಮಾಡಬೇಕೆಂಬ ಬಗ್ಗೆ ಕಾಲದಿಂದ ಕಾಲಕ್ಕೆ ಭಾವನೆಗಳು ಬದಲಾಗುತ್ತಿವೆ. ಆಯಾ ಕಾಲದ ದೃಷ್ಟಿಕೋನಗಳಿಗೆ ಅನುಸಾರವಾಗಿ ಉತ್ಪಾದೀ ವ್ಯಯದ ಅರ್ಥವೂ ವ್ಯತ್ಯಾಸಹೊಂದಿದೆ. ಸಾರ್ವಜನಿಕ ಹಣವನ್ನು ಖರ್ಚು ಮಾಡುವ ಅಧಿಕಾರ ಆಯಾ ದೇಶಗಳ ಸರ್ಕಾರಗಳಿಗೆ ಸೇರಿದ್ದು. ಆದರೆ ಸರ್ಕಾರಕ್ಕೆ ಬರುವ ಹಣ ಆ ದೇಶದ ಪ್ರಜೆಗಳಿಂದ ಬರುತ್ತದೆಯಾದ್ದರಿಂದ ಪ್ರತಿಯೊಂದು ದೇಶದಲ್ಲೂ ಸಾರ್ವಜನಿಕ ಹಣವನ್ನು ವೆಚ್ಚ ಮಾಡುವಾಗ ಕೆಲವು ತತ್ತ್ವಗಳನ್ನು ಪಾಲಿಸಬೇಕೆಂಬುದು ಎಲ್ಲ ದೇಶಗಳಲ್ಲೂ ವ್ಯಕ್ತವಾಗಿರುವ ಅಭಿಪ್ರಾಯ. ಈ ತತ್ವ್ತಗಳನ್ನು ಪಾಲಿಸದಿದ್ದರೆ ಹಣ ವ್ಯರ್ಥವಾಗಿ ದೇಶದ ಪ್ರಜೆಗಳಿಗೆ ಅದರಿಂದ ಉಪಯೋಗವಾಗುವ ಬದಲು, ಅನಾಹುತವೇ ಸಂಭವಿಸೀತೆಂಬುದು ತಜ್ಞರ ಅಭಿಪ್ರಾಯ. ಸಾರ್ವಜನಿಕ ಮುಂದಾಳುಗಳೂ ರಾಜಕೀಯ ನಾಯಕರೂ ಅರ್ಥಶಾಸ್ತ್ರಜ್ಞರೂ ಸಾರ್ವಜನಿಕ ಹಣವನ್ನು ಖರ್ಚುಮಾಡಲು ಅನುಸರಿಸಬೇಕಾದ ನಿಯಮಗಳನ್ನು ಆಗಿಂದಾಗ್ಗೆ ಪ್ರತಿಪಾದಿಸಿದ್ದಾರೆ.

ಉತ್ಪಾದೀ ವ್ಯಯವನ್ನು ಫಲದಾಯಕ ವ್ಯಯವೆಂದೂ ಕರೆಯಬಹುದು. 18-19ನೆಯ ಶತಮಾನಗಳಲ್ಲಿ ಯುರೋಪಿನ ಕೆಲವು ಸರ್ಕಾರಗಳು ಸಾರ್ವಜನಿಕ ಹಣವನ್ನು ತಮ್ಮ ಮನಬಂದಂತೆ ಖರ್ಚು ಮಾಡುತ್ತಿದ್ದುವು. ಇಂಥ ಮನೋಭಾವವನ್ನು ಕೆಲವು ಅರ್ಥಶಾಸ್ತ್ರಜ್ಞರು ಖಂಡಿಸಿ, ಸಾರ್ವಜನಿಕ ಹಣದ ವ್ಯಯದಿಂದ ಸಾಕಷ್ಟು ಪ್ರತಿಫಲ ದೊರೆಯಬೇಕೆಂದು ಪ್ರತಿಪಾದಿಸಲು ಪ್ರಾರಂಭಿಸಿದರು.
ಹಿಂದಿನ ಕಾಲದಲ್ಲಿ ಪ್ರತಿ ದೇಶದಲ್ಲೂ ಸರ್ಕಾರ ನಿರ್ವಹಿಸಬೇಕಾದ ಕರ್ತವ್ಯಗಳು ಬಹಳ ಮಿತವಾಗಿದ್ದುವು. 1 ಶತ್ರುಗಳ ಆಕ್ರಮಣದಿಂದ ದೇಶದ ರಕ್ಷಣೆ, 2 ದೇಶದ ಒಳಗಡೆ ಶಾಂತಿಪಾಲನೆ ಮತ್ತು 3 ನ್ಯಾಯಾಂಗ ವ್ಯವಸ್ಥೆಯ ನಿರ್ಮಾಣ ಹಾಗೂ ನ್ಯಾಯಪಾಲನೆ-ಈ ಮೂರು ಕರ್ತವ್ಯಗಳನ್ನು ಸರ್ಕಾರ ನಿರ್ವಹಿಸಿದರೆ ಸಾಕೆಂಬ ಭಾವನೆಯಿತ್ತು. ಇವನ್ನು ಸರ್ಕಾರ ಸಾಧಿಸಿದರೆ ದೇಶದಲ್ಲಿ ನೆಮ್ಮದಿ ನೆಲೆಸಿ ಪ್ರಜೆಗಳು ಆರ್ಥಿಕ ಪ್ರಗತಿಯಲ್ಲಿ ತೊಡಗಲು ಸಾಧ್ಯವಾಗುತ್ತದೆಯೆಂಬುದಾಗಿ ಆಗ ನಂಬಲಾಗಿತ್ತು. ಈ ಕರ್ತವ್ಯಗಳನ್ನು ನಿರ್ವಹಿಸಬೇಕಾದರೆ ಸರ್ಕಾರಕ್ಕೆ ಎಷ್ಟು ಹಣ ಬೇಕೋ ಅಷ್ಟನ್ನು ಮಾತ್ರ ವ್ಯಯಮಾಡಬೇಕೆಂದು ಅನೇಕ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ್ದರು. ಇವನ್ನು ಬಿಟ್ಟು ಬೇರೆ ಕಾರ್ಯಗಳಿಗೆ ಸರ್ಕಾರ ಸಾರ್ವಜನಿಕ ಹಣವನ್ನು ವ್ಯಯ ಮಾಡಿದರೆ ಅದು ಸಂಪೂರ್ಣ ವ್ಯರ್ಥವೆಂಬುದು ಆಗಿನ ಕಾಲದ ಭಾವನೆ. ಆದರೆ ಈಗ ಸರ್ಕಾರದ ವೆಚ್ಚ ಊಹಿಸಲಾರದಷ್ಟು ದಿಕ್ಕುಗಳಲ್ಲಿ ವ್ಯಾಪಿಸಿದೆ. ಜನರಿಗೆ ಸಕಲ ಸೌಕರ್ಯಗಳನ್ನೂ ಒದಗಿಸಲೇಬೇಕಾದ್ದು ಇಂದು ಸರ್ಕಾರದ ಕರ್ತವ್ಯ. ಸಾರ್ವಜನಿಕ ಆರೋಗ್ಯ, ವಿದ್ಯಾಭ್ಯಾಸ, ಕಾರ್ಮಿಕ ಕ್ಷೇಮಾಭ್ಯುದಯ, ಹಿಂದುಳಿದ ವರ್ಗದವರಿಗೆ ಪ್ರೋತ್ಸಾಹ, ಸಾಮಾಜಿಕ ಭದ್ರತೆ-ಇವನ್ನೆಲ್ಲ ಸಾಧಿಸುವುದು ಈಗಿನ ಸರ್ಕಾರಗಳ ಕರ್ತವ್ಯ. ಹಿಂದಿನ ಕಾಲದಲ್ಲಿ ಇಂಥ ಬಾಬುಗಳ ಮೇಲಿನ ವೆಚ್ಚವನ್ನು ಫಲದಾಯಕವಲ್ಲದ ವೆಚ್ಚವೆಂದು ಭಾವಿಸಿ ಟೀಕಿಸಲಾಗುತ್ತಿತ್ತು. ಆದರೆ ಇಂದು ಇವೆಲ್ಲ ಉತ್ಪಾದೀ ವ್ಯಯಗಳು.

ಇಪ್ಪತ್ತನೆಯ ಶತಮಾನ ಪ್ರಾರಂಭವಾದ ಮೇಲೆ ಅದರಲ್ಲೂ ಮೊದಲನೆಯ ಮಹಾಯುದ್ದವಾದ ಮೇಲೆ ಅರ್ಥಶಾಸ್ತ್ರಜ್ಞರ ಮತ್ತು ರಾಜಕೀಯ ನಿಪುಣರ ದೃಷ್ಟಿಕೋನವೇ ಬದಲಾಯಿಸಿದೆ. ಹಿಂದೆ ಯಾವುದನ್ನು ಫಲದಾಯಕವಲ್ಲದ ವೆಚ್ಚ ಎಂದು ಭಾವಿಸಿದ್ದರೋ ಅವುಗಳನ್ನು ಈಗ ಫಲದಾಯಕವಾದ ಅಥವಾ ಉತ್ಪಾದೀ ವೆಚ್ಚ ಎಂದು ಕರೆಯಲು ಆರಂಭಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ವಿದ್ಯಾಭ್ಯಾಸ ಬಾಬುಗಳ ಮೇಲೆ ವೆಚ್ಚ ಮಾಡುವುದರಿಂದ ದೇಶದ ಜನರ ಸಂಪತ್ತು ಅಭಿವೃದ್ದಿಗೊಂಡು ಆರ್ಥಿಕಪ್ರಗತಿಗೆ ಸಹಾಯವಾಗುವುದು ಎಂದು ಎಲ್ಲ ದೇಶಗಳಲ್ಲೂ ಅಭಿಪ್ರಾಯಪಡಲಾಗಿದೆ. ಹಿಂದುಳಿದ ದೇಶಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ ಆ ದೇಶಗಳಲ್ಲಿ ಸರ್ಕಾರಗಳು ತಾವೆ ಮುತುವರ್ಜಿ ವಹಿಸಿ ಆರೋಗ್ಯ, ವಿದ್ಯಾಭ್ಯಾಸ, ಕಾರ್ಮಿಕ ಕ್ಷೇಮಾಭ್ಯುದಯ ಇತ್ಯಾದಿ ಬಾಬುಗಳ ಮೇಲೆ ಖರ್ಚು ಮಾಡುವುದೇ ಅಲ್ಲದೆ, ಖಾಸಗಿಯವರು ಸ್ಥಾಪಿಸಲು ಸಾಧ್ಯವಿಲ್ಲದ ಮೂಲಭೂತ ಕೈಗಾರಿಕೆಗಳನ್ನೂ ಸ್ಥಾಪಿಸಬೇಕು, ಆರ್ಥಿಕ ರಂಗದಲ್ಲಿ ಅತ್ಯಾವಶ್ಯಕವಾದ ಮುಂದಾಳುತನದ ಕೆಲಸ ನಿರ್ವಹಿಸಬೇಕು ಎಂದು ಪ್ರತಿಪಾದಿಸಲಾಗಿದೆ. ಇಂಥ ಖರ್ಚುಗಳನ್ನೆಲ್ಲ ಉತ್ಪಾದೀ ಖರ್ಚು ಎಂದು ಭಾವಿಸಲಾಗಿದೆ.

ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಾದರೆ, ಇಂಥದು ಉತ್ಪಾದೀ ವ್ಯಯ, ಇಂಥದ್ದು ಅಲ್ಲ ಎಂದು ನಿರ್ದಿಷ್ಟವಾಗಿ ಹೇಳುವುದು ಇಂದು ಸಾಧ್ಯವಿಲ್ಲ. ಈಗಿನ ಕಾಲದಲ್ಲಿ ಪ್ರತಿಯೊಂದು ರೀತಿಯ ಸಾರ್ವಜನಿಕ ವ್ಯಯವೂ ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಆರ್ಥಿಕ ಕ್ಷೇತ್ರದಲ್ಲಿ ಫಲದಾಯಕವಾಗಿ ಪರಿಣಮಿಸುತ್ತದೆ. ಆದ್ದರಿಂದಲೇ ಆಧುನಿಕ ಅರ್ಥಶಾಸ್ತ್ರಜ್ಞರು ಸಾರ್ವಜನಿಕ ವ್ಯಯದಲ್ಲಿ ಇಂಥ ವಿಭಜನೆಯನ್ನು ಒಪ್ಪುವುದಿಲ್ಲ. ಅವರು ಇದನ್ನು ಕುರಿತು ದೀರ್ಘವಾಗಿ ಚರ್ಚಿಸಲೂ ಹೋಗುವುದಿಲ್ಲ.				(ಎನ್.ಪಿ.ಎಸ್.)

ಉತ್ಪಾದೀ ಶ್ರಮ
ಸಂಪತ್ತಿನ ಉತ್ಪಾದನೆಗೆ ಕಾರಣವಾದ ದುಡಿಮೆ (ಪ್ರೊಡಕ್ಟಿವ್ ಲೇಬರ್). ಅರ್ಥಶಾಸ್ತ್ರಜ್ಞರಲ್ಲಿ ಉತ್ಪಾದೀ ಶ್ರಮವೆಂಬ ಪದ ಬಹಳ ಹಿಂದೆಯೇ ಬಂದಿತ್ತು. ಮೊಟ್ಟಮೊದಲಿಗೆ ಈ ಪದವನ್ನು ಬಳಸಿದವರು 18ನೆಯ ಶತಮಾನದ ಫ್ರೆಂಚ್ ಪ್ರಕೃತಿ ಪ್ರಾಧಾನ್ಯವಾದಿಗಳು (ಫಿಸಿಯೋಕ್ರ್ಯಾಟ್ಸ್‌). ಇವರ ದೃಷ್ಟಿಯಲ್ಲಿ ವ್ಯವಸಾಯವೊಂದೇ ಫಲದಾಯಕ. ವ್ಯವಸಾಯದಲ್ಲಿ ವಿನಿಯೋಗಿಸಲಾದ ಶ್ರಮವನ್ನು ಉತ್ಪಾದೀ ಶ್ರಮವೆಂದೂ ಕೈಗಾರಿಕೆ, ವಾಣಿಜ್ಯ, ಮುಂತಾದ ಇತರ ಕ್ಷೇತ್ರಗಳಲ್ಲಿನ ಶ್ರಮವನ್ನು ಅನುತ್ಪಾದೀ ಶ್ರಮವೆಂದೂ ಅವರು ಸಾರಿದರು. ಆದರೆ ಕ್ರಮೇಣ ಸಿದ್ಧವಸ್ತುಗಳ ತಯಾರಕರ ಶ್ರಮವನ್ನೂ ಉತ್ಪಾದೀ ಶ್ರಮದಲ್ಲಿ ಸೇರಿಸಲಾಯಿತು.

ವಸ್ತುಗಳ ಮೌಲ್ಯವನ್ನು ಹೆಚ್ಚಿಸದ ದುಡಿಮೆ ಉತ್ಪಾದೀ ಶ್ರಮವಾಗಲಾರದೆಂಬುದು ಆಡಂ ಸ್ಮಿತ್ ಹಾಗೂ ಆತನ ಕಾಲದ ಇತರ ಅರ್ಥಶಾಸ್ತ್ರಜ್ಞರ ಭಾವನೆಯಾಗಿತ್ತು. ಸಂಗೀತಗಾರ, ನಟ, ಸೈನಿಕ, ವಕೀಲ, ಅಧ್ಯಾಪಕ ಮುಂತಾದವರ ಸೇವೆಗಳು ಈ ದೃಷ್ಟಿಯಿಂದ ಉತ್ಪಾದೀ ಶ್ರಮಗಳಲ್ಲ.

ಆಧುನಿಕ ಅರ್ಥಶಾಸ್ತ್ರಜ್ಞರು ಉತ್ಪಾದೀ ಶ್ರಮ ಮತ್ತು ಅನುತ್ಪಾದೀ ಶ್ರಮಗಳಲ್ಲಿನ ವ್ಯತ್ಯಾಸವನ್ನು ತೆಗೆದುಹಾಕಿ ಮೂರ್ತವಸ್ತುಗಳನ್ನು ಹಾಗೂ ಅಮೂರ್ತ ಸೇವೆಗಳನ್ನು ಉತ್ಪಾದಿಸುವ ಶ್ರಮಗಳೆರಡನ್ನೂ ಉತ್ಪಾದೀ ಶ್ರಮವೆಂದೇ ಪರಿಗಣಿಸಿದ್ದಾರೆ. ಸಾರಿಗೆ ಕೆಲಸಗಾರರು, ವ್ಯಾಪಾರೋದ್ಯಮಿಗಳ ಪ್ರತಿನಿಧಿಗಳು, ಬ್ಯಾಂಕ್ ನೌಕರರು ಮೊದಲಾದ ಶ್ರಮಜೀವಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸುವ ಶ್ರಮವೂ ಕೈಗಾರಿಕೋದ್ಯಮಗಳಲ್ಲಿ ಬುದ್ಧಿ ಶಕ್ತಿಯನ್ನೊದಗಿಸುವ ಉದ್ಯಮ ಚಾಲಕರ, ಯಂತ್ರ ನಿರ್ಮಾಪಕರ, ವ್ಯವಸ್ಥಾಪಕರ ಹಾಗೂ ಆಡಳಿತಗಾರರ ಶ್ರಮವೂ ಕಚ್ಚಾ ಸಾಮಗ್ರಿಗಳನ್ನು ಬೆಳೆಯುವವರ ಮತ್ತು ಕೈಗಾರಿಕಾ ಉಪಕರಣ ತಯಾರಕರ ಶ್ರಮದಷ್ಟೇ ಮುಖ್ಯವಾದದ್ದೆಂದು ತೋರಿಸಿದ್ದಾರೆ.

ಮೇಲೆ ಹೇಳಿದ ರೀತಿಯಲ್ಲಿ ಉತ್ಪಾದೀ ಶ್ರಮವನ್ನು ವಿವರಿಸುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಹಲವು ವೇಳೆ ಶ್ರಮದ ಉದ್ದೇಶ ಸಫಲವಾಗದಿರಬಹುದು. ವಸ್ತು (ಮೂರ್ತ) ಹಾಗೂ ಸೇವೆ (ಅಮೂರ್ತ) ಗಳಲ್ಲಿ ಉಪಯುಕ್ತತೆಯನ್ನು ಸೃಷ್ಟಿಸುವ ಉದ್ದೇಶ ಇದ್ದೂ ಶ್ರಮ ಸಫಲವಾಗದಿರಬಹುದು. ಪನಾಮಾ ಕಾಲುವೆಯ ನಿರ್ಮಾಣದಲ್ಲಿ ಮೊಟ್ಟಮೊದಲು ತೊಡಗಿದಾಗ ಅದರಲ್ಲಿ ವಿನಿಯೋಗಿಸಿದ ಶ್ರಮ ಸಫಲವಾಗಲಿಲ್ಲ; ಮತ್ತೆ ಆ ಕೆಲಸದಲ್ಲಿ ತೊಡಗಿದಾಗ ಅದನ್ನು ಸಾಧಿಸುವುದಕ್ಕೆ ಮತ್ತೆ ಶ್ರಮ ಬಳಸಿಕೊಳ್ಳಲಾಯಿತು. ಮೊದಲ ಸಲ ಉಪಯೋಗಿಸಿದ್ದು ವ್ಯರ್ಥಶ್ರಮ. ಮಾರ್ಷಲ್ ಹೇಳಿರುವ ಹಾಗೆ ಇಂಥ ವ್ಯರ್ಥವಾದ ಹಾಗೂ ತಪ್ಪು ದಾರಿಯಲ್ಲಿ ವಿನಿಯೋಗಿಸಲಾದ ಶ್ರಮವನ್ನು ಅನುತ್ಪಾದೀ ಶ್ರಮವೆಂದು ಪರಿಗಣಿಸಬೇಕು.

ಅಂತೆಯೇ ಹಡಗು ಕಳ್ಳರು, ದರೋಡೆಕೋರರು, ಕಳ್ಳಕಾಕರು, ಜೂಜುಕೋರರು ಮುಂತಾದ ಸಮಾಜಘಾತಕ ವ್ಯಕ್ತಿಗಳ ಶ್ರಮವನ್ನೂ ಅನುತ್ಪಾದೀ ಶ್ರಮವೆಂದೇ ಹೇಳಬೇಕು. ಆದರೆ ಅಳಲೆಕಾಯಿ ಪಂಡಿತ, ಮದ್ಯ ತಯಾರಕ, ಅಶ್ಲೀಲ ಸಾಹಿತ್ಯ ಲೇಖಕ-ಇವರ ಶ್ರಮವನ್ನೂ ಉತ್ಪಾದೀ ಶ್ರಮವೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ಇವರ ಸೇವೆಯ ಫಲವನ್ನು ಹಣ ಕೊಟ್ಟು ಕೊಳ್ಳುವವರಿದ್ದಾರೆ. ನೀತಿ-ಅನೀತಿ ಪ್ರಶ್ನೆ ಅರ್ಥಶಾಸ್ತ್ರದ ವ್ಯಾಪ್ತಿಯೊಳಕ್ಕೆ ಬರುವುದಿಲ್ಲ. ವಿಮಾಕೆಲಸಗಾರರ ಮತ್ತು ಸಮರ್ಥರಾದ ಸಣ್ಣ ವ್ಯಾಪಾರಿಗಳ ಶ್ರಮವೂ ಉತ್ಪಾದೀ ಶ್ರಮವೇ. ಶ್ರಮಿಕರ ದೃಷ್ಟಿಯಲ್ಲಿ ಉಪಯುಕ್ತತೆ ಹೊಂದಿರುವ ಚಟುವಟಿಕೆಗಳನ್ನೆಲ್ಲ ಉತ್ಪಾದೀ ಶ್ರಮವೆಂದು ಹೇಳಬಹುದು. ಆದರೆ ನ್ಯಾಯಸಮ್ಮತವಲ್ಲದ ಸಟ್ಟಾವ್ಯಾಪಾರಿಗಳ ಶ್ರಮ ಹಾಗೂ ಶಿಕ್ಷಾರ್ಹ ಚಟುವಟಿಕೆಗಳು ಮಾತ್ರ ಉತ್ಪಾದೀ ಶ್ರಮ ಆಗಲಾರವು.	(ಎಸ್.ಎನ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ